ವಿಚ್ಛೇದನದ ಮೊರೆಹೋಗಿರುವ ನಟ ಯುವರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ನಡುವಿನ ಕೌನ್ಸೆಲಿಂಗ್‌ಗೆ ಕೌಟುಂಬಿಕ ನ್ಯಾಯಾಲಯ ಆ.23ರಂದು ದಿನಾಂಕ ನಿಗದಿಪಡಿಸಿದೆ.
ಬೆಂಗಳೂರು(ಜು.05): ವಿಚ್ಛೇದನದ ಮೊರೆಹೋಗಿರುವ ನಟ ಯುವರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ನಡುವಿನ ಕೌನ್ಸೆಲಿಂಗ್‌ಗೆ ಕೌಟುಂಬಿಕ ನ್ಯಾಯಾಲಯ ಆ.23ರಂದು ದಿನಾಂಕ ನಿಗದಿಪಡಿಸಿದೆ. ವಿವಾಹ ವಿಚ್ಛೇದನ ಕೋರಿ ಯುವರಾಜ್ ಕುಮಾರ್ ಸಲ್ಲಿಸಿದ್ದ ಅರ್ಜಿಯು ಗುರುವಾರ ನಗರದ ಒಂದನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಸ್.ಕಲ್ಪನಾ ಅವರ ಮುಂದೆ ವಿಚಾರಣೆಗೆ ಬಂದಿತ್ತು.
ಶ್ರೀದೇವಿ ಪರ ವಕೀಲರು ಹಾಜರಾಗಿ, ಯುವ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ, ವಾದ ಮಂಡಿಸಲು ಅವಕಾಶ ಕೋರಿದರು. ಅದಕ್ಕೆ ಒಪ್ಪದ ನ್ಯಾಯಾಧೀಶರು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಸುಪ್ರಿಂಕೋರ್ಟ್ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ. ಅದರಂತೆ ಪಕ್ಷಕಾರರ ನಡುವೆ ಕೌನ್ಸೆಲಿಂಗ್ ನಡೆಸಬೇಕಾಗುತ್ತದೆ. ಅದಕ್ಕಾಗಿ ಪ್ರಕರಣವು ಮೊದಲು ಮಧ್ಯಸ್ಥಿಕ ಕೇಂದ್ರಕ್ಕೆ ಶಿಫಾರಸು ಆಗಬೇಕು.
ಉಸಿರಲ್ಲಿ ಉಸಿರಾಗಿದ್ದವರಿಗೆ ಅವಕಾಶವೇ ಸಿಗ್ಲಿಲ್ಲ... ಅವಕಾಶವಿದ್ರೂ ಒಟ್ಟಿಗೇ ಬಾಳಲ್ಲ .. ಏನಿದು ವಿಚಿತ್ರ ದೇವ್ರೇ?
ಕೇಂದ್ರದಲ್ಲಿ ಅರ್ಜಿದಾರ ಮತ್ತು ಪ್ರತಿವಾದಿ (ಪಕ್ಷಕಾರರು) ನಡುವೆ ಸಮಾಲೋಚನೆ ನಡೆಯಬೇಕು. ಅವರು ತೀರ್ಮಾನ ತಿಳಿಸಿದ ನಂತರವಷ್ಟೇ ಆಕ್ಷೇಪಣೆ ಮೇಲೆ ವಾದ ಮಂಡನೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ನಂತರ ನ್ಯಾಯಾಧೀಶರು, ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಶಿಫಾರಸು ಮಾಡಿದರು.