ರೀ ಸರ... ಎಪ್ಪಾ ಮಗನ...ನನ್ ಆಧಾರ ಕಾರ್ಡ್ ತಿದ್ದುಪಡಿ ಮಾಡ್ಸಿ ಕೊಡ್ಸಪಾ... ನಿನಗ ಭಾಳ ಪುಣ್ಯಾ ಬರ್ತೈತಿ. ಒಂದು ವಾರದಿಂದಾ ಬರಾಕತ್ತೀನಿ ಇವತ್ ಟೋಕನ್ ಸಿಕೈತಿ. 27ಕ್ಕ ಬಾ ಅಂತಾರು. ಈ ಮಳ್ಯಾಗ ಹ್ಯಾಂಗ್ ಹೊಳ್ಳಿ ಬರ್ಲಿ, ನೀನರಾ ಹೇಳಿ ನನ್ನ ಆಧಾರ ಕಾರ್ಡ್ ತಿದ್ದುಪಡಿ ಮಾಡ್ಸಿ ಕೊಡ್ಸಪಾ....
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ (ಜು.21) : ರೀ ಸರ... ಎಪ್ಪಾ ಮಗನ...ನನ್ ಆಧಾರ ಕಾರ್ಡ್ ತಿದ್ದುಪಡಿ ಮಾಡ್ಸಿ ಕೊಡ್ಸಪಾ... ನಿನಗ ಭಾಳ ಪುಣ್ಯಾ ಬರ್ತೈತಿ. ಒಂದು ವಾರದಿಂದಾ ಬರಾಕತ್ತೀನಿ ಇವತ್ ಟೋಕನ್ ಸಿಕೈತಿ. 27ಕ್ಕ ಬಾ ಅಂತಾರು. ಈ ಮಳ್ಯಾಗ ಹ್ಯಾಂಗ್ ಹೊಳ್ಳಿ ಬರ್ಲಿ, ನೀನರಾ ಹೇಳಿ ನನ್ನ ಆಧಾರ ಕಾರ್ಡ್ ತಿದ್ದುಪಡಿ ಮಾಡ್ಸಿ ಕೊಡ್ಸಪಾ....
ಇದು ಗುರುವಾರ ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಆಧಾರ್ ಸೇವಾ ಕೇಂದ್ರದ ಎದುರು ಸುರಿಯುವ ಮಳೆಯಲ್ಲಿ ಇಲ್ಲಿನ ಮಂಟೂರು ಭಾಗದ ಉಜಿನವ್ವ ಎಂಬ ವೃದ್ಧೆ ಆಧಾರ ಕೇಂದ್ರದ ಸಿಬ್ಬಂದಿಗಳೊಂದಿಗೆ ಮಳೆಯಲ್ಲಿ ನಡಗುತ್ತಾ ಹೇಳಿದ ಮಾತುಗಳಿವು.
ಗೃಹಲಕ್ಷ್ಮಿಗೆ ಕೋಟೆ ನಾಡಲ್ಲಿ ಆರಂಭದಲ್ಲಿಯೇ ವಿಘ್ನ!
ಟೋಕನ್‌ಗಾಗಿ ಸಾವಿರಾರು ಜನ:
ಆಧಾರ್ ಸೇವಾ ಕೇಂದ್ರ(Adhar seva kendra)ಕ್ಕೆ ಮೊದಮೊದಲು ಹೊಸ ಆಧಾರ್ ಕಾರ್ಡ್, ತಿದ್ದುಪಡಿ, ಸೇರ್ಪಡೆಗಾಗಿ ಬೆರಳೆಣಿಕೆ ಜನರು ಆಗಮಿಸುತ್ತಿದ್ದರು. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇ ತಡ ಈಗ ಸೇವಾ ಕೇಂದ್ರಗಳು ಜನರಿಂದ ತುಂಬಿ ಹೋಗಿವೆ. ಸುರಿಯುವ ಮಳೆಯಲ್ಲಿಯೇ ಆಧಾರ್ ಕೇಂದ್ರಕ್ಕೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ದಾಂಗುಡಿ ಇಡುತ್ತಿದ್ದಾರೆ.
ಕುಟುಂಬಕ್ಕೊಂದೇ ಟೋಕನ್:
ಆಧಾರ್ ಸೇವಾ ಕೇಂದ್ರದಲ್ಲಿ ಒಂದು ಕುಟುಂಬಕ್ಕೆ ಒಂದೇ ಟೋಕನ್ ನೀಡಲಾಗುತ್ತಿದೆ. ಇದರಲ್ಲಿ ಕುಟುಂಬದ ಎಷ್ಟೇ ಜನರ ತಿದ್ದುಪಡಿ ಇರಲಿ ಅದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಕಳೆದ 3-4 ದಿನಗಳಿಂದ ಸೇರುತ್ತಿರುವ ಹೆಚ್ಚಿನ ಜನಸಂದಣಿಯಿಂದ ಸಿಬ್ಬಂದಿಗಳು ತೊಂದರೆ ಅನುಭವಿಸುವಂತಾಗಿದೆ. ನಿತ್ಯ 250 ಜನರಿಗೆ ಆಧಾರ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ, ಇದರ 5-6 ಪಟ್ಟು ಜನರು ಬರುತ್ತಿದ್ದಾರೆ. ಇವರಿಗೆ ಹೇಳಿ ಕಳಿಸುವುದರಲ್ಲಿ ಸಾಕಾಗಿ ಹೋಗುತ್ತಿದೆ ಎಂದು ಇಲ್ಲಿನ ಸಿಬ್ಬಂದಿ ಅಳಲು ತೋಡಿಕೊಂಡರು.
ವಾರಕ್ಕೆ 5 ದಿನ ಟೋಕನ್:
ವಾರದ ಏಳು ದಿನಗಳಲ್ಲಿ ಶನಿವಾರ ಮತ್ತು ಭಾನುವಾರ ಹೊರತು ಪಡಿಸಿ ಇನ್ನುಳಿದ 5 ದಿನಗಳ ವರೆಗೆ ಮಾತ್ರ ಟೋಕನ್ ನೀಡುವ ವ್ಯವಸ್ಥೆಯಿದೆ. ನಿತ್ಯವೂ ಬೆಳಗ್ಗೆ 9ರಿಂದ 10 ಗಂಟೆಯವರೆಗೆ ಮಾತ್ರ ಟೋಕನ್ ನೀಡಲಾಗುತ್ತಿದೆ. ಆದರೆ, ಈ ಟೋಕನ್ ಪಡೆಯಲು ಜನರು ಬೆಳಗ್ಗೆ 4 ಗಂಟೆಗೆ ಬಂದು ನಿಲ್ಲುತ್ತಿದ್ದಾರೆ. ಇನ್ನು ಕಳೆದ 3-4 ದಿನಗಳಿಂದ ದಿನವಿಡೀ ಸುರಿಯುತ್ತಿರುವ ಮಳೆಯಲ್ಲಿಯೇ ಕೊಡೆ ಹಿಡಿದು ಸರದಿಯಲ್ಲಿ ನಿಂತು ಟೋಕನ್ ಪಡೆದುಕೊಂಡು ಹೋಗುತ್ತಿರುವುದು ಗುರುವಾರ ಕಂಡುಬಂದಿತು.
ಬೇರೆ ಜಿಲ್ಲೆಯವರ ಗದ್ದಲ:
ಆಧಾರ್ ತಿದ್ದುಪಡಿ ಮಾಡಿಕೊಳ್ಳಲು ಧಾರವಾಡ ಜಿಲ್ಲೆಯ ಜನರಿಗಿಂತಲೂ ದೂರದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುತ್ತಿರುವುದೇ ಈ ಗದ್ದಲಕ್ಕೆ ಪ್ರಮುಖ ಕಾರಣ. ಧಾರವಾಡ ಜಿಲ್ಲೆಯಲ್ಲದೇ ದೂರದ ಬೆಳಗಾವಿ, ಬಳ್ಳಾರಿ ಜಿಲ್ಲೆಯ ಕೊನೆಯ ಹಳ್ಳಿಗಳ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇನ್ನು ಬಾಗಲಕೋಟೆ, ಗದಗ, ಹಾವೇರಿ, ಉತ್ತರಕನ್ನಡ, ಕೊಪ್ಪಳ ಜಿಲ್ಲೆಯಿಂದ ನಿತ್ಯವೂ ನೂರಾರು ಜನರು ಆಗಮಿಸುತ್ತಿದ್ದಾರೆ.
ಬೆಂಗಳೂರು: ಮೊದಲ ದಿನವೇ ಗೃಹಲಕ್ಷ್ಮೀಗೆ ಸರ್ವರ್ ಕಿರಿಕಿರಿ, ತಾಂತ್ರಿಕ ತಡೆ
ನಮ್ಮಲ್ಲಿ ಬೇಗನೇ ಆಧಾರ್ ಕಾರ್ಡ್ ತಿದ್ದುಪಡಿ ಆಗುತ್ತಿಲ್ಲ ಅಂತಾ ಇಲ್ಲಿಗೆ ಬಂದರೆ ಇಲ್ಲೂ ವಾರಗಟ್ಟಲೇ ಕಾಯುವಂತಾಗಿದೆ. ನಾನು ಬುಧವಾರ ರಾತ್ರಿಯೇ ಬಸ್ ಹತ್ತಿ ಇಲ್ಲಿಗೆ ಮಧ್ಯರಾತ್ರಿ 1.30 ಗಂಟೆಗೆ ಬಂದು ಎಲ್ಲರಿಗಿಂತಲೂ ಮೊದಲೇ ಬಂದು ನಿಂತೀವಿ. ಆದರೆ, ನನಗೆ ಜು.25ರ ಟೋಕನ್ ದೊರೆತಿದೆ. ಹೀಗಾದರೆ ಹೇಗೆ?
ಮೃತ್ಯುಂಜಯ ಬೈಂದೂರ್, ಬೆಳಗಾವಿ