
ಉಡುಪಿ (ಜ.29): ನಮ್ಮ ಧರ್ಮವನ್ನು ನಾವು ಸಮಾಜವನ್ನು ಕಟ್ಟುವುಕ್ಕಾಗಿ ಸಮರ್ಪಕವಾಗಿ ಬಳಸಿಕೊಳ್ಳೋಣ. ಆದರೆ, ಯಾವುದೇ ಕಾರಣಕ್ಕೂ ಧರ್ಮದ ಹೆಸರಲ್ಲಿ ಸಮಾಜ ಒಡೆಯುವಂತಹ ಕೆಲಸವನ್ನು ಯಾರೊಬ್ಬರೂ ಮಾಡಬೇಡಿ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಿಷಬ್ ಶೆಟ್ಟಿ ಮಾತನಾಡಿದರು. ಧರ್ಮ ಧರ್ಮ ಅಂತ ಬಾಯಲ್ಲಿ ಹೇಳಿದರೆ ಸಾಧ್ಯವಾಗುವುದಿಲ್ಲ ನಾವು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಬೇಕಿದೆ. ಕಾರ್ಕಳ ತಾಲೂಕಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಧಾರ್ಮಿಕ ಕೇಂದ್ರಗಳಿವೆ. ಇಲ್ಲಿನ ಶಿಲ್ಪಕಲೆ, ಗೊಮ್ಮಟೇಶ್ವರನ ವಿಗ್ರಹ ಈಗಾಗಲೇ ಪ್ರಸಿದ್ಧಿಯಾಗಿದೆ. ಹೊಸದಾಗಿ ನಿರದಮಾಣವಾಗಿರುವ ಪರಶುರಾಮ ಥೀಂ ಪಾರ್ಕ್, ಪರಶುರಾಮನ 33 ಅಡಿ ಎತ್ತರದ ಮೂರ್ತಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲಿದೆ. ಸಚಿವ ಸುನೀಲ್ ಕುಮಾರ್ ಜನ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
Udupi: ಕಾರ್ಕಳದ ಪರಶುರಾಮ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ
ಕಾಂತಾರ ಚಿತ್ರದ ಮೂಲಕ ಕರಾವಳಿ ಬದುಕಿನ ಅನಾವರಣ: ಕಾಂತಾರ ಚಿತ್ರ ಅಭೂತಪೂರ್ವ ಯಶಸ್ಸಿಗೆ ಜನ ಕಾರಣ. ಸಾಕಷ್ಟು ಟೀಕೆ ಟಿಪ್ಪಣಿಗಳು ಕೂಡ ಕೇಳಿ ಬಂದವು. ಯಾವ ಟೀಕೆ ಟಿಪ್ಪಣಿಗಳಿಗೂ ನಾನು ಉತ್ತರಿಸಲಿಲ್ಲ. ಅದನ್ನು ಜನಕ್ಕೆ ಬಿಟ್ಟಿದ್ದೇನೆ. ನಮ್ಮ ಕೆಲಸ ಮಾತನಾಡಬೇಕೆ ಹೊರತು ಮಾತೇ ಬಂಡವಾಳ ಆಗಬಾರದು. ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡುತ್ತಾ ಹೋದರೆ ಇಡೀ ಜೀವಮಾನ ಸಾಲುವುದಿಲ್ಲ. ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ಕೆಲಸದ ಮೂಲಕ ತೋರಿಸಬೇಕು. ಕಾಂತಾರ ಚಿತ್ರದ ಮೂಲಕ ಕರಾವಳಿಯ ಭಾಗದ ಜನರ ಬದುಕಿನ ರೀತಿಯನ್ನು ಕಟ್ಟಿಕೊಟ್ಟಿದ್ದೇನೆ ಎಂದು ಚಿತ್ರ ನೂರು ದಿನ ಪೂರೈಸಿದ ನಂತರ ರಿಷಬ್ ಶೆಟ್ಟಿ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.
18 ವರ್ಷದ ನಂತರ ಬೆಳಕು ಬಂದಿದೆ: ಸಿನಿಮಾ ರಂಗಕ್ಕೆ ಬಂದು 18 ವರ್ಷ ಆಯ್ತು. ಈಗ ನನಗೆ ಬೆಳಕು ಕಾಣಿಸುತ್ತಿದೆ. ಕಾಂತಾರ ಚಿತ್ರದ ಪ್ರಸಿದ್ಧಿಯನ್ನು ಜನಕ್ಕೆ, ದೈವ ನರ್ತಕರಿಗೆ ಮತ್ತು ಪುನೀತ್ ರಾಜಕುಮಾರ್ ಅವರಿಗೆ ಸಲ್ಲಿಸುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಒಳ್ಳೆಯ ಸಂದೇಶ ಇರುವ ಸದಭಿರುಚಿಯ ಚಿತ್ರಗಳನ್ನು ಮಾಡುವ ಮೂಲಕ ನಿಮ್ಮ ಋಣ ತೀರಿಸುತ್ತೇನೆ ಎಂದರು.