:ಜೀವನದಲ್ಲಿ ಹಣ, ಶ್ರೀಮಂತಿಕೆ ಗಳಿಸುವುದಕ್ಕಿಂತ ಸಮಾಜದಲ್ಲಿ ಹೃದಯ ಶ್ರೀಮಂತಿಕೆ ಪಡೆಯುವುದು ಅತ್ಯಂತ ಶ್ರೇಷ್ಠ ಗಳಿಕೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ನುಡಿದರು.
ಸೊರಬ (ಸೆ.28) :ಜೀವನದಲ್ಲಿ ಹಣ, ಶ್ರೀಮಂತಿಕೆ ಗಳಿಸುವುದಕ್ಕಿಂತ ಸಮಾಜದಲ್ಲಿ ಹೃದಯ ಶ್ರೀಮಂತಿಕೆ ಪಡೆಯುವುದು ಅತ್ಯಂತ ಶ್ರೇಷ್ಠ ಗಳಿಕೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ನುಡಿದರು. ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದ ಆವರಣದಲ್ಲಿ ಧಾರ್ಮಿಕ ದತ್ತಿ ಇಲಾಖೆ, ತಾಲೂಕು ಆಡಳಿತ, ಕನ್ನಡ ಮತ್ತು ಸಾಂಸ್ಕತಿಕ ಇಲಾಖೆ, ಗ್ರಾಪಂ, ಶ್ರೀ ರೇಣುಕಾಂಬ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ 9 ದಿನಗಳವರೆಗೆ ಹಮ್ಮಿಕೊಂಡಿರುವ ಶ್ರೀ ರೇಣುಕಾಪರಮೇಶ್ವರಿ ಅಮ್ಮನವರ ಶರನ್ನವರಾತ್ರಿ ದಸರಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
Shivamogga Airport; ನವೆಂಬರ್ ಮಾಸಾಂತ್ಯಕ್ಕೆ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ
ವ್ಯಕ್ತಿ ಸಮಾಜದಲ್ಲಿ ಎಷ್ಟೇ ಹೆಸರುಗಳಿಸಿದ್ದರೂ ದೇವರ ಮುಂದೆ ಮಂಡಿಯೂರಿ ಶರಣಾಗಲೇಬೇಕು. ಪ್ರತಿಯೊಬ್ಬ ಮನುಷ್ಯನಿಗೆ ಒಂದಲ್ಲ ಒಂದು ಕಷ್ಟ, ಸುಖ ಬರುತ್ತವೆ. ಆದರೆ ಅವೆಲ್ಲವನ್ನೂ ಸಮಾನವಾಗಿ ತೆಗೆದುಕೊಂಡು ಮುನ್ನೆಡೆದಾಗ ಬದುಕು ಸಾರ್ಥಕತೆ ಪಡೆಯುತ್ತದೆ. ಅದರಲ್ಲೂ ಧಾರ್ಮಿಕ ಭಾವನೆಗಳು ಮನುಷ್ಯರಲ್ಲಿರುವ ದುಗುಡ, ದುಮ್ಮಾನಗಳನ್ನು ದೂರಮಾಡುತ್ತವೆ ಎಂದ ಅವರು, ಯುವ ಜನತೆ ಸಮಾಜದ ಸ್ವಾಸ್ಥ್ಯತೆಯನ್ನು ಹಾಳು ಮಾಡುತ್ತಿರುವ ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕುಮಾರ ಬಂಗಾರಪ್ಪ, ಬಯಲು ಸೀಮೆ ಹಾಗೂ ಮಲೆನಾಡು ಭಾಗದಿಂದ ಶ್ರೀ ರೇಣುಕಾಂಬ ದೇವಿಯ ಸನ್ನಿಧಿಗೆ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಮತ್ತು ಮೂಲ ಸೌಲಭ್ಯಗಳನ್ನು ಕಲ್ಪಿಸಲು ಒತ್ತು ನೀಡಲಾಗಿದೆ. ಈಗಾಗಲೇ 7 ಕೋಟಿ ರು. ವೆಚ್ಚದಲ್ಲಿ ದೇವಸ್ಥಾನದ ಪುನಶ್ಚೇತನಕ್ಕೆ ಯೋಜನೆಯನ್ನು ರೂಪಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು.
ಶ್ರೀ ಕ್ಷೇತ್ರವು ಶಕ್ತಿ ಪೀಠವಾಗಿ ತಾಲೂಕಿನ ಕಳಸಪ್ರಾಯವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಭಕ್ತ ವೃಂದ ಸೇರಿದಂತೆ ಸ್ಥಳೀಯರ ಸಹಕಾರ ಅತ್ಯಗತ್ಯ. ಸರ್ಕಾರವು ಸಹ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಾಡಿನ ಅಧಿದೇವತೆಯೆಂದು ಮೈಸೂರಿನ ಚಾಮುಂಡೇಶ್ವರಿ ದೇವಿಯ ದಸರಾ ಉತ್ಸವದಂತೆ ಚಂದ್ರಗುತ್ತಿ ದಸರ ಉತ್ಸವವು ರಾಜ್ಯದಲ್ಲಿ ಜನಮನ್ನಣೆ ಪಡೆಯುಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯಾತ್ರಿ ನಿವಾಸದ ನಿವೇಶನ ದಾನಿ ಸುಜಾತ ವೈ.ಆರ್. ದೇಸಾಯಿ ಸೇರಿದಂತೆ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು. ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸನ್ನಶೇಟ್, ಅರಣ್ಯ ನಿಗಮದ ಉಪಾಧ್ಯಕ್ಷ ರೇವಣಪ್ಪ, ಬೋವಿ ನಿಗಮದ ಸದಸ್ಯ ಸಣ್ಣ ಹನುಮಂತಪ್ಪ, ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಾಹಣಾ ಅಧಿಕಾರಿ ವಿ.ಎಲ್. ಶಿವಪ್ರಸಾದ್, ಗ್ರಾಪಂ ಸದಸ್ಯರಾದ ಸಲೀಂ, ಲೋಕೇಶ್, ಬೆನ್ನೂರು ಗ್ರಾಪಂ ಅಧ್ಯಕ್ಷ ದೇವರಾಜ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಿವಶಂಕರಗೌಡ, ಡಿ.ಕೆ. ದೇವೇಂದ್ರಪ್ಪ, ಎಲ್. ವೆಂಕಟೇಶ್, ಪ್ರವೀಣ್ ಮಿರ್ಜಿ, ನಟರಾಜ್, ಅರವಿಂದ್ ಡಿ. ಅರ್ಚಕ್, ಲಲಿತಾ ಮಹೇಂದ್ರ ಶೇಟ್, ಕಮಲಾಕ್ಷಿ ಬಾಲರಾಜ್, ಪ್ರಮುಖರಾದ ಬೆಣ್ಣೆ ಹನುಮಂತಪ್ಪ, ಈಶ್ವರ ಚನ್ನಪಟ್ಟಣ, ಪರಸಪ್ಪ ಓಲೇಕರ್, ಕೃಷ್ಣ ಕಾಮತ್, ಪರಶುರಾಮ ಬೋವಿ, ಗಂಗಾಧರ ಮರಡಿ, ಸುನಂದಾ ದೇಸಾಯಿ, ರಾಜು ಕೆಂಚಿಕೊಪ್ಪ ಮೊದಲಾದವರು ಹಾಜರಿದ್ದರು.
ಪರಿಶಿಷ್ಟ ಜಾತಿಗೆ ಮಡಿವಾಳ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಸಂಸದ ಬಿ.ವೈ.ರಾಘವೇಂದ್ರ
ಸೊರಬ ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಶರನ್ನವರಾತ್ರಿ ದಸರಾ ಉತ್ಸವವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು.