
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ನಗರದ ನಾಗುರಿ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿದಂತೆ ಒಟ್ಟು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮೂವರನ್ನು ರಕ್ಷಿಸಲಾಗಿದೆ.
ದುರಂತ ಸಂಭವಿಸಿದ ಈ ಜಾಗದಲ್ಲಿ ಒಟ್ಟು ನಾಲ್ಕು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದವು ಎನ್ನಲಾಗಿದೆ. ಈ ಪೈಕಿ ಬಿಹಾರ ಮೂಲದ ಒಂದು ಕುಟುಂಬ ಹಾಗೂ ಸ್ಥಳೀಯ ದಂಪತಿ ವಾಸವಿದ್ದ ಎರಡು ಮನೆಗಳ ಸಮೀಪದಲ್ಲಿ ಗುಡ್ಡವಿದ್ದು, ಗುಡ್ಡದ ಮಣ್ಣು ತಡೆಗೋಡೆ ಒಮ್ಮೆಲೇ ಕುಸಿದು ಬಿದ್ದಿದೆ. ಪರಿಣಾಮ ನಸುಕಿನ ಜಾವ ನಿದ್ರೆಯಲ್ಲಿದ್ದವರ ಮೇಲೆ ಗೋಡೆ ಕುಸಿದಿದೆ.
ಮೂಲತಃ ಬಿಹಾರ ರಾಜ್ಯದವರಾದ ಲಾಲ್ ಬಾಬು ಎಂಬುವವರ ಕುಟುಂಬ ಕಳೆದ 20 ವರ್ಷಗಳಿಂದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ಈ ಪ್ರದೇಶದಲ್ಲಿ ವಾಸಿಸುತ್ತಿತ್ತು. ಲಾಲ್ ಬಾಬು ಅವರು ಪತ್ನಿ ಇಂದು ಹಾಗೂ ಮಕ್ಕಳಾದ ಅನುಷಾ, ಅಲ್ಕಾ, ಅನಾಮಿಕ ಚೌರಾಸಿಯ ಮತ್ತು ಪರಿ ಎಂಬುವವರ ಜೊತೆ ಇಲ್ಲಿ ನೆಲೆಸಿದ್ದರು. ದುರಂತ ಸಂಭವಿಸಿದ ವೇಳೆ ಮನೆಯಲ್ಲಿದ್ದ ಒಟ್ಟು ಆರು ಜನರ ಪೈಕಿ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ.
ಅನಾಮಿಕ ಚೌರಾಸಿಯ (8 ವರ್ಷ) ಮತ್ತು ಪರಿ (4 ವರ್ಷ) ಮೃತಪಟ್ಟ ದುರ್ಧೈವಿಗಳು. ಲಾಲ್ ಬಾಬು ಹಾಗೂ ಅವರ ಪತ್ನಿ ಇಂದು ಸುರಕ್ಷಿತವಾಗಿದ್ದಾರೆ. ಮಕ್ಕಳಾದ ಅಲ್ಕಾ (14 ವರ್ಷ) ಮತ್ತು ಅನುಷಾ (11 ವರ್ಷ) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ಆವರಣದ ಮತ್ತೊಂದು ಮನೆಯಲ್ಲಿ ಸ್ಥಳೀಯರಾದ ಬಾಲಕೃಷ್ಣ ಹಾಗೂ ಶಾಂತಾ ದಂಪತಿ ವಾಸವಾಗಿದ್ದರು. ಮಣ್ಣಿನ ರಾಶಿ ಮನೆ ಬಿದ್ದ ರಭಸಕ್ಕೆ ಗೋಡೆ ಕುಸಿದು ಬಿದ್ದಿದ್ದು, ಶಾಂತಾ (46 ವರ್ಷ) ಎಂಬ ಮಹಿಳೆ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಅವರ ಪತಿ ಬಾಲಕೃಷ್ಣ (48 ವರ್ಷ) ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಎನ್‌ಡಿಆರ್‌ಎಫ್ (NDRF) ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಅತ್ಯಂತ ಸವಾಲಿನ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅವಶೇಷಗಳ ಅಡಿಯಲ್ಲಿ ಸಿಲುಕಿ ನರಳಾಡುತ್ತಿದ್ದ ಬಾಲಕೃಷ್ಣ ಹಾಗೂ ಇಬ್ಬರು ಯುವತಿಯರನ್ನು (ಅಲ್ಕಾ ಮತ್ತು ಅನುಷಾ) ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗಳಿಗೆ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.