ಉಗುರು ಬೆಚ್ಚನ್‌ ನೀರ್‌ ಕುಡೀರಿ, ಹೆದ್ರಬ್ಯಾಡ್ರಿ: ಸೋಂಕಿತರಿಗೆ ಧೈರ್ಯ ತುಂಬಿದ HK ಪಾಟೀಲ್‌

By Kannadaprabha NewsFirst Published May 2, 2021, 1:43 PM IST
Highlights

ಸೋಂಕಿತರ ಜತೆ ಜೂಮ್‌ ಮಿಟಿಂಗ್‌ ನಡೆಸಿದ ಕಾಂಗ್ರೆಸ್‌ ನಾಯಕ ಎಚ್‌.ಕೆ. ಪಾಟೀಲ್‌| 78ಕ್ಕೂ ಹೆಚ್ಚು ಜನ ಸೋಂಕಿತರು ಭಾಗಿ| ತಮ್ಮ ಸಮಸ್ಯೆ ದೂರುಗಳನ್ನು ಹೇಳಿ ಅಲ್ಲಿಯೇ ಪರಿಹಾರ ಪಡೆದುಕೊಂಡ ಕೊರೋನಾ ಸೋಂಕಿತರು| 

ಗದಗ(ಮೇ.02):  ನಿಮ್ಮ ರೂಂನ್ಯಾಗ ಒಳ್ಳೆ ಪುಸ್ತಾಕ ಓದ್ರಿ.. ಅಧ್ಯಾತ್ಮ, ಒಳ್ಳೆ ಸಂಗೀತ ಕೇಳ್ರಿ, ಉಗುರು ಬೆಚ್ಚನ್‌ ನೀರ್‌ ಆಗಾಗ ಕುಡೀರಿ, ಡಾಕ್ಟರ್‌ ಹೇಳಿದ ಔಷಧ ತಪ್ಪದ ತೊಗೋರಿ, ಯಾವುದಕ್ಕೂ ಹೆದ್ರಬ್ಯಾಡ್ರಿ... ಹೀಗೆ ಧೈರ್ಯದ ಮಾತು ಹೇಳಿದ್ದು ಗದಗ ಶಾಸಕ, ಹಿರಿಯ ಕಾಂಗ್ರೆಸ್‌ ಮುಖಂಡ ಎಚ್‌.ಕೆ. ಪಾಟೀಲ. ಶನಿವಾರ ಹುಲಕೋಟಿ ರೂರಲ್‌ ಮೆಡಿಕಲ್‌ ಸರ್ವೀಸ್‌ ಸಂಸ್ಥೆಯ ಸಹಯೋಗದಲ್ಲಿ ಗದಗ ವಿಧಾನಸಭಾ ವ್ಯಾಪ್ತಿಯ ಸೋಂಕಿತರೊಂದಿಗೆ ಮತ್ತೊಮ್ಮೆ ಜೂಮ್‌ ಮೀಟಿಂಗ್‌ ನಡೆಸಿ ಅವರಲ್ಲಿ ಧೈರ್ಯ ತುಂಬಿದ್ದಾರೆ.

78 ಜನ ಭಾಗಿ

ಶನಿವಾರ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು 78ಕ್ಕೂ ಹೆಚ್ಚು ಜನ ಸೋಂಕಿತರು ಭಾಗಿಯಾಗಿ ತಮ್ಮ ಸಮಸ್ಯೆ ದೂರುಗಳನ್ನು ಹೇಳಿ ಅಲ್ಲಿಯೇ ಪರಿಹಾರ ಪಡೆದುಕೊಂಡರು. ಒಂದೂವರೆ ಗಂಟೆ ನಡೆದ ಈ ಸಭೆಯಲ್ಲಿ ಬಹುತೇಕರಿಂದ ಕೇಳಿ ಬಂದ ಪ್ರಶ್ನೆಗಳು ಮಾನಸಿಕ ಒತ್ತಡ ನಿವಾರಣೆ ಹೇಗೆ? ಹಾಗೂ ಆಹಾರ ಮತ್ತು ಅನುಸರಿಸಬೇಕಾದ ಯೋಗ ಪದ್ಧತಿಯ ಬಗ್ಗೆ.

"

ಪ್ರಶ್ನೆ - ಡಾಕ್ಟರ್‌ ನನಗ್‌ ಪಾಸಿಟಿವ್‌ ಆಗೈತಿ ಅಂತಾ ಫೋನ್‌ ಮಾಡಿ ಹೇಳಿ 5 ದಿವಸ ಆತು, ನನಗ್‌ ಯಾವ ಗುಳಿಗೆ ಔಷಧಿ ಕೊಟ್ಟಿಲ್ಲ.

ಡಾ. ಪ್ರೇಮಾ - ಇಲ್ಲ, ನಿಮಗೆ ಕರೆ ಮಾಡಿದ ದಿನದಂದೇ ನಿಮ್ಮ ಸಂಬಂಧಿಕರಿಗೆ ಗದಗ ನಗರದ ಹಳೆಯ ಜಿಲ್ಲಾ ಆಸ್ಪತ್ರೆಗೆ ಬಂದು ಕಿಟ್‌ ತೆಗೆದುಕೊಂಡು ಹೋಗಲು ತಿಳಿಸಿರುತ್ತಾರೆ. ನಿಮ್ಮವರು ಯಾರೂ ಬಂದಿಲ್ಲ ಅಂತಾ ಕಾಣಿಸುತ್ತದೆ. ಸದ್ಯ ನೀವು ಮನೆಯಲ್ಲಿದ್ದು, ಖಾಸಗಿ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುತ್ತಿರುವ ಔಷಧಿ ಸಾಕು...

ಕರ್ಫ್ಯೂನಿಂದಾಗಿ ತಾಯಿಯ ಕೆಲಸ ಸ್ಥಗಿತ: ಕುಟುಂಬ ನಿರ್ವಹಣೆಗೆ ಹೆಗಲುಕೊಟ್ಟ ಪುಟ್ಟ ಬಾಲಕ..!

ಪ್ರಶ್ನೆ - ನನ್ನ ಮಡದಿಗೆ ಪಾಸಿಟಿವ್‌ ಆಗಿದೆ, ಅದಕ್ಕಾಗಿ ಮನೆಯಲ್ಲಿರುವ ನಾವೆಲ್ಲಾ ತಪಾಸಣೆಗೆ ಒಳಗಾಗಿದ್ದೇವೆ, ಆದರೆ ಕೆಲವರ ವರದಿ ಬಂದಿವೆ, ಇನ್ನು ಕೆಲವರ ಮಾಹಿತಿ ಬಂದಿಲ್ಲ. ಈ ಬಗ್ಗೆ ನಾವು ಹೊರಗೆ ಬಂದು ಕೇಳುವಂತಿಲ್ಲ. ನಾವೆಲ್ಲರೂ ಒಳಗೆ ಇದ್ದೇವೆ. ಇದಕ್ಕೆ ಪರಿಹಾರ ಏನು?

ಡಾ. ಪ್ರೇಮಾ - ಈ ರೀತಿ ಆಗುವ ಸಾಧ್ಯತೆ ಕಡಿಮೆ. ನಿಮ್ಮ ಸ್ವ್ಯಾಬ್‌ ತೆಗೆದುಕೊಂಡ ದಿನ ನಿಮಗೆ ಕೊಟ್ಟನಂಬರ್‌ ಕೊಡಿ, ಸಂಜೆಯ ಒಳಗೆ ಇದನ್ನು ಪರಿಶೀಲಿಸಿ ನಿಮ್ಮ ವಾಟ್ಸ್‌ಆ್ಯಪ್‌ಗೆ ಮಾಹಿತಿ ನೀಡಲಾಗುವುದು.

ಪ್ರಶ್ನೆ - ನಾವು ಯಾವ ರೀತಿ ಯೋಗಾಸನ ಮಾಡಬೇಕು?

ಡಾ. ಹೊಂಬಾಳಿ - ನೀವು ಫ್ರೀ ಆಗಿ ಅದೀವಿ ಅಂತಾ ನಿಮಗೆ ಬಂದಿರುವ, ನೋಡಿರುವ ಎಲ್ಲ ಆಸನಗಳನ್ನು ಮಾಡಬೇಡಿ. ಶ್ವಾಸಕೋಶದಲ್ಲಿ ಹೆಚ್ಚಿನ ಗಾಳಿ ಹಿಡಿಯುವಂತೆ ದೀರ್ಘ ಉಸಿರಾಟ ಮಾಡಿ, ನಿಧಾನವಾಗಿ ಪ್ರಾಣಾಯಾಮ ರೂಢಿ ಮಾಡಿಕೊಳ್ಳಿ, ಬಿಸಿಯಾದ ಆಹಾರ ಸೇವಿಸಿ.

ಪ್ರಶ್ನೆ - ಹೋಂ ಐಸೋಲೇಶನ್‌ನಲ್ಲಿದ್ದ ವೇಳೆಯಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದೇ ಇದ್ದರೆ, ಮಾಂಸಾಹಾರ ಸೇವಿಸಬಹುದೇ?

ಡಾ. ಹೊಂಬಾಳಿ - 15 ದಿನಗಳ ಕಾಲ ಯಾವುದೇ ರೀತಿಯ ಮಾಂಸಾಹಾರ ಸೇವಿಸಬಾರದು, ಕರಿದ, ತಂಪಿನ ಆಹಾರ ಸೇವಿಸಬಾರದು, ಮುಖ್ಯವಾಗಿ ಬಿಸಿಯಾದ ಹಾಗೂ ಶುಂಠಿ, ಲವಂಗ, ಕಾಳುಮೆಣಸು ಇರುವಂತಹ ಆಹಾರ ಸೇವಿಸುವುದು ಉತ್ತಮ, ಆಹಾರ ಮಿತ ಮತ್ತು ಸ್ವಚ್ಛ ಹಾಗೂ ಪೌಷ್ಟಿಕವಾಗಿರಲಿ.

ಪ್ರಶ್ನೆ - ತರಕಾರಿ, ಹಣ್ಣುಗಳನ್ನು ಎಷ್ಟು ಸೇವಿಸಬೇಕು?

ಡಾ. ನಾಗನೂರು - ಈ ಸಂದರ್ಭದಲ್ಲಿ ಹಸಿ ತರಕಾರಿ, ಮೊಳಕೆ ಬಂದ ಕಾಳು, ಹಣ್ಣುಗಳನ್ನು ಸೇವಿಸುವುದು ಉತ್ತಮ. ಅದರಲ್ಲಿಯೂ ವಿಟಾಮಿನ್‌ ಸಿ ಹೆಚ್ಚಾಗಿರುವ ಹಣ್ಣುಗಳನ್ನು ಸೇವಿಸಿ. ಕಾಲ ಕಾಲಕ್ಕೆ ವೈದ್ಯರ ಮಾರ್ಗದರ್ಶನ ಪಡೆಯಿರಿ.
ನಾನು ಕೂಲಿ ಕೆಲಸಗಾರ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದೇನೆ. ಕೆಲಸಕ್ಕೆ ಹೋಗಬಹುದಾ? ನಮ್ಮ ಮನೆಯಲ್ಲಿ ಹಿರಿಯರಿದ್ದಾರೆ, ನಾನು ಸಂಪೂರ್ಣ ಗುಣಮುಖಳಾಗಿದ್ದೇನೆ. ನನ್ನ ತಂದೆ, ತಾಯಿ ಭೇಟಿ ಮಾಡಿ ಅವರ ಸೇವೆ ಮಾಡಬಹುದಾ? ಎನ್ನುವ ಪ್ರಶ್ನೆಗಳಿಗೆ ವೈದ್ಯರಾದ ಡಾ. ನೂರಾನಿ, ಡಾ. ಮುಗುಳಿ ಉತ್ತರಿಸಿದರು.

ಸಭೆ ಆಯೋಜನೆ

ಜಿಪಂ ಸದಸ್ಯ ಸಿದ್ದು ಪಾಟೀಲ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ಉಮರ್‌ ಫಾರೂಕ್‌ ಹುಬ್ಬಳ್ಳಿ ಮುಂತಾದವರು ಹಾಜರಿದ್ದು, ಸಭೆ ಆಯೋಜನೆ ಮಾಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!