* ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 3000 ಕೋಟಿ ರೂ. ಅನುದಾನ
* ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಖಡಕ್ ಸೂಚನೆ
* ಡಿಸೆಂಬರ್ ಒಳಗಾಗಿಯೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದ ದತ್ತಾತ್ರೇಯ ಪಾಟೀಲ ರೇವೂರ
ವರದಿ :- ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ, (ಏ.12): ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ 2022-23ನೇ ಸಾಲಿಗೆ ರಾಜ್ಯ ಸರ್ಕಾರ 3000 ಕೋಟಿ ರೂ. ಅನುದಾನ ನೀಡಿದ್ದು, ಕ್ರಿಯಾ ಯೋಜನೆಯನ್ನು ಇದೇ ಏಪ್ರಿಲ್ ಮಾಹೆಯಲ್ಲಿಯೆ ಮಂಡಳಿಯಿಂದ ಅನುಮೋದನೆ ಪಡೆದುಕೊಂಡು ಈ ವರ್ಷದ ಡಿಸೆಂಬರ್ ಒಳಗಾಗಿಯೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇಂದು (ಮಂಗಳವಾರ) ಇಲ್ಲಿನ ಮಂಡಳಿಯ ಕಚೇರಿಯಲ್ಲಿ ಕಲಬುರಗಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗದ ಬಗ್ಗೆ ವಿಶೇಷ ಕಾಳಜಿ ಹೊಂದಿ ಪ್ರಸಕ್ತ ಸಾಲಿಗೆ ದಾಖಲೆ ಪ್ರಮಾಣದಲ್ಲಿ 3000 ಕೋಟಿ ರೂ. ಅನುದಾನ ನೀಡಿದ್ದು, ಇದನ್ನು ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಮರ್ಪಕವಾಗಿ ವಿನಿಯೋಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
Kalyana Karnataka ನವ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ ಅನುದಾನ!
ಆಯಾ ಜಿಲ್ಲಾಧಿಕಾರಿಗಳು ಜಿಲ್ಲೆಯ ಶಾಸಕರನ್ನು ಸಂಪರ್ಕಿಸಿ ಕ್ರಿಯಾ ಯೋಜನೆಗೆ ಪ್ರಸ್ತಾವನೆ ಪಡೆದು ಏಪ್ರಿಲ್ ಮಾಹೆಯಲ್ಲಿಯೇ ಮಂಡಳಿಗೆ ಕ್ರಿಯಾ ಯೋಜನೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಹೇಳಿದರು.
ಪ್ರಗತಿ ಪರಿಶೀಲನೆ ವೇಳೆ ಕಲಬುರಗಿ ಜಿಲ್ಲೆಯಲ್ಲಿ 2016-17ನೇ ಸಾಲಿನ ಕಾಮಗಾರಿಗಳು ಇನ್ನು ಪೂರ್ಣವಾಗದಿರುವುದನ್ನು ಗಮನಿಸಿದ ಅವರು ನಾಲ್ಕೈದು ವರ್ಷವಾದರು ಜಿಲ್ಲೆಯಲ್ಲಿ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದರೆ ಹೇಗೆ ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು. ಮಂಡಳಿ ವ್ಯಾಪ್ತಿಯ ಇತರೆ ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಕಾಣಲಾಗುತ್ತಿದೆ ಆದರೆ ಕಲಬುರಗಿಯಲ್ಲಿ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಅನುಷ್ಟಾನ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರದೇಶದ ಒಳಿತಿಗೆ ಮಂಡಳಿ ಕೆಲಸ ಮಾಡುತ್ತಿದೆ. ಅಭಿವೃದ್ಧಿಯ ವೇಗ ಹೆಚ್ಚಿಸಬೇಕಿದೆ ಎಂದ ಅವರು ಅಧಿಕಾರಿಗಳ ನಿಧಾನಗತಿ ಕೆಲಸ, ಕೆಲಸದಲ್ಲಿ ಆಲಸ್ಯತನ ಮಂಡಳಿ ಸಹಿಸುವುದಿಲ್ಲ. ಕೆಲಸ ಮಾಡುವುದಾದರೆ ಇಲ್ಲಿರಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಗೈರಾದವರಿಗೆ ನೋಟಿಸ್:
ಸಭೆಯ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಕೆಲ ಅಧಿಕಾರಿಗಳ ಗೈರಿಂದ ಸಿಡಿಮಿಡಿಗೊಂಡ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಅನುದಾನ ಬೇಕೆಂದಾಗ ಬರ್ತಾರೆ, ಆದರೆ ಪ್ರಗತಿ ಪರಿಶೀಲನಾ ಸಭೆ ಕರೆದಾಗ ಬರಲ್ಲ ಎಂದರೆ ಏನರ್ಥ ಎಂದು ಅತೃಪ್ತಿ ವ್ಯಕ್ತಪಡಿಸಿ ಇಂದಿನ ಸಭೆಗೆ ಗೈರಾದವರಿಗೆ ನೋಟಿಸ್ ಜಾರಿ ಮಾಡುವಂತೆ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ ಮಂಡಳಿ ಕಾರ್ಯದರ್ಶಿ ಆರ್.ವೆಂಕಟೇಶ ಕುಮಾರ್ ಮಾತನಾಡಿ ಪ್ರಸಕ್ತ 2022-23ನೇ ಸಾಲಿಗೆ ಜಿಲ್ಲೆಗಳು ಕ್ರಿಯಾ ಯೋಜನೆಯನ್ನು ಕೂಡಲೆ ಸಲ್ಲಿಸಬೇಕು. ಒಂದು ವೇಳೆ ಕಾಮಗಾರಿ ಬದಲಾವಣೆಗಳಿದ್ದರೆ ಅವುಗಳು ಏಪ್ರಿಲ್ 30ರೊಳಗೆ ಪ್ರಸ್ತಾವನೆ ಸಲ್ಲಿಸಿ ಸರಿಪಡಿಸಿಕೊಂಡು ಮೇ ಮಾಹೆಯಿಂದಲೆ ಕಾಮಗಾರಿ ಆರಂಭಿಸಬೇಕು. ಮಂಡಳಿ ಕಾಮಗಾರಿಗಳಿಗೆ ಎಲ್ಲಾ ಅನುಷ್ಠಾನ ಏಜೆನ್ಸಿಗಳು ಪ್ರಥಮಾದ್ಯತೆ ನೀಡಬೇಕು. ಇನ್ನು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪ್ರತಿ ವಾರ ಮಂಡಳಿಯ ಕಾಮಗಾರಿಗಳನ್ನು ಪ್ರಗತಿ ಪರಿಶೀಲನೆ ಮಾಡಿ ಮಂಡಳಿಗೆ ವರದಿ ಸಲ್ಲಿಸಬೇಕೆಂದರು.
ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಸಂಸ್ಥೆಗಳಾದ ಕೆ.ಆರ್.ಐ.ಡಿ.ಎಲ್ ಮತ್ತು ನಿರ್ಮಿತಿ ಕೇಂದ್ರಕ್ಕೆ ವಹಿಸಲಾದ ಕಾಮಗಾರಿಗಳಲ್ಲಿ ಬಹುತೇಕ ಇನ್ನು ಪೂರ್ಣಗೊಳ್ಳದೆ ಬಾಕಿ ಇವೆ. ಇತರೆ ಅನುಷ್ಟಾನ ಏಜೆನ್ಸಿಗಳಂತೆ ಟೆಂಡರ್ ಪ್ರಕ್ರಿಯೆಯಿಂದ ವಿನಾಯ್ತಿ ಪಡೆದರು ಕೆಲಸ ವೇಗವಾಗಿ ಸಾಗುತ್ತಿಲ್ಲವೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಕೆ.ಆರ್.ಐ.ಡಿ.ಎಲ್ ಮತ್ತು ನಿರ್ಮಿತಿ ಕೇಂದ್ರಗಳಿಗೆ ಇತರೆ ಅನುಷ್ಟಾನ ಏಜೆನ್ಸಿಗಳಿಗೆ ನೀಡುವಂತೆ ಟೈಮ್ ಬಾಂಡ್ ನೀಡಲಾಗುವುದು. ಅದರಂತೆ ಕಾರ್ಯನಿರ್ವಹಿಸಬೇಕು ಎಂದರು.
ಅಧಿಕಾರಿಗಳಿಗೆ ಎಚ್ಚರಿಕೆ:
ಕೊಪ್ಪಳ, ಬಳ್ಳಾರಿ, ಯಾದಗಿರಿಯಲ್ಲಿ ಕೆಲಸವಾಗುತ್ತಿದೆ ಕಲಬುರಗಿಯಲ್ಲಿ ಏಕೆ ನಿಧಾನಗತಿ. ಟೆಂಡರ್ ಕರೆಯುವ ಅಧಿಕಾರ ಅನುಷ್ಟಾನ ಏಜೆನ್ಸಿಗಳಿಗೆ ನೀಡಲಾಗಿದೆ. ಮಂಡಳಿಯಲ್ಲಿ ಯಾವುದೇ ಕೆಲಸ ತಡವಾಗುತ್ತಿಲ್ಲ. ಪ್ರಸ್ತಾವನೆ ಬಂದ ದಿನವೇ ಅಥವಾ ಮರುದಿನ ಅನುಮೋದನೆ ನೀಡಲಾಗುತ್ತಿದೆ. ಹೀಗಿದ್ದರು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಅಧಿಕಾರಿಗಳು ಕೆಲಸದ ಕಾರ್ಯಶೈಲಿ ಬದಲಾಯಿಸಿಕೊಳ್ಳಬೇಕು. 2-3 ವರ್ಷದ ನಂತರ ಕೆಲಸ ಬದಲಾವಣೆಗೆ ಪ್ರಸ್ತಾವನೆ ಕಳುಹಿಸವುದೆಂದರೆ ಹೇಗೆ? ಇದು ಕೆಲಸ ಮಾಡುವ ರೀತಿನಾ? ನಿಮ್ಮ ಈ ನಿಧಾನಗತಿಯಿಂದ ಮಂಡಳಿಗೆ ಕೆಟ್ಟ ಹೆಸರು ಬರುತ್ತದೆ ಎಂದ ಅವರು ಇದೇ ರೀತಿ ಮುಂದುವರೆದರೆ ಮಂಡಳಿಗೆ ನೀಡಿರುವ ಅಧಿಕಾರದಂತೆ ಅನುಷ್ಟಾನ ಏಜೆನ್ಸಿಗಳ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಏಪ್ರಿಲ್ 15 ಡೆಡ್‍ಲೈನ್:
2019-20ನೇ ಸಾಲಿನ ಕ್ರಿಯಾ ಯೋಜನೆಯಡಿ ಮಂಜೂರಾಗಿ ಇದೂವರೆಗೆ ಆಡಳಿತಾತ್ಮಕ ಅನುಮೋದನೆ ಪಡೆಯದ ಕಾಮಗಾರಿಗಳಿಗೆ ಇದೇ ಏಪ್ರಿಲ್ 15 ರೊಳಗೆ ಆಯಾ ಜಿಲ್ಲೆಗಳ ಡಿ.ಸಿ ಮೂಲಕ ಪ್ರಸ್ತಾವನೆ ಸಲ್ಲಿಸಿ ಆಡಳಿತಾತ್ಮಕ ಅನುಮೋದನೆ ಪಡೆಯಬೇಕು. ಪ್ರಸ್ತಾವನೆ ಸಲ್ಲಿಸಿದ ದಿನವೇ ಮಂಡಳಿಯಿಂದ ಅನುಮೋದನೆ ನೀಡಲಾಗುವುದು. ನಿಗಧಿತ ಅವಧಿಯಲ್ಲಿ ಪ್ರಸ್ತಾವನೆ ಬಾರದಿದ್ದಲ್ಲಿ ಅಂತಹ ಕಾಮಗಾರಿಗಳನ್ನು ಕೈಬಿಡಲಾಗುವುದು ಎಂದು ಆರ್.ವೆಂಕಟೇಶ ಕುಮಾರ್ ಅನುಷ್ಠಾನ ಏಜೆನ್ಸಿಗಳಿಗೆ ಸ್ಪಷ್ಟಪಡಿಸಿದರು.
ಮಂಡಳಿಯಿಂದಲೇ ಮಾಸಿಕ ಪರಿಶೀಲನೆ:
ಇನ್ನು ಮುಂದೆ ಮಂಡಳಿಯು ಪ್ರತಿ ಮಾಹೆ ಎಲ್ಲಾ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಲಿದೆ. ಇಂದು ಕಲಬುರಗಿಯಲ್ಲಿ ನಡೆಸಲಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ಪ್ರದೇಶದ ಉಳಿದ ಜಿಲ್ಲೆಗಳ ಪ್ರಗತಿ ಪರಿಶೀಲನೆ ಮಾಡಲಾಗುವುದು. ಅನುಷ್ಟಾನ ಅಧಿಕಾರಿಗಳು ಪ್ರತಿ ಕಾಮಗಾರಿಗಳ ಪ್ರಗತಿಯ ವಿವರಗಳನ್ನು ಮಂಡಳಿಯ ವೆಬ್ ಪೋರ್ಟ್‍ಲ್‍ನಲ್ಲಿ ಸರಿಯಾಗಿ ಮಾಹಿತಿ ಅಪ್ಲೋಡ್ ಮಾಡಬೇಕು ಎಂದು ಆರ್.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ ಸಾಸಿ, ಮಂಡಳಿಯ ಉಪ ಕಾರ್ಯದರ್ಶಿ ರಾಚಪ್ಪಾ, ಜಂಟಿ ನಿರ್ದೇಶಕಿ ಪ್ರವೀಣಪ್ರಿಯಾ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಮಹಾನಗರ ಪಾಲಿಕೆಯ ಆಯುಕ್ತ ಡಾ. ಶಂಕರ ವಣಿಕ್ಯಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.