ವಿಜಯಪುರದಲ್ಲಿ ಚುನಾವಣಾ ಸಿಬ್ಬಂದಿ ಮಕ್ಕಳ ಆರೈಕೆಗಾಗಿ ಕೇಂದ್ರ: ಕರ್ನಾಟಕದಲ್ಲೇ ಪ್ರಥಮ..!

By Kannadaprabha News  |  First Published May 7, 2024, 9:28 AM IST

ವಿಜಯಪುರ ಡಿಸಿ ಟಿ.ಭೂಬಾಲನ್ ಅವರ ವಿಶೇಷ ಕಾಳಜಿ ಹಾಗೂ ನಿರ್ದೇಶನದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮಸ್ಟರಿಂಗ್ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ವಿನೂತನ ಪ್ಲ್ಯಾನ್, ಸಾಕಷ್ಟು ಮಹಿಳಾ ಸಿಬ್ಬಂದಿಗೆ ಅನುಕೂಲವಾಗುತ್ತಿದೆ. ಚುನಾವಣಾ ಇತಿಹಾಸದಲ್ಲಿಯೇ ವಿನೂತನ ಪ್ರಯೋಗಕ್ಕೆ ಹೊಸ ಭಾಷ್ಯ ಬರೆದಂತಾಗಿದೆ.


ಶಶಿಕಾಂತ ಮೆಂಡೆಗಾರ

ವಿಜಯಪುರ(ಮೇ.07):  ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ಸಿಬ್ಬಂದಿಯ ಮಕ್ಕಳನ್ನು ಕರ್ತವ್ಯ ಮುಗಿಯುವವರೆಗೆ ಆರೈಕೆ ಮಾಡಲು, ಅವರ ಕಾಳಜಿಗಾಗಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿಶುಪಾಲನಾ ಕೇಂದ್ರ ತೆರೆಯುವ ಮೂಲಕ ಸಿಬ್ಬಂದಿ ತಾಯಂದಿರ ಆತಂಕ ದೂರ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

Latest Videos

undefined

ವಿಜಯಪುರ ಡಿಸಿ ಟಿ.ಭೂಬಾಲನ್ ಅವರ ವಿಶೇಷ ಕಾಳಜಿ ಹಾಗೂ ನಿರ್ದೇಶನದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮಸ್ಟರಿಂಗ್ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ವಿನೂತನ ಪ್ಲ್ಯಾನ್, ಸಾಕಷ್ಟು ಮಹಿಳಾ ಸಿಬ್ಬಂದಿಗೆ ಅನುಕೂಲವಾಗುತ್ತಿದೆ. ಚುನಾವಣಾ ಇತಿಹಾಸದಲ್ಲಿಯೇ ವಿನೂತನ ಪ್ರಯೋಗಕ್ಕೆ ಹೊಸ ಭಾಷ್ಯ ಬರೆದಂತಾಗಿದೆ.
ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಯ ಮಕ್ಕಳನ್ನು ಈ ಶಿಶುಪಾಲನಾ ಕೇಂದ್ರಗಳಲ್ಲಿ ಉಳಿಸಿಕೊಂಡು ಸರಿಯಾದ ಸಮಯಕ್ಕೆ ಊಟ, ಆಹಾರ ನೀಡಿ ಸಂತೈಸಿ, ಮನರಂಜನೆಗಾಗಿ ಆಟದ ವಸ್ತುಗಳನ್ನು ನೀಡಿ ತಾಯಂದಿರ ಕೊರತೆಯನ್ನು ದೂರು ಮಾಡುವ ಪ್ರಯತ್ನ ಇದಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಪ್ರಥಮ ಬಾರಿಗೆ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿರುವುದಕ್ಕೆ ರಾಜ್ಯಾದ್ಯಂತ ಶ್ಲಾಘನೆಯ ಮಹಾಪೂರವೇ ಹರಿದು ಬಂದಿದೆ.

ಲೋಕಸಭಾ ಚುನಾವಣೆ 2024: ಮತದಾರರನ್ನ ಸೆಳೆಯಲು ವಿವಿಧ ಥೀಮ್‌ಗಳ ಮತಗಟ್ಟೆ ನಿರ್ಮಾಣ

ಮಕ್ಕಳಿಗಿದೆ ಸಕತ್‌ ಮೆನು:

ಜಿಲ್ಲೆಯ 8 ವಿಧಾನಸಭಾ ಮಸ್ಟರಿಂಗ್ ಕೇಂದ್ರಗಳಲ್ಲಿನ ಶಿಶುಪಾಲನಾ ಕೇಂದ್ರಗಳಲ್ಲಿ 10 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡಲು ಸಕಲ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ನೋಡಿಕೊಳ್ಳಲು ಪ್ರತಿ ಕೇಂದ್ರದಲ್ಲೂ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರು, ಇಬ್ಬರು ಸಹಾಯಕಿಯರು ಹಾಗೂ ಇಬ್ಬರು ಶಿಶುಪಾಲನಾ ಶಿಕ್ಷಕಿಯರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಮಕ್ಕಳ ಮನರಂಜನೆಗಾಗಿ ವಿವಿಧ ಬಗೆಯ ಆಟಿಕೆ ಸಾಮಗ್ರಿಗಳನ್ನು ಇಡಲಾಗಿದೆ.
ಕೇಂದ್ರದಲ್ಲಿರುವ ಮಕ್ಕಳಿಗೆ ಹಾಲು, ಬಿಸ್ಕತ್, ಹಣ್ಣಿನ ವ್ಯವಸ್ಥೆಯನ್ನು ಮಾಡಲಾಗಿದೆ. ಊಟಕ್ಕಾಗಿ ರಾಗಿ ಗಂಜಿ, ಅನ್ನ-ಬೇಳೆಯಿಂದ ತಯಾರಿಸಿದ ಕಿಚಡಿ, ಉಪ್ಪಿಟ್ಟು, ಮೊಳಕೆ ಕಾಳು, ಅನ್ನ-ಸಾರು, ಮೊಟ್ಟೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಶುಚಿತ್ವಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಲಾಗಿದೆ.

ಮೇ 6ರ ಬೆಳಗ್ಗೆಯಿಂದ ಮೇ 7ರ ರಾತ್ರಿಯವರೆಗೆ ಪ್ರತಿ ಮಸ್ಟರಿಂಗ್ ಸೆಂಟರ್‌ನಲ್ಲಿ ಈ ಶಿಶುಪಾಲನಾ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಕರ್ತವ್ಯನಿರತ ಸಿಬ್ಬಂದಿ ತಮ್ಮ ಮಕ್ಕಳನ್ನು ತಂದು ಇಲ್ಲಿಗೆ ಬಿಡಬಹುದಾಗಿದೆ.
ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕೆಂದಾಗ ಬಹುತೇಕ ಮಹಿಳಾ ನೌಕರರು ತಮ್ಮ ಮಕ್ಕಳದ್ದೇ ಸಮಸ್ಯೆ ಎಂದು ಹೇಳುತ್ತಿದ್ದರು. ಇದನ್ನು ಗಮನಿಸಿ ಏನಾದರೂ ಒಂದು ವ್ಯವಸ್ಥೆ ಮಾಡಬೇಕೆಂದು ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿ ಶಿಶುಪಾಲನಾ ಕೇಂದ್ರ ತೆರೆಯುವ ನಿರ್ಧಾರಕ್ಕೆ ಬಂದೆವು. ಸಾಕಷ್ಟು ಸಿಬ್ಬಂದಿ ಮಕ್ಕಳಿಗೆ ನೆರವು ನೀಡುವ ಮೂಲಕ ಸಹಾಯವಾಗಿರುವ ಈ ಪ್ಲ್ಯಾನ್ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಾಡಿದ ಪ್ರಯೋಗ ಎಂದು ವಿಜಯಪುರ ಡಿಸಿ ಟಿ.ಭೂಬಾಲನ್ ತಿಳಿಸಿದ್ದಾರೆ. 

Lok Sabha Elections 2024: ರಾಜ್ಯದಲ್ಲಿಂದು 2ನೇ ಹಂತದ ಲೋಕಸಭೆ ಸಮರ

ಮಹಿಳಾ ಸಿಬ್ಬಂದಿಯ 10 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶಿಶುಪಾಲನಾ ಕೇಂದ್ರಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳ ಆಕರ್ಷಣೆಗಾಗಿ ಕೊಠಡಿ ತುಂಬೆಲ್ಲ ಬಲೂನ್ ಡೆಕೊರೇಷನ್ ಹಚ್ಚಿ, ಆಟಿಕೆಗಳನ್ನು ಇಡಲಾಗಿದೆ. ಮಕ್ಕಳಿಗೆ ಹಾಲು, ಬಿಸ್ಕತ್, ಬಿಸಿ ಬಿಸಿ ಆಹಾರದ ವ್ಯವಸ್ಥೆ ಮಾಡಿದ್ದೇವೆ ಎಂದು ವಿಜಯಪುರ ಸಿಡಿಪಿಒ ಬಸವರಾಜ ಜಿಗಳೂರ ಹೇಳಿದ್ದಾರೆ. 

ವಿಜಯಪುರದ ಸೈನಿಕ ಶಾಲೆಯಲ್ಲಿರುವ ಮಸ್ಟರಿಂಗ್ ಕೇಂದ್ರದಲ್ಲಿ ವಿಜಯಪುರ ನಗರ, ನಾಗಠಾಣ ಕ್ಷೇತ್ರಗಳ ಸಿಬ್ಬಂದಿಗೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬಬಲೇಶ್ವರ, ಇಂಡಿ, ಸಿಂದಗಿ, ದೇವರಹಿಪ್ಪರಗಿ, ಮುದ್ದೇಬಿಹಾಳ, ಬಸವನಬಾಗೇವಾಡಿ ತಾಲೂಕು ಕೇಂದ್ರಗಳಲ್ಲಿನ ಮಸ್ಟರಿಂಗ್ ಸೆಂಟರ್‌ಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ತಿಳಿಸಿದ್ದಾರೆ. 

click me!