ಭಾರತದ ಉಪಗ್ರಹ ಚಂದ್ರನ ಮುಟ್ಟಿದರೂ, ಗೊಲ್ಲರಹಟ್ಟಿಯಲ್ಲಿ ಮೌಢ್ಯ ಆಚರಣೆ ನಿಂತಿಲ್ಲ
ಬೆಂಗಳೂರಿನ ಇಸ್ರೋ ಸಂಸ್ಥೆಯು 4 ಲಕ್ಷ ಕಿ.ಮೀ. ದೂರದ ಚಂದ್ರನ ಮೇಲಿನ ಯಂತ್ರವನ್ನು ನಿಯಂತ್ರಿಸುತ್ತಿದೆ. ಆದರೆ, 100 ಕಿ.ಮೀ ದೂರವಿರುವ ಗೊಲ್ಲರಹಟ್ಟಿಯಲ್ಲಿ ಮೌಢ್ಯಾಚರಣೆ ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಆ.24): ಬೆಂಗಳೂರಿನ ಇಸ್ರೋ ಸಂಸ್ಥೆಯು 4 ಲಕ್ಷ ಕಿ.ಮೀ. ದೂರದ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ, ಇಸ್ರೋ ಸಂಸ್ಥೆಯಿಂದ 100 ಕಿ.ಮೀ ದೂರವಿರುವ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಮಹಿಳೆ ಮೈಲಿಗೆ ಎಂಬ ಆಚರಣೆಯನ್ನು ನಿಲ್ಲಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಗೊಲ್ಲರಹಟ್ಟಿಯಲ್ಲಿ ಮೈಲಿಗೆ ಮೌಢ್ಯಾಚರಣೆ ಸಂಪ್ರದಾಯಕ್ಕೆ ಮಗುವೊಂದು ಮೃತಪಟ್ಟಿದ ಘಟನೆ ಇತ್ತಿಚಿಗಷ್ಟೇ ತುಮಕೂರು ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಮತ್ತೊಂದು ಮೈಲಿಗೆ ಸಂಪ್ರದಾಯ ಘಟನೆ ಬೆಳಕಿಗೆ ಬಂದಿದೆ. ಆದರೆ, ಇಡೀ ಜಗತ್ತಿಗೇ ಮಾದರಿ ಆಗುವಂತಹ 3.8 ಲಕ್ಷ ಕಿ.ಮೀ. ದೂರದಲ್ಲಿರುವ ಚಂದ್ರನ ಅಂಗಳಕ್ಕೆ ರೋವರ್ ಇಳಿಸಿದ ಕೀರ್ತಿ ಸಾಧಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕೇಂದ್ರದ 100 ಕಿ.ಮೀ ಅಂತರದಲ್ಲಿರುವ ಗೊಲ್ಲರಹಟ್ಟಿಯಲ್ಲಿ ಹೆಣ್ಣು ಮೈಲಿಗೆ ಎಂಬ ಆಚರಣೆ, ಅವೈಜ್ಞಾನಿಕತೆ ಮತ್ತು ಮೌಡ್ಯಾಚರಣೆ ಸಂಪ್ರದಾಯಗಳು ನಿಂತಿಲ್ಲ. ಚಂದ್ರಯಾನದಲ್ಲಿ ಯಶಸ್ವಿಯಾಗಿ ದೇಶವೇ ಹೆಮ್ಮೆ ಪಡುತ್ತಿದ್ದರೂ ಇನ್ನೂ ಹೆಣ್ಣು ಮೈಲಿಗೆ ಎಂಬ ಮೌಢ್ಯತೆ ಮಾತ್ರ ಜೀವಂತವಾಗಿಯೇ ಇದೆ.
ಊರಾಚೆ ಬಾಣಂತಿ ಇಡುವ ಮೌಢ್ಯಕ್ಕೆ ಮಗು ಸಾವು: ಈ ಮೌಢ್ಯಕ್ಕೆ ಕೊನೆಯೆಂದು?
ಹೌದು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮತ್ತೊಂದು ಮೈಲಿಗೆ ಸಂಪ್ರದಾಯ ಪ್ರಕರಣ ನಡೆದಿದೆ. ಒಂಭತ್ತು ತಿಂಗಳು ಗರ್ಭಿಣಿಗೆ ಹೆರಿಗೆ ಆಗುತ್ತಿದ್ದಂತೆ, ಆಕೆ ಮೈಲಿಗೆ ಆಗಿದ್ದಾಳೆಂದು ಗೊಲ್ಲರ ಸಮುದಾಯವು ಹಸಿ ಬಾಣಂತಿಯೊಬ್ಬಳನ್ನು ಊರ ಹೊರಗೆ ಇರಿಸಲಾಗಿತ್ತು. ಈ ಮೌಢ್ಯಾಚರಣೆ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಗುಬ್ಬಿ ತಾಲೂಕು ನ್ಯಾಯಾಲಯದ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಅವರು ಗೊಲ್ಲರಹಟ್ಟಿ ಗ್ರಾಮಕ್ಕೆ ನೀಡಿ, ಮಗು ಮತ್ತು ಬಾಣಂತಿಯನ್ನು ರಕ್ಷಣೆ ಮಾಡಿದ್ದಾರೆ.
ಮಗು ಮತ್ತು ತಾಯಿ ಇಬ್ಬರೂ ಮೈಲಿಗೆ ಆಗಿದ್ದಾರೆ ಎಂದು ಅವರನ್ನು ಊರಿನಿಂದ ಹೊರಗೆ ಇಟ್ಟಿದ್ದ ಸ್ಥಳಕ್ಕೆ ತೆರಳಿದ ನ್ಯಾಯಾಧೀಶೆ ಮಂಜುಳಾ ಅವರು, ಸ್ವತಃ ತಾವೇ ಮಗುವನ್ನು ಕೈಗೆತ್ತಿಕೊಂಡು ಮನೆಗೆ ಕರೆತಂದಿದ್ದಾರೆ. ಈ ಮೂಲಕ ಗ್ರಾಮಸ್ಥರೆಲ್ಲರ ಎದುರೇ ನ್ಯಾಯಾಧೀಶೆ ಮಂಜುಳಾ, ಮೌಢ್ಯ ಸಂಪ್ರದಾಯಕ್ಕೆ ಅಂತ್ಯ ಹಾಡಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಇಂತಹ ಘಟನೆ ಮತ್ತೆ ಮರುಕಳಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಸಧ್ಯ ಮಗು ಮತ್ತು ಬಾಣಂತಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
Chandrayaan-3 Mission: ಲ್ಯಾಂಡರ್‌ನಿಂದ ಯಶಸ್ವಿಯಾಗಿ ಕೆಳಗಿಳಿದ ರೋವರ್, ಚಂದ್ರನ ಮೇಲೆ ನಡೆದಾಡಿದ ಭಾರತ
ಈಗಾಗಲೇ ಕೆಲವು ದಿನಗಳ ಹಿಂದೆ ಬಾಣಂತಿಯೊಬ್ಬರನ್ನು ಮೈಲಿ ಸಂಪ್ರದಾಯ ಕಾರಣದಿಂದ ಗ್ರಾಮದಿಂದ ಆಚೆಗೆ ಇರಿಸಲಾಗಿತ್ತು. ಪ್ರಾಣಿಗಳಿಗೂ ಯೋಗ್ಯವಲ್ಲದ ಚಿಕ್ಕ ಗುಡಿಸಲಿನಲ್ಲಿ ಮಗು ಬಾಣಂತಿ ಇಟ್ಟಿದ್ದರಿಂದ, ಗಾಳಿ ಮಳೆಯಲ್ಲಿ ಚಳಿಯಿಂದ ನಡುಗುತ್ತಾ ಮಗು ಸ್ಥಳದಲ್ಲಿಯೇ ಮೃತಪಟ್ಟಿತ್ತು. ಈ ವೇಳೆ ತಾಲೂಕಿನ ತಹಸೀಲ್ದಾರರು ಹಾಗೂ ನ್ಯಾಯಾಧೀಶರು ಜಂಟಿಯಾಗಿ ಗ್ರಾಮಕ್ಕೆ ಬಂದು ಭೇಟಿ ನೀಡಿ ಗ್ರಾಮಸ್ಥರಿಗೆ ಹಾಗೂ ಬಾಣಂತಿ ಕುಟುಂಬ ಸದಸ್ಯರಿಗೆ ತಿಳಿ ಹೇಳಲಾಗುತ್ತು. ಈ ಘಟನೆಯ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ಚಂದ್ರನ ಅಂಗಳದಲ್ಲಿರುವ ಯಂತ್ರವನ್ನು ಭೂಮಿ ಮೇಲಿಂದಲೇನಿಯಂತ್ರಣ ಮಾಡುವಷ್ಟು ವೈಜ್ಞಾನಿಕತೆ ಬೆಳೆದರೂ, ಹೆಣ್ಣು ಮೈಲಿಗೆ ಎಂಬ ಮೌಡ್ಯಾಚರಣೆ ನಿಲ್ಲಬೇಕಿದೆ ಎಂದು ತಿಳಿಸಿದರು.