ಮೊದಲ ಅಲೆಯಲ್ಲಿ 6 ತಿಂಗಳ ಕಾಲ ಹರಡಿದ್ದ ಸೋಂಕು ಎರಡನೆ ಅಲೆಯಲ್ಲಿ ಒಂದೇ ತಿಂಗಳಲ್ಲಿ ಹರಡುತ್ತಿದೆ. ಕಳೆದ ಬಾರಿ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ವ್ಯಾಪಿಸಿದ್ದ ಸೋಂಕು ಈ ಬಾರಿ ಹಳ್ಳಿ ಹಳ್ಳಿಗಳಲ್ಲಿಯೂ ಅಬ್ಬರಿಸುತ್ತಿದೆ.
ಚಿಕ್ಕಬಳ್ಳಾಪುರ (ಮೇ.02): ಮೊದಲ ಅಲೆಯಲ್ಲಿ ಕೊರೋನಾ ಸಂಕಷ್ಟದಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಜಿಲ್ಲೆಯ ಹಳ್ಳಿಗಾಡಿನ ಜನತೆ ಈಗ ಎರಡನೇ ಅಲೆ ಶುರುವಾದ ಬಳಿಕ ಅಕ್ಷರಶಃ ನಲುಗುವಂತಾಗಿದೆ.
ಜಿಲ್ಲೆಯ 40ಕ್ಕೂ ಹೆಚ್ಚು ಹಳ್ಳಿಗಳು ಈಗ ಕೊರೋನಾ ಹಾಟ್‌ಸ್ಪಾಟ್ ಆಗಿದ್ದು ಕಳೆದ 15 ದಿನಗಳಿಂದಲೂ ಜಿಲ್ಲೆಯ ಹಳ್ಳಿಗಳಲ್ಲಿ ಕೊರೋನಾ ಸೋಂಕಿತರು ನೂರಾರು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿಯು ಕೊರೋನಾ ಮರಣ ಮೃದಂಗ ಭಾರಿಸುತ್ತಿರುವುದು ಜಿಲ್ಲೆಯ ಗ್ರಾಮೀಣ ಜನತೆ ನಿದ್ದೆಗೆಡಿಸಿದ್ದು ಜಿಲ್ಲೆಯಲ್ಲಿ ಕೊರೋನಾ ಹಾಟ್‌ಸ್ಪಾಟ್‌ಗಳು ಇನ್ನಷ್ಟುಹೆಚ್ಚಾಗುವ ಆತಂಕ ಶುರುವಾಗಿದೆ.
ವಲಸೆಗೆ ತತ್ತರಿಸಿದ 58 ಗ್ರಾಮಗಳು : ಸೋಂಕಿತರ ಹಾವಳಿಯಿಂದ ಹಾಟ್‌ಸ್ಪಾಟ್
ಜಿಲ್ಲೆಯ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಗೌರಿಬಿದನೂರು ತಾಲೂಕಿನ ಗ್ರಾಮಾಂತರ ಭಾಗದ 40 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊರೋನಾ ಅರ್ಭಟ ನಡೆಸುತ್ತಿದ್ದು ನಿತ್ಯ ಗ್ರಾಮಗಳಲ್ಲಿ 10, 30, 40 ಸೋಂಕಿತರು ಕಂಡು ಬರುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಮಂಚನಬಲೆಯಲ್ಲಿ ಒಂದೇ ಗ್ರಾಮದಲ್ಲಿ 35 ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇದ್ದರೆ ಜಿಲ್ಲಾಡಳಿತಕ್ಕೆ ಕೂಗಳತೆಯ ದೂರದಲ್ಲಿರುವ ಪಟ್ರೇನಹಳ್ಳಿ ಗ್ರಾಪಂ ವ್ಯಾಪ್ತಿಯ ಪಟ್ರೇನಹಳ್ಳಿ, ಅಂದಾರ್ಲಹಳ್ಳಿ ಗ್ರಾಮಗಳಲ್ಲಿ ಬರೋಬ್ಬರಿ 51ಕ್ಕೂ ಹೆಚ್ಚು ಕೊರೋನಾ ಸಕ್ರಿಯ ಪ್ರಕರಣಗಳು ಇವೆ. ಇನ್ನೂ ಗೌರಿಬಿದನೂರಿನ ಅಲೀಪುರ, ಡಿ.ಪಾಳ್ಯ, ನಗರಗರೆ ಗ್ರಾಮಗಳಲ್ಲಿ ಕೂಡ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಿದ್ದು ಶಿಡ್ಲಘಟ್ಟತಾಲೂಕಿನ ದಿಬ್ಬೂರು, ಜಂಗಮಕೊಟೆ ಹೋಬಳಿಯ ಮೇಲೂರು, ಮಳ್ಳೂರು, ಕುಂದುಲಗುರ್ಕಿ ಗ್ರಾಮಗಳಲ್ಲಿ ಕೊರೋನಾ ಸೋಂಕಿತರ ನಿತ್ಯ 10, 20 ಸಂಖ್ಯೆಯಲ್ಲಿ ಕಂಡು ಬರುತ್ತಿದೆ.
ಚಿಂತಾಮಣಿಯ ಏನಿಗದಲೆ, ಬಟ್ಲಹಳ್ಳಿ, ಕೋನಾಪುರ, ಸಂತೇಕಲ್ಲಹಳ್ಳಿ, ಕೈವಾರ, ಮುರಗಮಲ್ಲ ಗ್ರಾಮಗಳಲ್ಲಿ ಕೊರೋನಾ ನಾಗಾಲೋಟದಲ್ಲಿ ಸಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದವರು ತಮ್ಮ ತಮ್ಮ ಊರುಗಳಿಗೆ ವಾಪಸ್ಸು ತೆರಳಿದ್ದು ಇದರ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಆರ್ಭಟ ಜೋರಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona