Dharwad: ದಪ್ಪಗಿದ್ದೀಯಾ..... ನಿನಗೆ ಮಗು ಆಗಲ್ಲವೆಂದು ಹೀಯಾಳಿಸಿ ಹೆಂಡತಿಯ ಕತ್ತು ಹಿಸುಕಿ ಕೊಂದ ಗಂಡ!

Published : Jul 01, 2026, 11:15 AM IST
Dharwad husband kills wife

ಸಾರಾಂಶ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ, ವರದಕ್ಷಿಣೆ ಹಾಗೂ ದಪ್ಪಗಿದ್ದಾಳೆಂಬ ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮದುವೆಯಾದ ಒಂದು ವರ್ಷದಲ್ಲೇ ನಡೆದ ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಪತಿ ಬಸವರಾಜ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಧಾರವಾಡ: ಹೆಂಡತಿ ದಪ್ಪಗಿದ್ದಾಳೆ, ಆಕೆಗೆ ಮಗು ಹೆರಲು ಶಕ್ತಳಲ್ಲ ಎಂಬ ಕ್ಷುಲ್ಲಕ ಕಾರಣ ಹಾಗೂ ವರದಕ್ಷಿಣೆ ಆಸೆಗೆ ಇಲ್ಲೊಬ್ಬ ಪಾಪಿ ಪತಿ ತನ್ನ ಹೆಂಡತಿಯನ್ನೇ ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಾಂಕಾ ಕಮಲಾಕರ್ (29) ಕೊಲೆಯಾದ ದುರ್ದೈವಿ ಮಹಿಳೆ. ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ಕೊಂದ ಆರೋಪಿ ಪತಿ ಬಸವರಾಜ್ ವಡ್ಡರ್ ಹಾಗೂ ಆತನಿಗೆ ಸಾಥ್ ನೀಡಿದ ಮೂವರನ್ನು ನವಲಗುಂದ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಮದುವೆಯಾದ ಒಂದೇ ವರ್ಷಕ್ಕೆ ಶುರುವಾಯ್ತು ನರಕಯಾತನೆ

ಮೃತ ಪ್ರಿಯಾಂಕಾ ಹಾಗೂ ಆರೋಪಿ ಬಸವರಾಜ್‌ ಅವರ ವಿವಾಹ ಕಳೆದ 2024 ರಲ್ಲಿ ಅದ್ದೂರಿಯಾಗಿ ನಡೆದಿತ್ತು. ಮದುವೆಯಾದ ಮೊದಲ ಕೆಲವು ತಿಂಗಳುಗಳು ಚೆನ್ನಾಗಿಯೇ ಇದ್ದ ಈ ದಂಪತಿಗಳ ಸಂಸಾರದಲ್ಲಿ ತದನಂತರ ಬಿರುಗಾಳಿ ಎದ್ದಿದೆ. ಮದುವೆಯಾದ ಒಂದೇ ವರ್ಷದಲ್ಲಿ ಪತಿ ಬಸವರಾಜ್ ಮತ್ತು ಆತನ ಕುಟುಂಬಸ್ಥರು ಪ್ರಿಯಾಂಕಾಗೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರಂತೆ. ತವರು ಮನೆಯಿಂದ ಇನ್ನಷ್ಟು ಬಂಗಾರ ಹಾಗೂ ಹಣವನ್ನು ತೆಗೆದುಕೊಂಡು ಬರುವಂತೆ ನಿರಂತರವಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ.

ಶಾರೀರಿಕ ದೌರ್ಬಲ್ಯದ ನೆಪ, ಮೃಗೀಯ ವರ್ತನೆ

ವರದಕ್ಷಿಣೆ ಕಿರುಕುಳದ ಜೊತೆಗೆ, ಪ್ರಿಯಾಂಕಾ ಕೊಂಚ ದಪ್ಪಗಿದ್ದಾರೆ ಎಂಬ ಕಾರಣವನ್ನು ಇಟ್ಟುಕೊಂಡು ಪತಿ ಬಸವರಾಜ್ ನಿತ್ಯ ಜಗಳ ಕಾಯುತ್ತಿದ್ದನು. "ನೀನು ತುಂಬಾ ದಪ್ಪಗಿದ್ದೀಯಾ, ನಿನಗೆ ಗರ್ಭಿಣಿಯಾಗಲು ಸಾಧ್ಯವಿಲ್ಲ, ನೀನು ಮಗು ಹೆರಲಾರೆ" ಎಂದು ನಿಷ್ಠೂರವಾಗಿ ಚುಚ್ಚಿ ಮಾತನಾಡುತ್ತಾ ಆಕೆಯನ್ನು ಹಿಂಸಿಸುತ್ತಿದ್ದನು. ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ತೀವ್ರ ಗಲಾಟೆ ನಡೆಯುತ್ತಿತ್ತು.

ಸೋಮವಾರ ರಾತ್ರಿ ಜೋರಾದ ಗಲಾಟೆ

ಕಳೆದ ಸೋಮವಾರ ರಾತ್ರಿ ಹಣಸಿ ಗ್ರಾಮದ ತಮ್ಮ ನಿವಾಸದಲ್ಲಿ ಪತಿ-ಪತ್ನಿ ನಡುವೆ ಇದೇ ವಿಷಯವಾಗಿ ಮತ್ತೆ ದೊಡ್ಡ ಜಗಳ ನಡೆದಿದೆ. ಈ ವೇಳೆ ಅತಿಯಾಗಿ ಕೋಪಗೊಂಡ ಬಸವರಾಜ್, ಮಾನವೀಯತೆಯನ್ನೇ ಮರೆತು ಪ್ರಿಯಾಂಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಭೀಕರ ಘಟನೆಯನ್ನು ಮುಚ್ಚಿಹಾಕಲು ಆರೋಪಿಗಳು ಪ್ರಯತ್ನ ಪಟ್ಟಿದ್ದಾರೆ. ಪ್ರಿಯಾಂಕಾ ಸಾವಿನ ಸುತ್ತ ಅನುಮಾನ ಬಂದಾಗ ತವರು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ನಾಲ್ವರು ಆರೋಪಿಗಳ ಬಂಧನ

ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ನೀಡಿದ ದೂರಿನನ್ವಯ ನವಲಗುಂದ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಯ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮುಖ್ಯ ಆರೋಪಿ ಬಸವರಾಜ್ ವಡ್ಡರ್ ಸೇರಿದಂತೆ ಕೊಲೆ ಹಾಗೂ ಕಿರುಕುಳಕ್ಕೆ ಸಾಥ್ ನೀಡಿದ ಆರೋಪದ ಮೇಲೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಬಸವರಾಜ್ (ಪತಿ), ರೇಣವ್ವ, ಸುಭಾಷ್, ಸಿದ್ದರಾಮೇಶ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಸದ್ಯ ಪೊಲೀಸರು ನಾಲ್ಕೂ ಜನ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಪ್ರಯಾಣಿಕರೇ ಇಂದಿನಿಂದ ನಗರದ 2 ಪ್ರಮುಖ ರಸ್ತೆಗಳಲ್ಲಿ ಟೋಲ್ ದರ ಹೆಚ್ಚಳ, ಬೈಕ್ ಸವಾರರೂ ಟೋಲ್ ಕಟ್ಟಲೇಬೇಕು!
ಮಂಗಳೂರು: ಭಾರೀ ಮಳೆಗೆ ನಾಗುರಿಯಲ್ಲಿ ನಸುಕಿನ ವೇಳೆ ಗುಡ್ಡ ಕುಸಿದು ಬಿಹಾರಿ ಕುಟುಂಬ ಸೇರಿ ಮೂರು ಸಾವು!