ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬೇಡಿ. ಪದವಿ ಜೊತೆಗೆ ಸ್ನಾತಕೋತ್ತರ ಪದವಿ ಮಾಡಿ. ವಿದ್ಯಾಭ್ಯಾಸವನ್ನು ಪರಿಪೂರ್ಣವಾಗಿ ಮುಗಿಸುವಂತೆ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಕರೆ ನೀಡಿದರು.
ಮೈಸೂರು (ಜೂ.16): ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬೇಡಿ. ಪದವಿ ಜೊತೆಗೆ ಸ್ನಾತಕೋತ್ತರ ಪದವಿ ಮಾಡಿ. ವಿದ್ಯಾಭ್ಯಾಸವನ್ನು ಪರಿಪೂರ್ಣವಾಗಿ ಮುಗಿಸುವಂತೆ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಕರೆ ನೀಡಿದರು. ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಕೇಂದ್ರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಉತ್ಸವ- 2023 ಅನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಈ ವಯಸ್ಸಿನಲ್ಲಿ ಚಂಚಲತೆ ಇರುತ್ತದೆ. ವಿದ್ಯಾರ್ಥಿನಿಯರು ಯಾವುದೇ ಆಸೆ, ಆಮಿಷಗಳಿಗೆ ಮನಸನ್ನು ಹರಿಬಿಡದೇ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. ಒಮ್ಮೆ ಎಡವಿದರೆ ಭವಿಷ್ಯ ಹಾಳಾಗುವ ಜೊತೆಗೆ ಸಮಾಜ ನೋಡುವ ರೀತಿಯನ್ನು ಬದಲಿಸುತ್ತದೆ. ಹೀಗಾಗಿ, ಜಾಗೃತಿಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಕ್ಕೇರುವ ಮೂಲಕ ಸಾವಿರಾರು ಜನಕ್ಕೆ ದಾರಿಯಾಗಬೇಕು ಎಂದರು. ಒಳ್ಳೆಯ ರೀತಿಯಲ್ಲಿ ವಿದ್ಯಾರ್ಥಿ ಜೀವನವನ್ನು ಅನುಭವಿಸಬೇಕು. ಕಷ್ಟ ಬಂದಾಗ ಎದೆಗುಂದದೇ ಎದುರಿಸಬೇಕು. ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ 5 ವರ್ಷ ಕಷ್ಟಪಟ್ಟರೇ ಜೀವನ ರೂಪಿಸಿಕೊಳ್ಳಬಹುದು.
ಕೃಷಿ ಜತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ: ಸಚಿವ ಚಲುವರಾಯಸ್ವಾಮಿ
ಆದರೆ, ಎಡವಿದರೇ ಜೀವನದಲ್ಲಿ ತುಂಬಾ ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ, ವಿದ್ಯಾಭ್ಯಾಸವನ್ನು ಪರಿಪೂರ್ಣಗೊಳಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮೈಸೂರಿನ ಮಹಾರಾಜ ಮತ್ತು ಮಹಾರಾಣಿ ಕಾಲೇಜುಗಳು ಪ್ರತಿಷ್ಠಿತ ಕಾಲೇಜುಗಳಾಗಿದ್ದು, ಈ ಕಾಲೇಜುಗಳ ಬಗ್ಗೆ ಹೆಮ್ಮೆ ಇದೆ. ಇಲ್ಲಿ 8 ವಿಷಯಗಳ ಸ್ನಾತಕೋತ್ತರ ತರಗತಿಗಳು ನಡೆಯುತ್ತವೆ. ಹೀಗಾಗಿ, ಸಂಶೋಧನೆಗೂ ಅವಕಾಶ ನೀಡುಬೇಕು ಎಂದು ಪ್ರಾಂಶುಪಾಲರು ಕೇಳಿದ್ದಾರೆ. ಈ ನಿಟ್ಟಿನಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ನಮ್ಮದು ಯಂಗ್ ಇಂಡಿಯಾ: ನೆಹರು ಯುವ ಕೇಂದ್ರದ ದಕ್ಷಿಣ ರಾಜ್ಯಗಳ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ಮಾತನಾಡಿ, ನಮ್ಮ ದೇಶದಲ್ಲಿ ಇರುವಷ್ಟುಯುವ ಶಕ್ತಿ ಬೇರೆ ದೇಶಗಳಲ್ಲಿ ಇಲ್ಲ. ಹೀಗಾಗಿಯೇ ಜಗತ್ತಿನ ಎಲ್ಲಾ ದೇಶಗಳು ನಮ್ಮ ರಾಷ್ಟ್ರವನ್ನು ಯಂಗ್ ಇಂಡಿಯಾ ಎಂದು ಕರೆಯುವ ಮೂಲಕ ನಮ್ಮ ದೇಶದತ್ತ ದೃಷ್ಟಿಯಿಟ್ಟಿವೆ ಎಂದರು. ಸ್ವಾತಂತ್ರ್ಯ ಮುನ್ನ ನಮ್ಮ ದೇಶದ ಒಟ್ಟು ಜನ ಸಂಖ್ಯೆ 33 ಕೋಟಿ ಇತ್ತು. ಈಗ 130 ಕೋಟಿ ದಾಟಿದೆ. ಚೀನಾದ ನಂತರದ ಜನಸಂಖ್ಯೆಯಲ್ಲಿ ನಾವು ಎರಡನೇ ಸ್ಥಾನದಲ್ಲಿ ಇದ್ದೇವೆ. ಮುಂದಿನ ಕೆಲವು ವರ್ಷಗಳಲ್ಲಿ ಅದನ್ನು ಮೀರಿಸಲಿದ್ದೇವೆ. ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ 100 ಕೋಟಿ ಮಾನವ ಸಂಪನ್ಮೂಲವನ್ನು ಹೊಂದಿದ್ದೇವೆ ಎಂದರು.
ಬೇಡಿಕೆ ಕಳೆದುಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದಲಾದ ನಿಯಮದಿಂದಾಗಿ ಸೀಟು ಕೇಳುವವರೇ ಇಲ್ಲ!
ನಮ್ಮ ದೇಶದಲ್ಲಿ 15 ರಿಂದ 29 ವಯಸ್ಸಿನವರು 45 ಕೋಟಿ ಮಂದಿ ಇದ್ದಾರೆ. ಈ ಪ್ರಮಾಣದ ಯುವ ಶಕ್ತಿ, ನಮಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲೂ ಇಲ್ಲ. ಈ ನಮ್ಮ ದೇಶದ ಯುವಶಕ್ತಿಯನ್ನು ಸಮಪರ್ಕವಾಗಿ ದೇಶ ಕಟ್ಟಲು ಬಳಸಿಕೊಂಡರೆ, ಕೆಲವು ಸಮಸ್ಯೆಗಳನ್ನಾದರೂ ಬಗೆಹರಿಸಬಹುದು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ. ವಸಂತಕುಮಾರ್, ಮೈಸೂರು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಎಂ.ಬಿ. ಸುರೇಶ್, ಕಾಲೇಜಿನ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಡಾ.ಆರ್. ಜಯರಾಜು, ಖಜಾಂಚಿ ಡಾ. ಸವಿತಾ, ಎನ್‌ಎಸ್‌ಎಸ್ ಕಾರ್ಯಾಕ್ರಮಾಧಿಕಾರಿ ಎಂ.ವಿಶ್ವನಾಥನ್, ಡಾ. ನಿಂಗರಾಜು, ಯುವ ಕೇಂದ್ರದ ಸಲಹಾ ಸಮಿತಿ ಸದಸ್ಯ ಪ್ರಕಾಶ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಅಭಿಷೇಕ್ ಎಸ್. ಚವರೆ ಮೊದಲಾದವರು ಇದ್ದರು.