⦁ ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಮರಾಠಿ ದ್ವಂದ್ವಾರ್ಥ ಹಾಡಿಗೆ ಹೆಜ್ಜೆ.
⦁ ಕ.ಸಾ.ಪ ಅಧ್ಯಕ್ಷರ ಮರಾಠಿ ಪ್ರೇಮಕ್ಕೆ ಸಾಕ್ಷಿಯಾದ ಸಮ್ಮೇಳನ.
⦁ ರೊಚ್ಚಿಗೆದ್ದ ಕನ್ನಡಪ್ರೇಮಿಗಳು, ಕವಿತೆ ಬರೆದು ವಕೀಲನ ಆಕ್ರೋಶ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಮಾ.30): ಕನ್ನಡ ಕಂಪು ಸೂಸಲು, ಕನ್ನಡ ಜಾಗೃತಿಗೆ, ಗಡಿ ಜಿಲ್ಲೆಗಳಲ್ಲಿ ಕನ್ನಡದ ಪ್ರೇಮ ಬಿತ್ತಲು ಕನ್ನಡ ಸಂಘಗಳು, ಕನ್ನಡ ಸಾಹಿತ್ಯ ಪರಿಷತ್ ಗಳು ನಿರಂತರವಾಗಿ ಪ್ರಯತ್ನಿಸುತ್ತಲೆ ಇವೆ. ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟ. ಅಂತರಾಷ್ಟ್ರೀಯ ಮಟ್ಟದಲ್ಲು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡದ ಕಂಪನ್ನ ವಿಶ್ವದ ಮೂಲೆ ಮೂಲೆಗು ಹರಡುತ್ತಿವೆ, ಇದ್ರಲ್ಲಿ ಅನುಮಾನವೇ ಬೇಡ. ಆದ್ರೆ ಕನ್ನಡ ಜಾಗೃತಿ, ಕನ್ನಡ ಪ್ರೇಮ ಹೆಚ್ಚಿಸುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಬೇರೆ ಭಾಷೆಗಳೇ ವಿಜೃಂಭಿಸಿದ್ರೆ ಏನ್ ಗತಿ ಹೇಳಿ.. ಗುಮ್ಮಟನಗರಿ ವಿಜಯಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ್ದು ಇದೇನೆ. ಸಮ್ಮೇಳನದ ವೇದಿಕೆ ಮೇಲೆ ಜಿಲ್ಲಾ ಕಸಾಪ ಅಧ್ಯಕ್ಷರ ಮರಾಠಿ ಪ್ರೇಮ ಉಕ್ಕಿ ಹರಿದಿದೆ. ಅಪ್ಪಟ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
undefined
ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೆ ಮರಾಠಿ ವಿಜೃಂಭಣೆ: ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲ್ಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ಮರಾಠಿ ಆರ್ಭಟ ಜೋರಾಗಿದೆ. ಇದೆ ಮರಾಠಿ ಭಾಷಿಕರಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳು ನಮಗೆಲ್ಲ ಗೊತ್ತೆ ಇದೆ. ಆದ್ರೆ ಇಂಥ ಬೆಳವಣಿಗಳ ನಡುವೆ ವಿಜಯಪುರದಲ್ಲಿ ಕಳೆದ ಮಾ.26, 27ರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಮರಾಠಿ ವಿಜೃಂಭಿಸಿದೆ. ಆಯೋಜಕರ ಯಡವಟ್ಟೋ ಅಥವಾ ವಿಜಯಪುರ ಕ.ಸಾ.ಪ ಅಧ್ಯಕ್ಷ ಹಾಸೀಂಪೀರ್ ವಾಲಿಕಾರ್ ನಿರ್ಲಕ್ಷವೋ ಗೊತ್ತಿಲ್ಲ.. ಯುವತಿಯೊಬ್ಬಳು ದ್ವಂದ್ವಾರ್ಥ ಇರುವ ಮರಾಠಿ ಹಾಡಿಗೆ ಭರ್ಜರಿ ನೃತ್ಯ ಮಾಡಿದ್ದಾಳೆ. ಪರಿಣಾಮ ಕನ್ನಡ ಸಮ್ಮೇಳನ ವೇದಿಕೆ ಕ್ಷಣಕಾಲ ಮರಾಠಿಮಯವಾಗಿ ಹೋಗಿತ್ತು.
ಮರಾಠಿ ಕುಣಿತಕ್ಕೆ ಕ.ಸಾ.ಪ ಅಧ್ಯಕ್ಷ, ಪದಾಧಿಕಾರಿಗಳ ಚಪ್ಪಾಳೆ: ಇನ್ನು ವೇದಿಕೆ ಮೇಲೆ ಮರಾಠಿಯ "ಮೀ ಜಾವುದ್ಯಾನ ಗರಿ ವಾಜಲೇಕಿ ಬಾರಾ" ಹಾಡಿಗೆ ಯುವತಿ ಕುಣಿಯುತ್ತಿದ್ರೆ ಇತ್ತ ವಿಜಯಪುರ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಹಾಸೀಂ ಪೀರ್ ವಾಲಿಕಾರ್ ಚಪ್ಪಾಳೆ ತಟ್ಟಿದ್ದಾರೆ.. ವೇದಿಕೆ ಮೇಲಿದ್ದ ಪದಾಧಿಕಾರಿಗಳು ಇದಕ್ಕೆ ಕೈ ಜೋಡಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಭಾಷೆಯ ದ್ವಂದವಾರ್ಥ ಹಾಡು ವಿಜೃಂಭಿಸುತ್ತಿದ್ದರೆ ಕಳವಳ ವ್ಯಕ್ತ ಪಡೆಸಬೇಕಾದವರೇ ಕುಂತು ಚಪ್ಪಾಳೆ ತಟ್ಟಿದ್ದಾರೆ. ಇನ್ನು ವೇದಿಕೆಯಲ್ಲಿ ಒಂದೆಡೆ ಮರಾಠಿ ಹಾಡು, ಕುಣಿತಗಳು ಆರ್ಭಟಿಸುತ್ತಿದ್ದರೆ ಅಪ್ಪಟ ಕನ್ನಡಪ್ರೇಮಿಗಳು ಮುಜುಗರ ಅನುಭವಿಸಬೇಕಾಯ್ತು.. ಇನ್ನು ಸಮ್ಮೇಳನಕ್ಕೆ ಹೊರಗಿನಿಂದ ಬಂದ ಕನ್ನಡದ ಕಟ್ಟಾಳುಗಳ ಪಾಡು ಹೇಳತೀರದಂತಾಗಿತ್ತು.
ಪರೀಕ್ಷೆ ಬರೆಯಲು ಹೊರಟ ವಿಜಯಪುರ ವಿದ್ಯಾರ್ಥಿಗೆ ತಿಥಿ ಮಾಡಿ ಕಿಡಿಗೇಡಿಗಳ ಕಾಟ!
ಇದಕ್ಕು ಮೊದಲು ನಡೆದಿತ್ತು ಕನ್ನಡದ ಕಲಾವಿದರಿಗೆ ಅಪಮಾನ: ಹೀಗೆ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕನ್ನಡಕ್ಕೆ ಅಪಮಾನವಾಗಿದ್ರೆ, ಇದಕ್ಕು ಮೊದಲು ಸಮ್ಮೇಳನದಲ್ಲಿ ಪಾಲ್ಗೊಂಡ ಕನ್ನಡದ ಕಲಾ ತಂಡಗಳಿಗು ಅಪಮಾನ ಎಸಗಲಾಗಿದೆ. ದಿನಾಂಕ ಮಾ.26 ರಂದ ಸಮ್ಮೇಳನ ಉದ್ಘಾಟನೆಯ ದಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾತಂಡಗಳಿಗೆ ಅವಾಚ್ಯವಾಗಿ ನಿಂದಿಸಲಾಗಿದೆ. ಬಬಲೇಶ್ವರ ತಾಲೂಕಿನ ಕಾಕಂಡಕಿಯಿಂದ ಆಗಮಿಸಿದ್ದ ಕಲಾತಂಡದ ಕಲಾವಿದರಿಗೆ ಆಯೋಜಕನೊಬ್ಬ ಒದೆಯುತ್ತೇನೆ ಎಂದಿದ್ದ. ಇದರಿಂದ ಸಿಟ್ಟಿಗೆದ್ದ ಕಲಾವಿದರು ಸಮ್ಮೇಳನದ ಆವರಣದಲ್ಲಿ ಆಕ್ರೋಶ ಹೊರಹಾಕಿದ್ರು. ಇನ್ನು ಕಸಾಪ ಜಿಲ್ಲಾಧ್ಯಕ್ಷ ಹಾಸೀಂ ಪೀರ್ ವಾಲಿಕಾರ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರು. ಕನ್ನಡ ಸಮ್ಮೇಳನದಲ್ಲಿ ಕನ್ನಡದ ಕಲಾತಂಡಗಳಿಗೆ, ಸ್ವತಃ ಕನ್ನಡಕ್ಕಾದ ಅಪಮಾನ ಕಂಡು ಕನ್ನಡಿಗರೆ ಮಮ್ಮಲ ಮರುಗಿದ್ದಾರೆ.
ಅಪಮಾನ ಖಂಡಿಸಿ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು: ಇನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾದ ಅಪಮಾನ, ಕಲಾ ತಂಡದ ಕಲಾವಿದರಿಗಾದ ಅಪಮಾನಗಳನ್ನ ಕಂಡು ಈಗ ಅಪ್ಪಟ ಕನ್ನಡಪ್ರೇಮಿಗಳು ಕುದಿಕುದಿ ಕೆಂಡವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕ್ತಿದ್ದಾರೆ. ಪೇಸ್ಬುಕ್ ಗಳಲ್ಲಿ "ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ದ್ವಂದ್ವಾರ್ಥ ನೃತ್ಯ !!! ಕಸಾಪ ಪದಾಧಿಕಾರಿಗಳ ಚಪ್ಪಾಳೆ.. ಇದು ಕನ್ನಡಕ್ಕೆ ಮಾಡಿದ ಅಪಮಾನ" ಎಂದು ಪೇಸ್ಬುಕ್, ವಾಟ್ಸಾಪ್ ಗಳಲ್ಲಿ ಪೋಸ್ಟ್ ಹಾಕುವ ಮೂಲಕ ಆಕ್ರೋಶ ಹೊರಹಾಕ್ತಿದ್ದಾರೆ. ಇನ್ನು "ದೊಡ್ಡ ಸಾಹಿತಿಗಳು ರಾಜಕೀಚಕರ ಬಾಲಗೊಂಚಿಗಳಾದರೇ, ಸಾಹಿತ್ಯಕ್ಕೆ ಅಪಮಾನ.. ರಾಜಕೀಯಕ್ಕಾಗಿ ಕನ್ನಡ ಕಾರ್ಯಕ್ರಮ ಬಳಕೆ ಮಾಡಿದ್ರೆ ಕನ್ನಡಕ್ಕೆ ಅಪಮಾನ" ಎಂದು ಪೋಸ್ಟ್ ಗಳನ್ನ ಹಾಕಿ ಅಸಮಧಾನ ಹೊರಹಾಕ್ತಿದ್ದಾರೆ.
ಕನ್ನಡಕ್ಕಾದ ಅಪಮಾನ ಖಂಡಿಸಿ ಕವಿತೆ ಬರೆದ ವಕೀಲ: ಇನ್ನು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾದ ಅಪಮಾನ ಖಂಡಿಸಿ ಎಲ್ಲೆ ಆಕ್ರೋಶ ವ್ಯಕ್ತವಾಗ್ತಿರೋವಾಗಲೇ ವಿಜಯಪುರದ ಸಾಹಿತಿ, ಕವಿಯೊಬ್ಬರು ತಮ್ಮದೆ ಶೈಲಿಯಲ್ಲಿ ಸಿಟ್ಟು ಹೊರಹಾಕಿದ್ದಾರೆ. ವಕೀಲರಾಗಿರುವ ಸಾಹಿತಿ, ಕವಿ ಮಲ್ಲಿಕಾರ್ಜುನ್ ಭೃಂಗಿಮಠ ಕನ್ನಡಕ್ಕಾದ ಅವಮಾನದ ಬಗ್ಗೆ ಕವಿತೆ ಬರೆದಿದ್ದಾರೆ. ಕವಿತೆಯುದ್ದಕ್ಕು ಕಸಾಪ ಪದಾಧಿಕಾರಿಗಳು, ಅಧ್ಯಕ್ಷರ ವಿರುದ್ಧ ಹರಿಹಾಯ್ದಿದ್ದಾರೆ.. ಇದೆ ಕವಿತೆ ಈಗ ಎಲ್ಲೆಡೆ ವೈರಲ್ ಆಗ್ತಿದೆ.
Vijayapura: ತಾಯಿಗಾಗಿ ದೇಗುಲವನ್ನೇ ಕಟ್ಟಿದ ಮಗ..!
ಕಸಾಪ ಜಿಲ್ಲಾಧ್ಯಕ್ಷರ ಬೇಷರತ್ ರಾಜೀನಾಮೆಗೆ ಆಗ್ರಹ: 2 ದಿನಗಳ ಮಟ್ಟಿಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾದ ಅಪಮಾನ ಕನ್ನಡಿಗರನ್ನ ರೊಚ್ಚಿಗೆಬ್ಬಿಸಿದೆ. ಅಲ್ಲದೆ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೆ ಕನ್ನಡಕ್ಕೆ ಈ ಪರಿಸ್ಥಿತಿಯಾದ್ರೆ ಹೇಗೆ ಅಂತಾ ಸಾಹಿತಿಗಳು, ಕವಿಗಳು, ಕನ್ನಡಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ. ಇದೆಲ್ಲದರ ನಡುವೆ ಎಲ್ಲ ಯಡವಟ್ಟುಗಳ ಹೊಣೆಯನ್ನ ಹೊತ್ತು ಕಸಾಪ ಜಿಲ್ಲಾಧ್ಯಕ್ಷರೇ ರಾಜೀನಾಮೆ ನೀಡುವಂತೆ ಒತ್ತಾಯ ಕೇಳಿ ಬರ್ತಿದೆ. ಜಿಲ್ಲಾಧ್ಯಕ್ಷ ಹಾಸೀಂ ಪೀರ್ ವಾಲಿಕಾರ್ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು, ಬೇಷರತ್ ರಾಜೀನಾಮೆ ನೀಡಬೇಕು ಎನ್ನುವ ಕೂಗು ಕೇಳಿ ಬರ್ತಿದೆ.. ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೇ ಕನ್ನಡಕ್ಕಾದ ಅಪಮಾನದ ವಿರುದ್ಧ ಕನ್ನಡಪ್ರೇಮಿಗಳು ಸಿಡಿದೆದ್ದಿದ್ದಾರೆ.