ಧಾರವಾಡ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ನಿವೃತ್ತಿ ವೇತನ ನೀಡಲು ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವರದಿ : ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಆ.24): ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದುವರೆ ತಿಂಗಳಿಂದ ಜಿಲ್ಲೆಯಲ್ಲಿ ಲೋಕಯುಕ್ತ ಅಧಿಕಾರಿಗಳು ಭಾರಿ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ 6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನ ಪತ್ತೆ ಹಚ್ಚಿದ್ದರು. ಇಂದು ಸಹ ಧಾರವಾಡ ಜಿಲ್ಲಾ ಉಪ ನಿರ್ದೇಶಕರ (ಡಿಡಿಪಿಯು) ಕಚೇರಿಯ ಮೆಲೆ ಲೋಕಾಯುಕ್ತ ಎಸ್‌ಪಿ ಸತಿಶ್ ಚಿಟಗುಬ್ಬಿ ಮತ್ತು ಡಿವೈಎಸ್‌ಪಿ ವಿಜಯ ಬಿರಾದರ ಸೇರಿ ಲಂಚ ಸ್ವಿಕರಿಸುವ ಇಬ್ಬರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಪದವಿ ಪೂರ್ವ ಕಾಲೇಜಿನ ನಿವೃತ್ತ ಪಾಂಶುಪಾಲರಾದ ಸುಭಾಷ್ ಜವರೆಡ್ಡಿ, ತಮ್ಮ ನಿವೃತ್ತಿ ವೇತನವನ್ನ ದಾಖಲಾತಿಗಳನ್ನ ಮೂವ್ ಮಾಡಲು ಡಿಡಿಪಿಯು ಕಚೇರಿ ಪ್ರಥಮ ದರ್ಜೆ ಸಹಾಯಕ ನಾಗರಾಜ್ ಹೂಗಾರ್ ಮತ್ತು ಸೆಕ್ಷನ್ ಆಪೀಸರ್ ದುರ್ಗಾದಾಸ್ ಮಸೂತಿ ಸೇರಿ 15,000 ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನೀವು ಹಣ ಕೊಟ್ಟರಷ್ಟೇ ನಿಮ್ಮ ಫೈಲ್ ಮುಂದಕ್ಕೆ ಕಳುಹಿಸುತ್ತೇವೆ ಎಂದು ಕಳೆದೊಂದು ವಾರದ ಹಿಂದೆ ಬೇಡಿಕೆ ಇಟ್ಟಿದ್ದರು. ಇನ್ನು ಸರ್ಕಾರಕ್ಕಾಗಿ ಕಳೆದ 25 ವರ್ಷಗಳಿಗಿಂತ ಹೆಚ್ಚಿನ ಅವಧಿ ಸೇವೆ ಮಾಡಿದರೂ ನೆಮ್ಮದಿಯಾಗಿ ನಿವೃತ್ತಿ ವೇತನವನ್ನು ಕೊಡದೇ ಲಂಚ ಕೇಳುತ್ತಿದ್ದ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಲೋಕಾಯುಕ್ತ ಅಧಿಕಾರಿಗಳ ಮೊರೆ ಹೋಗಿದ್ದರು.
ಭಾರತದ ಉಪಗ್ರಹ ಚಂದ್ರನ ಮುಟ್ಟಿದರೂ, ಗೊಲ್ಲರಹಟ್ಟಿಯಲ್ಲಿ ಮೌಢ್ಯ ಆಚರಣೆ ನಿಂತಿಲ್ಲ
ನಿವೃತ್ತ ಪ್ರಾಂಶುಪಾಲರಾದ ಸುಭಾಷ್ ಜವರೆಡ್ಡಿ ದೂರನ್ನು ಆಧರಿಸಿ, ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಬ್ಬಿ, ಡಿ ವೈ ಎಸ್ ಪಿ ವಿಜಯ ಬಿರಾದರ ಗುರುವಾರ ಬೆಳಗ್ಗೆ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಸುಭಾಷ್ ಜವರೆಡ್ಡಿ ಅವರಿಂದ ಡಿಡಿಪಿಯು ಕಚೇರಿಯ ಸಿಬ್ಬಂದಿ ಲಂಚವನ್ನ ಸ್ವಿಕರಿಸುವಾಗ ಏಕಾ ಏಕಿ ದಾಳಿ ಮಾಡಿ ಅಧಿಕಾರಿಗಳನ್ನ ವಶಕ್ಕೆ ಪಡೆಯಲಾಗಿದೆ. ಸದ್ಯ ಲೋಕಾಯುಕ್ತ ಪೋಲಿಸರು ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳಿಂದ ಮಹತ್ವದ ದಾಖಲಾತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಈ ಹಿಂದೆ ನಡೆಸಲಾಗಿದ್ದ ಲಂಚಾವತಾರದ ಬಗ್ಗೆಯೂ ವಿಚಾರಣೆ ಮಾಡುತ್ತಿದ್ದಾರೆ.
ಕರ್ನಾಟಕಕ್ಕೂ ಕಾಲಿಟ್ಟ ಯುಪಿ ಮೇಡ್ ಗಾಂಜಾ ಚಾಕ್ಲೆಟ್: ಬೆಂಗಳೂರಿನಲ್ಲಿ ಮಾರಾಟ
ಧಾರವಾಡ ಡಿಡಿಪಿಯು ಕಚೇರಿಯ ಸೆಕ್ಷನ್ ಆಪೀಸರ್ ದುರ್ಗಾದಾಸ್ ಮತ್ತು ಪ್ರಥಮ ದರ್ಜೆ ಸಹಾಯಕ ನಾಗರಾಜ್ ಹೂಗಾರ ಮನೆಗಳಿಗೆ ಲೋಕಾಯುಕ್ತ ಪೋಲಿಸರು ಭೇಟಿ ನೀಡಿದ್ದಾರೆ. ಇಬ್ಬರು ಅಧಿಕಾರಿಗಳ ಮನೆ ಮತ್ತು ಇತರೆ ವೈಯಕ್ತಿಕ ಕಚೇರಿಗಳಲ್ಲಿ ಇಟ್ಟುಕೊಳ್ಳಲಾಗಿದ್ದ ದಾಖಲಾತಿ ಪತ್ರಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡುವುದಲ್ಲದೇ ಕೆಲವು ದಾಖಲಾತಿಗಳನ್ನು ಮನೆಗೆ ಕೊಂಡೊಯ್ದು ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂಬುದು ಇದರಿಂದ ತಿಳಿದುಬಂದಿದೆ. ಸದ್ಯಕ್ಕೆ ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಅದಾಯಕ್ಕಿಂತ ಹೆಚ್ಚಿಗೆ ಮಾಡಿದ್ದಾರೆಯೇ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈಗ ತನಿಖೆ ಮುಂದುವರೆದಿದ್ದು, ಮತ್ತಷ್ಟು ಅಕ್ರಮಗಳು ಬಯಲಿಗೆ ಬರುವ ಸಾಧ್ಯತೆಯಿದೆ.