ಬೆಂಗಳೂರು ಪ್ರಯಾಣಿಕರೇ ಇಂದಿನಿಂದ ನಗರದ 2 ಪ್ರಮುಖ ರಸ್ತೆಗಳಲ್ಲಿ ಟೋಲ್ ದರ ಹೆಚ್ಚಳ, ಬೈಕ್ ಸವಾರರೂ ಟೋಲ್ ಕಟ್ಟಲೇಬೇಕು!

Published : Jul 01, 2026, 09:56 AM IST
Bengaluru toll hike

ಸಾರಾಂಶ

ಬೆಂಗಳೂರಿನ ಪ್ರಮುಖ ಕಾರಿಡಾರ್‌ಗಳಾದ ನೈಸ್ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಜುಲೈ 1, 2026 ರಿಂದ ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಈ ದರ ಏರಿಕೆಯು ಕಾರು, ದ್ವಿಚಕ್ರ ವಾಹನ ಸವಾರರು ಸೇರಿದಂತೆ ನಿತ್ಯ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದ್ದು, ಬಿಎಂಟಿಸಿ ಬಸ್ ಪ್ರಯಾಣ ದರವೂ ಹೆಚ್ಚಾಗುವ ಸಾಧ್ಯತೆಯಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ಉದ್ಯೋಗಿಗಳು ಹಾಗೂ ನಿತ್ಯ ಪ್ರಯಾಣಿಕರ ಜೇಬಿಗೆ ಮತ್ತೊಂದು ಕತ್ತರಿ ಬಿದ್ದಿದೆ. ಬೆಂಗಳೂರಿನ ಅತ್ಯಂತ ಜನನಿಬಿಡ ಟೋಲ್ ಕಾರಿಡಾರ್‌ಗಳಾದ ಹೊಸೂರು ರಸ್ತೆಯ 'ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ' ಮತ್ತು 'ನೈಸ್ (NICE) ರಸ್ತೆ'ಯನ್ನು ಬಳಸುವ ಪ್ರಯಾಣಿಕರು ಜುಲೈ 1, 2026 (ಬುಧವಾರ) ರಿಂದ ಪರಿಷ್ಕೃತ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರಿಂದಾಗಿ ಇಂದಿನಿಂದ ಈ ಮಾರ್ಗಗಳ ಮೂಲಕ ಸಂಚರಿಸುವ ನಿಮ್ಮ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ.

ನೈಸ್ ರಸ್ತೆ ಟೋಲ್ ದರ ಕನಿಷ್ಠ 10% ಹೆಚ್ಚಳ

ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICE), ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಯ ಪೆರಿಫೆರಲ್ ರಸ್ತೆ ಮತ್ತು ಲಿಂಕ್ ರಸ್ತೆ ಘಟಕಗಳ ಟೋಲ್ ಶುಲ್ಕವನ್ನು ಪರಿಷ್ಕರಿಸುವ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಸೆಪ್ಟೆಂಬರ್ 4, 2000 ರಂದು ರಾಜ್ಯ ಸರ್ಕಾರದೊಂದಿಗೆ ಸಹಿ ಹಾಕಿದ ರಿಯಾಯಿತಿ ಒಪ್ಪಂದದ ಪ್ರಕಾರ ಇದು ವಾರ್ಷಿಕವಾಗಿ ನಡೆಯುವ ನಿಯಮಿತ ದರ ಪರಿಷ್ಕರಣೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ ಸಾಗುವ ಬೆಂಗಳೂರಿನ ಸೆಮಿ-ರಿಂಗ್ ರಸ್ತೆಯಾದ ಪೆರಿಫೆರಲ್ ರಸ್ತೆ 40.8 ಕಿ.ಮೀ ಉದ್ದವಿದ್ದರೆ, ಲಿಂಕ್ ರಸ್ತೆ 8.1 ಕಿ.ಮೀ ಉದ್ದವಿದೆ.

ಯಾರಿಗೆ ಎಷ್ಟು ಏರಿಕೆ?

ದ್ವಿಚಕ್ರ ವಾಹನಗಳು ಮತ್ತು ಕಾರು ಸವಾರರು ಸಂಚರಿಸುವ ದೂರದ ಆಧಾರದ ಮೇಲೆ ಕನಿಷ್ಠ ಶೇ. 10 ರಷ್ಟು ಹೆಚ್ಚು ಟೋಲ್ ಪಾವತಿಸಬೇಕಾಗುತ್ತದೆ. ಈ ಹೆಚ್ಚಳದ ಮೊತ್ತವನ್ನು ಮುಂದಿನ ಪೂರ್ಣ ಸಂಖ್ಯೆಗೆ (Round figure) ಹೊಂದಿಸಲಾಗುತ್ತದೆ.

ಪ್ರಯಾಣಿಕರ ಮೇಲೆ ಬಿಎಂಟಿಸಿ ಬರೆ?

ಬನಶಂಕರಿ, ತಾವರೆಕೆರೆ, ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ನೈಸ್ ರಸ್ತೆ ಮೂಲಕ ಬಸ್ ಸೇವೆ ಒದಗಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಈ ಹೆಚ್ಚುವರಿ ಟೋಲ್ ವೆಚ್ಚದ ಹೊರೆಯನ್ನು ಪ್ರಯಾಣಿಕರ ಟಿಕೆಟ್ ದರ ಹೆಚ್ಚಳದ ಮೂಲಕ ಅವರ ಮೇಲೆಯೇ ವರ್ಗಾಯಿಸುವ ಸಾಧ್ಯತೆ ದಟ್ಟವಾಗಿದೆ.

ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್ (BETPL) ಟೋಲ್ ಪರಿಷ್ಕರಣೆ

ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುವ 9.98 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಹಾಗೂ ಸಿಲ್ಕ್ ಬೋರ್ಡ್‌ನಿಂದ ಕರ್ನಾಟಕ-ತಮಿಳುನಾಡು ಗಡಿಯವರೆಗಿನ 24.36 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 44 ರ ಟೋಲ್ ಶುಲ್ಕವನ್ನೂ ಸಹ ಹೆಚ್ಚಿಸಲಾಗಿದೆ.

ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ (BETPL) ಪ್ರಕಾರ, ಮಾರ್ಚ್ 31, 2026 ರ ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿ ಈ ದರಗಳನ್ನು ಪರಿಷ್ಕರಿಸಲಾಗಿದ್ದು, ಇವು ಜೂನ್ 30, 2027 ರವರೆಗೆ ಜಾರಿಯಲ್ಲಿರಲಿವೆ. ನಾಲ್ಕು ಪಥಗಳನ್ನು ಹೊಂದಿರುವ ಈ ಎತ್ತರಿಸಿದ ಎಕ್ಸ್‌ಪ್ರೆಸ್‌ವೇ ಬೆಂಗಳೂರಿನ ಅತಿ ಉದ್ದದ, ಫೈಓವರ್ ಎಂಬ ಹೆಗ್ಗಳಿಕೆ ಪಡೆದಿದೆ

ಹೊಸ ದರ ಪಟ್ಟಿ ಇಂತಿದೆ

  • ಕಾರು / ಜೀಪ್ / ವ್ಯಾನ್ ದಿನದ ಪ್ರಯಾಣ (Multiple Trips) ಹಳೆಯ ದರ 95 , ಹೊಸ ದರ 100
  • ಕಾರು / ಜೀಪ್ / ವ್ಯಾನ್ ಮಾಸಿಕ ಪಾಸ್ (Monthly Pass) ಹಳೆಯ ದರ 1,885 , ಹೊಸ ದರ 1,960
  • ದ್ವಿಚಕ್ರ ವಾಹನಗಳು ಮಾಸಿಕ ಪಾಸ್ (Monthly Pass) ಹಳೆಯ ದರ 755, ಹೊಸ ದರ 785
  • ಅತ್ತಿಬೆಲೆ ಟೋಲ್ ಪ್ಲಾಜಾ (ಕಾರುಗಳು) ಬಹು ಪ್ರಯಾಣ (Multiple Trips) ಹಳೆಯ ದರ 55 , ಹೊಸ ದರ 60

ರಾಷ್ಟ್ರೀಯ ಹೆದ್ದಾರಿ-44 ರ (NH-44) ಈ 24.365 ಕಿಲೋಮೀಟರ್ ಉದ್ದದ ವಿಭಾಗವನ್ನು ನಿರ್ವಹಿಸಲು ಸ್ಥಾಪಿಸಲಾದ ವಿಶೇಷ ಉದ್ದೇಶದ ವಾಹನವೇ (SPV) ಈ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್ (BETPL) ಆಗಿದೆ. ಮುಂಬೈ ಮೂಲದ ಗ್ಲೋಬಲ್ ಇನ್‌ಫ್ರಾಸ್ಟ್ರಕ್ಚರ್ ಪಾರ್ಟ್‌ನರ್ಸ್ (GIP) ಸಂಸ್ಥೆಯು ಇದರ ರಿಯಾಯಿತಿ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಇಂದಿನಿಂದಲೇ ಜಾರಿಗೆ ಬರುವ ಈ ದರ ಹೆಚ್ಚಳವು ದಿನನಿತ್ಯ ಆಫೀಸ್‌ಗೆ ಓಡಾಡುವ ಐಟಿ ಉದ್ಯೋಗಿಗಳಿಗೆ ಮತ್ತು ವಾಣಿಜ್ಯ ವಾಹನಗಳ ಮಾಲೀಕರಿಗೆ ಆರ್ಥಿಕ ಹೊರೆಯಾಗಲಿದೆ.

PREV
Read more Articles on
click me!

Recommended Stories

ಮಂಗಳೂರು: ಭಾರೀ ಮಳೆಗೆ ನಾಗುರಿಯಲ್ಲಿ ನಸುಕಿನ ವೇಳೆ ಗುಡ್ಡ ಕುಸಿದು ಬಿಹಾರಿ ಕುಟುಂಬ ಸೇರಿ ಮೂರು ಸಾವು!
ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಮೂರು ಸರ್ಕಾರಿ ಕಾಲೇಜುಗಳಲ್ಲಿ ಬಿಎ ವಿಭಾಗ ಬಂದ್‌