Bengaluru: ಕೊರೋನಾ ಭಯವಿಲ್ಲ; ಮಾಸ್ಕ್‌ ಮಾಯ..!

By Girish Goudar  |  First Published Mar 30, 2022, 4:59 AM IST

*  ಕೋವಿಡ್‌ ಇಳಿಮುಖವಾಗುತ್ತಿದ್ದಂತೆ ನಿಯಮಗಳು ಗಾಳಿಗೆ
*  ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುತ್ತಿದ್ದ ಮಾರ್ಷಲ್‌ಗಳು ಮಾಯ
*  ಬಿಗಿ ಕಳೆದುಕೊಳ್ಳುತ್ತಿರುವ ಮಾಸ್ಕ್‌ ಕಡ್ಡಾಯ ನಿಯಮ
 


ಬೆಂಗಳೂರು(ಮಾ.30):  ಕೋವಿಡ್‌-19(Covid-19) ಸಂಪೂರ್ಣವಾಗಿ ಮರೆಯಾಗಿರದಿದ್ದರೂ ಜನರು ಕೋವಿಡ್‌ ನಿಯಮಗಳನ್ನು ಪಾಲಿಸುವುದನ್ನು ಸಂಪೂರ್ಣವಾಗಿ ಮರೆಯುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಸಹಜ ಜನಜೀವನದ ಅವಿಭಾಜ್ಯ ಅಂಗವಾಗಿದ್ದ ‘ಮಾಸ್ಕ್‌ ಸಂಸ್ಕೃತಿ’(Mask Culture) ಇದೀಗ ವಿರಳವಾಗುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸಬೇಕು ಎಂಬ ನಿಯಮ ಚಾಲ್ತಿಯಲ್ಲಿದ್ದರೂ ಅದರ ಅನುಷ್ಠಾನ ಬಿಗು ಕಳೆದುಕೊಂಡಿದೆ. ಇದರಿಂದಾಗಿ ಮಾಸ್ಕ್‌ ವ್ಯಾಪಾರ ಕೂಡ ಮಸುಕಾಗಿದೆ.

ಎಂಜಲು ಮತ್ತು ಗಾಳಿಯ ಮೂಲಕ ಕೋವಿಡ್‌ ಹರಡುತ್ತಿರುವುದು ಖಾತರಿ ಆಗುತ್ತಿದ್ದಂತೆ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. 2020ರ ಮಾರ್ಚ್‌ನಲ್ಲಿ ಪ್ರಾರಂಭಗೊಂಡ ಮಾಸ್ಕ್‌ ನಿಯಮ ಇನ್ನೂ ಅಧಿಕೃತವಾಗಿ ಜಾರಿಯಲ್ಲಿದೆ. ಸದ್ಯ ವಿದೇಶದ ಅನೇಕ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದರೂ, ರೂಪಾಂತರಿ ತಳಿಗಳ ಅಪಾಯ ಇದ್ದರೂ ರಾಜ್ಯದ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದ್ದು ಜನರ ಸೇರುವಿಕೆ, ಓಡಾಟ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಮಾಸ್ಕ್‌ ಧಾರಣೆ ಹೆಚ್ಚು ಕಟ್ಟುನಿಟ್ಟಾಗಿ ಜಾರಿಯಲ್ಲಿರಬೇಕಿತ್ತು. ಆದರೆ, ಸದ್ಯ ಕೋವಿಡ್‌ ಪ್ರಕರಣಗಳು ಕಡಿಮೆ ಎಂಬ ಕಾರಣದಿಂದ ಮಾಸ್ಕ್‌ ಧಾರಣೆಯಿಂದ ಜನ ವಿಮುಖರಾಗುತ್ತಿದ್ದು ಸರ್ಕಾರ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

Tap to resize

Latest Videos

undefined

Covid Crisis: ಶಾಂಘೈ ಲಾಕ್‌ಡೌನ್‌: ನಾಯಿ ಜತೆಗೂ ಹೊರಬರುವಂತಿಲ್ಲ..!

ಲಾಕ್‌ಡೌನ್‌(Lockdown) ಜಾರಿಯಲ್ಲಿದ್ದಾಗ ಜನಸಾಮಾನ್ಯರ ಓಡಾಟ ಕಡಿಮೆ ಇದ್ದರೂ ಮಾಸ್ಕ್‌ ಧರಿಸಿಲ್ಲ, ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ ಎಂದು ಪ್ರತಿದಿನ ಲಕ್ಷಗಟ್ಟಲೆ ದಂಡವನ್ನು ಬಿಬಿಎಂಪಿಯ(BBMP) ಮಾರ್ಷಲ್‌ಗಳು ವಿಧಿಸುತ್ತಿದ್ದರು. 2020ರ ಮೇಯಿಂದ 16.53 ಕೋಟಿ ದಂಡವನ್ನು ನಿಯಮ ಪಾಲಿಸದವರಿಂದ ವಸೂಲಿ ಮಾಡಲಾಗಿದೆ. ಮೊದಲ ಎರಡು ಅಲೆಗಳಿದ್ದಾಗ ಹಾಗೆಯೇ ಅಲೆ ಕ್ಷೀಣವಾಗಿದ್ದಾಗಲೂ ದಂಡ ವಸೂಲಿ ನಡೆದೇ ಇತ್ತು. ಮೂರನೇ ಅಲೆ ಇದ್ದ 2022ರ ಜನವರಿ, ಫೆಬ್ರವರಿಯಲ್ಲಿ ಪ್ರತಿದಿನ ಲಕ್ಷಗಟ್ಟಳೆ ದಂಡ ವಸೂಲಿ ಮಾಡಿದ್ದ ಬಿಬಿಎಂಪಿ ಮಾರ್ಚ್‌ ಹೊತ್ತಿಗೆ ಉತ್ಸಾಹ ಕಳೆದುಕೊಂಡಿದೆ.

ಮಾ.7ರ ಬಳಿಕ ಒಂದೇ ಒಂದು ದಿನವೂ ಹತ್ತು ಸಾವಿರಕ್ಕಿಂತ ಹೆಚ್ಚು ದಂಡ ವಸೂಲಾಗಿಲ್ಲ. ಸದ್ಯ ಪ್ರತಿದಿನ 15 ರಿಂದ 25 ಪ್ರಕರಣ ದಾಖಲಿಸಿ 5 ಸಾವಿರದಿಂದ 7 ಸಾವಿರ ದಂಡ ವಸೂಲಿಗಷ್ಟೆ ಕೋವಿಡ್‌ ಮುನ್ನೆಚ್ಚರಿಕೆ ನಿಯಮಗಳ ಅನುಷ್ಠಾನ ಸೀಮಿತವಾಗಿದೆ.

ಮಾಸ್ಕ್‌ ಮಾರಾಟ, ಉತ್ಪಾದನೆ ಕುಸಿತ!

ಇನ್ನು ಜನರ ಓಡಾಟ ಹೆಚ್ಚಿದ್ದರೂ ಮಾಸ್ಕ್‌ ಕೊಳ್ಳುವಿಕೆ ಭಾರಿ ಕಡಿಮೆ ಆಗಿದೆ. ಈ ಹಿಂದೆ ಮೆಡಿಕಲ್‌ ಶಾಪ್‌ಗಳಲ್ಲಿ ದಿನವೊಂದಕ್ಕೆ 100-150 ಎನ್‌-95 ಮಾಸ್ಕ್‌ಗಳು ಮಾರಾಟವಾಗುತ್ತಿದ್ದವು. ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಕೆಮಿಸ್ಟ್‌ ಅಂಡ್‌ ಡ್ರಗ್ಗಿಸ್ಟ್‌ ಒಕ್ಕೂಟದ ಕಾರ್ಯದರ್ಶಿ ಎ.ಕೆ. ಜೀವನ್‌, ಕೋವಿಡ್‌ನ ಆರಂಭದಲ್ಲಿ ಮಾಸ್‌್ಕಗೆ ಭಾರಿ ಬೇಡಿಕೆ ಇತ್ತು. ಈ ಹಿಂದೆ ಸರ್ಜರಿ ಸಂದರ್ಭದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮಾತ್ರ ಬಳಸುತ್ತಿದ್ದ ಮಾಸ್‌್ಕಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿತ್ತು. ಆ ಬಳಿಕ ಬೇಡಿಕೆ ತಗ್ಗಿತ್ತು. ಆದರೆ ಈಗ ಮೆಡಿಕಲ್‌ ಶಾಪ್‌ಗಳಲ್ಲಿ ಮಾಸ್‌್ಕ ಮಾರಾಟವಾಗುವುದೇ ವಿರಳ. ದಿನಕ್ಕೆ ಒಂದೆರಡು ಮಾಸ್‌್ಕ ಮಾರಾಟವಾದರೆ ಹೆಚ್ಚು ಎಂದು ಹೇಳುತ್ತಾರೆ.

Covid Crisis: ಚೀನಾದ ಶಾಂಘೈ ಸಂಪೂರ್ಣ ಲಾಕ್‌ಡೌನ್‌: ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್‌ ಟೆಸ್ಟ್‌

ಗಾರ್ಮೆಂಟ್‌ ಅಂಡ್‌ ಟೆಕ್ಸ್‌ಟೈಲ್‌ ವರ್ಕರ್ಸ್‌ ಯುನಿಯನ್‌ನ ಜಯರಾಮ್‌ ಪ್ರಕಾರ, ಕೋವಿಡ್‌ನ ಆರಂಭದ ದಿನದಲ್ಲಿ ಮಾಸ್ಕ್‌ ತಯಾರಿಕೆಗೆ ವಿಪರೀತ ಬೇಡಿಕೆ ಬಂದಿತ್ತು. ಆಗ ಅನೇಕ ಗಾರ್ಮೆಂಟ್‌ ಕಂಪೆನಿಗಳು ಇತರ ಕೆಲಸ ನಿಲ್ಲಿಸಿ ಮಾಸ್ಕ್‌ ತಯಾರಿಕೆಗೆ ಇಳಿದಿದ್ದವು. ಆದರೆ ಈಗ ದೊಡ್ಡ ಕಂಪೆನಿಗಳು ಮಾಸ್ಕ್‌ ತಯಾರಿಕೆ ನಿಲ್ಲಿಸಿವೆ. ಹತ್ತು-ಇಪ್ಪತ್ತು ಸಿಬ್ಬಂದಿ ಇರುವ ಸಣ್ಣ ಕೆಲ ಗಾರ್ಮೆಂಟ್‌ ಕಂಪೆನಿಗಳು ಮಾತ್ರ ಮಾಸ್ಕ್‌ ತಯಾರಿಸುತ್ತಿವೆ ಎಂದು ಹೇಳುತ್ತಾರೆ.

ಮಾಸ್ಕ್‌ ವಿನಾಯ್ತಿ ಕೊಟ್ಟರೆ ಸಂಕಷ್ಟ

ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರ ಪ್ರಕಾರ, ಭಾರತದಂತಹ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ಬಂದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಆದರೆ ಮಾಸ್ಕ್‌ ಧಾರಣೆಗೆ ವಿನಾಯಿತಿ ನೀಡಬಾರದು. ಕೋವಿಡ್‌ ಹಬ್ಬುವುದನ್ನು ತಡೆಯುವಲ್ಲಿ ಮಾಸ್ಕ್‌ ಧಾರಣೆ ಪ್ರಮುಖ ಪಾತ್ರ ವಹಿಸುತ್ತದೆ. ರೂಪಾಂತರಿ ತಳಿಗಳು ಬಂದ ತಕ್ಷಣವೇ ನಮ್ಮ ಅರಿವಿಗೆ ಬರುವುದಿಲ್ಲ. ಕನಿಷ್ಠ ಪಕ್ಷ ತಿಂಗಳಾದರೂ ಬೇಕಾಗುತ್ತದೆ. ಆದ್ದರಿಂದ ಕೋವಿಡ್‌ ಹರಡುವುದನ್ನು ನಿಯಂತ್ರಿಸಲು ಮಾಸ್ಕ್‌  ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿರಬೇಕು ಎಂದು ಹೇಳುತ್ತಾರೆ.
 

click me!