ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಆನೆ ಮಹಲ್ ಟೋಲ್ ಗೇಟ್ ಸಮೀಪ ದುರ್ಗ ಹೋಟೆಲ್ ಭಾಗದಲ್ಲಿ ಭೂಕುಸಿತದ ಭೀತಿ ಹಾಗೂ ಯಾವ ಕ್ಷಣದಲ್ಲಾದರೂ ಬಂಡೆಗಳು ರಸ್ತೆಗೆ ಉರುಳುವ ಸಂಭವವಿದೆ. ಇದರಿಂದ ವಾಹನ ಸವಾರರು ಎಚ್ಚರಿಕೆಯಿಂದ ವಾಹನವನ್ನು ಚಲಿಸಬೇಕಾಗಿದೆ. ನಿತ್ಯ ಈ ಭಾಗದಲ್ಲಿ ಸಾವಿರಾರು ವಾಹನಗಳು ಚಲಿಸುವುದರಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.
ಸಕಲೇಶಪುರ(ಜು.21): ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತಾಲೂಕಿನ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದಿರುವುದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಕತ್ತಲಿನಲ್ಲಿ ಕಾಲ ಕಳೆಯಬೇಕಾಗಿದೆ.
ಪಟ್ಟಣ ವ್ಯಾಪ್ತಿಯ ಅರೇಹಳ್ಳಿ ರಸ್ತೆಯ ವಿದ್ಯುತ್ ಕಂಬವೊಂದಕ್ಕೆ ಬುಧವಾರ ರಾತ್ರಿ ಮರದ ಸಣ್ಣ ರೆಂಬೆಯೊಂದು ಬಿದ್ದ ಪರಿಣಾಮ ರಾತ್ರಿ 1 ಗಂಟೆಯಿಂದ ಗುರುವಾರ ಮುಂಜಾನೆ 9 ಗಂಟೆವರೆಗೆ ಪಟ್ಟಣದ ಅರೇಹಳ್ಳಿ ಬೀದಿ, ಆಚ್ಚಂಗಿ, ಕುಡುಗರಹಳ್ಳಿ ಸೇರಿದಂತೆ ಹೆನ್ನಲಿ, ಹೆಬ್ಬಸಾಲೆ ಸೇರಿದಂತೆ ಹಲವೆಡೆ ವಿದ್ಯುತ್ ಪೂರೈಕೆಯಿರಲಿಲ್ಲ. ಗುರುವಾರ ಮುಂಜಾನೆ ಸ್ಥಳಕ್ಕೆ ಬಂದ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ರೆಂಬೆಯನ್ನು ತೆರವುಗೊಳಿಸಿ ವಿದ್ಯುತ್ ಪೂರೈಕೆಗೆ ಅನುವು ಮಾಡಿಕೊಟ್ಟರು.
ದಾಳಿ ಮಾಡಿದ ಚಿರತೆಯನ್ನು ಹೆಡೆಮುರಿಕಟ್ಟಿ ಹಂದಿಮರಿ ರೀತಿ ಹೊತ್ತೊಯ್ದ ಹಾಸನದ ಶೂರ!
ತಾಲೂಕಿನ ಕಲ್ಗಣೆ ಸಮೀಪ ವಿದ್ಯುತ್ ಕಂಬವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಅದೃಷ್ಟವಷಾತ್ ಈ ಸಂದರ್ಭದಲ್ಲಿ ಯಾವುದೆ ವಾಹನಗಳು ಸಂಚರಿಸುತ್ತಿರಲಿಲ್ಲ. ಇದರಿಂದ ಸಂಭವನೀಯ ಅವಘಡ ತಪ್ಪಿದೆ. ತಾಲೂಕಿನ ಬೊಮ್ಮನಕೆರೆ, ಮಳಲಿ, ಹೆಗ್ಗದ್ದೆ ಸೇರಿದಂತೆ ಹಲವೆಡೆ ವಿದ್ಯುತ್ ಕಂಬಗಳು ಭಾರಿ ಮಳೆ, ಗಾಳಿಯ ಕಾರಣ ಬಿದ್ದಿದೆ. ತಾಲೂಕಿನಲ್ಲಿ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ. ಕಳೆದ ಎರಡು ದಿನಗಳಿಂದಲೂ ಮಲೆನಾಡು ಭಾಗದಲ್ಲಿ ಜೋರು ಮಳೆ ಬರುತ್ತಿದ್ದು, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.
ಭೂ ಕುಸಿತದ ಭೀತಿ:
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಆನೆ ಮಹಲ್ ಟೋಲ್ ಗೇಟ್ ಸಮೀಪ ದುರ್ಗ ಹೋಟೆಲ್ ಭಾಗದಲ್ಲಿ ಭೂಕುಸಿತದ ಭೀತಿ ಹಾಗೂ ಯಾವ ಕ್ಷಣದಲ್ಲಾದರೂ ಬಂಡೆಗಳು ರಸ್ತೆಗೆ ಉರುಳುವ ಸಂಭವವಿದೆ. ಇದರಿಂದ ವಾಹನ ಸವಾರರು ಎಚ್ಚರಿಕೆಯಿಂದ ವಾಹನವನ್ನು ಚಲಿಸಬೇಕಾಗಿದೆ. ನಿತ್ಯ ಈ ಭಾಗದಲ್ಲಿ ಸಾವಿರಾರು ವಾಹನಗಳು ಚಲಿಸುವುದರಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಆನೆಮಲ್ ರಸ್ತೆ ಸಮೀಪ ನೂರಾರು ಮನೆಗಳು ಭೂಕುಸಿತದ ಭೀತಿಗೆ ಒಳಗಾಗಿದ್ದು ಮನೆಗಳಿಗೂ ಹಾನಿಯಾಗುವ ಸಂಭವವಿದೆ.
ರಸ್ತೆ ಬದಿಯಲ್ಲಿರುವ ಮನೆ ಸಮೀಪ ಮಣ್ಣನ್ನು ಅವೈಜ್ಞಾನಿಕವಾಗಿ ಅಗೆದಿರುವುದರಿಂದ ಬೃಹತ್ ಬಂಡೆ ಕಲ್ಲುಗಳು ಯಾವುದೇ ಸಮಯದಲ್ಲಾದರೂ ಹೆದ್ದಾರಿಗೆ ಬಿದ್ದು ಅನಾಹುತ ಆಗುವ ಸಂಭವವಿದೆ. ಸಂಬಂಧಪಟ್ಟಅಧಿಕಾರಿಗಳು ಹಾಗೂ ಜನಪ್ರತಿನಿಗಳು ಇತ್ತ ಗಮನಹರಿಸಿ ರಾಷ್ಟ್ರೀಯ ಹೆದ್ದಾರಿ ಸಮೀಪ ದುರ್ಗಾ ಹೋಟೆಲ್ ಸಮೀಪ ಇರುವ ಕುಟುಂಬಗಳಿಗೆ ಸೂಕ್ತ ಪುನರ್ವಸತಿ ನಿರ್ಮಿಸಿ ಭಾರಿ ಮಳೆಯಿಂದ ಕುಸಿಯುತ್ತಿರುವ ಭೂ ಪ್ರದೇಶಕ್ಕೆ ತುರ್ತಾಗಿ ತಡೆಗೋಡೆ ನಿರ್ಮಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮತ್ತೊಂದು ಕಡೆ ಬೈಪಾಸ್ ರಸ್ತೆ ಆರಂಭವಾಗುವ ಮುನ್ನವೇ ಮಣ್ಣು ಕುಸಿದು, ಮರಗಳು ರಸ್ತೆಗೆ ಉರುಳಿವೆ.