* ಕೋವಿಡ್ ಯಾವ ಸ್ವರೂಪದಲ್ಲಿರಲಿದೆ ಎಂದು ಹೇಳಲಾಗದು
* ಒಮಿಕ್ರಾನ್, ಡೆಲ್ಟಾ ಹೀಗೆ ಯಾವ ರೂಪದಲ್ಲಿ ಕಾಡುತ್ತದೆಂದು ಹೇಳಲಿಕ್ಕಾಗದು
* ಕೋವಿಡ್ ವೈರಸ್ ರಾತ್ರಿಯೇ ಹರಡುತ್ತಾ?
ಕಲಬುರಗಿ(ಜ.02): ಜಾಗತಿಕ ಪಿಡುಗಾಗಿ ಕಾಡುತ್ತಿರುವ ಕೋವಿಡ್ 3ನೇ ಅಲೆ(Covid 3rd Wave) ನಿಶ್ಚಿತ ಎಂದು ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮೀತಿ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್(Dr MK Sudarshan) ಹೇಳಿದ್ದಾರೆ. ಕಲಬುರಗಿಯಲ್ಲಿ(Kalaburagi) ಶನಿವಾರ ನಡೆದ ಡಾ. ಶಾಂಕರ್ ಪ್ರತಿಷ್ಠಾನದ ವಾರ್ಷಿಕ ಸಮಾರಂಭದಲ್ಲಿ ವೈದ್ಯಶ್ರೀ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಕೋವಿಡ್ ಸೋಂಕಿನ ಆರ್ಭಟ ಹೆಚ್ಚಾಗೋದಂತೂ ನಿಶ್ಚಿತ, ಆದರದು ಒಮಿಕ್ರಾನ್(Omicron) ರೂಪದಲ್ಲಿ ಕಾಡುತ್ತದೋ, ಡೆಲ್ಟಾ(Delta) ರೂಪದಲ್ಲಿ ವಕ್ಕರಿಸುತ್ತದೋ ಹೇಳಲಿಕ್ಕಾದು, ವಕ್ಕರಿಸೋದಂತೂ ನಿಶ್ಚಿತ ಎಂದರು.
ಸಮುದಾಯ, ಸರಕಾರ ಹಾಗೂ ತಜ್ಞರೆಲ್ಲರಿಗೂ ಜಾಗತಿಕ ಸಾಂಕ್ರಾಮಿಕ ಪಿಡುಗಿನ ಅನುಭವಿದೆ, ಹೀಗಾಗಿ ಅನುಭವದ ಹಿನ್ನೆಲೆಯಲ್ಲಿ ನಾವೆಲ್ಲರೂ ಜಾಗೃತರಾಗಿ ಸಮಯಕ್ಕೆ ತಕ್ಕಂತೆ ನಡೆದಾಗ ಮಾತ್ರ ಈ ಪಿಡುಗಿನಿಂದಾಗಬಹುದಾದಂತಹ ಅನೇಕ ಸ್ವರೂಪದ ಹಾನಿಗಳನ್ನು ತಪ್ಪಿಸಲು ಸಾಧ್ಯ ಎಂದು ಡಾ. ಸುದರ್ಶನ ಹೇಳಿದ್ದಾರೆ.
Massive Jump In COVID 19 Case: ಒಂದೇ ದಿನ 16 ಲಕ್ಷ ಕೋವಿಡ್ ಕೇಸ್!
ಕೋವಿಡ್ ತಾಂತ್ರಿಕ ಸಮೀತಿಯ ಸಭೆಗಳಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಪಾಲ್ಗೊಳ್ಳುತ್ತಿದ್ದಾರೆ, ಸರಕಾರ ಈ ಸಂಗತಿ ಗಂಭೀರವಾಗಿ ಪರಿಗಣಿಸಿದೆ, ಈ ವಿಚಾರದಲ್ಲಿ ಜನರ ಸಹಕಾರ ಮುಖ್ಯ, ಕೋವಿಡ್‌ನ ಯಾವುದೇ ಅಲೆ ಬಂದರೂ ಹಲೆ ಮಂತ್ರವಾಇರುವ ಮಾಸ್ಕ್ ಧಾರಣೆ, ಲಸಿಕಾಕರಣವೇ ಮದ್ದು ಎಂದರು.
ದೇಶಾದ್ಯಂತ ತಜ್ಞರ ಪ್ರಕಾರ ಫೆಬ್ರುವರಿ ಅಥವಾ ಮಾರ್ಚ್ ಹೊತ್ತಿಗೆ 3 ನೇ ಅಲೆ ಅಬ್ಬರಿಸುವ ಲಕ್ಷಣಗಳಿವೆ. ಇದಲ್ಲದೆ ರಾನಪೂರ ಹಾಗೂ ಹೈದರಾಬಾದ್ ಐಐಟಿ ತಜ್ಞರಿಂದಲೂ ಸಾಂಕ್ರಾಮಿಕದ ನಕ್ಷೆ ಸಿದ್ಧವಾಗಿದ್ದು ಅವರೂ 3 ನೇ ಅಲೆಯನ್ನು ನಿರೀಕ್ಷಿಸಿದ್ದಾರೆ. ಹೀಗಾಗಿ ನಾವೆಲ್ಲರೂ ಎಚ್ಚರದಿಂದ ಇದ್ದು ಸರಕಾರದ ಜೊತೆಗೇ ಸಹಕರಿಸಲೇಬೇಕಾಗಿದೆ ಎಂದರು.
ಜಿನೋಮಿಕ್ ಸಿಕ್ವೆನ್ಸಿಂಗ್ ಟೆಸ್ಟ್ ಮುಖ್ಯ:
ಕೋವಿಡ್ ಸೋಂಕು ತಗಲಿದವರಿಗೆ ಐಸೋಲೇಷನ್ ಅನಿವಾರ್ಯ, ಇವರ ಮಾದರಿ ಸಂಗ್ರಹಿಸಿ ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆ ಮಾಡಿದಾಗ ಮಾತ್ರ ಅದು ಎಂತಹ ತಳಿ, ರೂಪಾಂತರಿಯೆ? ಹಳೆಯ ತಳಿಯೇ ಎಂಬ ವಿವರ ಗೊತ್ತಾಗುತ್ತದೆ. ಜಿನೋಮ್ ಸಿಕ್ವೆನ್ಸಿಂಗ್‌ಗೆ ವಾರ ಬೇಕು. ಅಷ್ಟರೊಳಗೇ ಅವರು ಎಲ್ಲಲ್ಲಿ ಸಂಚರಿಸಿ ಅನೇಕರ ಸಂಪರ್ಕಕ್ಕೆ ಬಂದಿರುತ್ತಾರೆ. ಹೀಗಾಗಿಯೇ ಕಳೆದ ವಾರದಿಂದ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚುತ್ತ ಹೊರಟಿದೆ ಎಂದು ಕಳವಳ ಹೊರಹಾಕಿದರು.
ಹಳೆ ಮಂತ್ರ ಪಠಿಸದೆ ಹೋದ್ರೆ 3 ನೇ ಅಲೆ ಅಪಾಯ ತಪ್ಪಿದ್ದಲ್ಲ:
ಹಿಂದಿನ 2 ಅಲೆಗಳಲ್ಲಿ ಸರಕಾರ, ಸಮುದಾಯ, ವೈದ್ಯರೆಲ್ಲರೂ ಪಾಠ ಕಲಿತಿದ್ದೇವೆ. ಇದೀಗ 3 ನೇ ಅಲೆಯ ನಿರೀಕ್ಷೆಯಲಿದ್ದೇವೆ. ಮಾಸ್ಕ್(Mask), ಲಸಿಕೆಯ(Vaccine) ಹಳೆ ಮಂತ್ರ ಪಠಿಸದೇ ಹೋದರೆ ಅಪಾಯ ತಪ್ಪಿದ್ದಲ್ಲ. ಹಿಂದಿನ ತಪ್ಪುಗಳನ್ನು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಿದೆ. ಕೋವಿಡ್ ಚಿಕಿತ್ಸಾ ಆಸೆತ್ರಗಳನ್ನು ಸಜ್ಜು ಗೊಳಿಸಬೇಕಿದೆ. ಆಕ್ಸೀಜನ್ ಬೆಡ್, ವೆಂಟಿಲೇಟರ್ ಸವಲತ್ತಿರುವ ಬೆಡ್ ಸಿದ್ಧಪಡಿಸಬೇಕಿದೆ ಎಂದರು.
ರೋಗ ಲಕ್ಷಣ ಕಂಡರೆ ರ್ಯಾಪಿಡ್ ಆಂಟಿಜನ್ ಟೆಸ್ಟ್‌ಗೊಳಗಾಗಿರಿ. ಕೋವಿಡ್ ಪಾಸಿಟಿವ್ ಬಂದಲ್ಲಿ ಐಸೋಲೇಟ್ ಆಗಿರಿ, ಅನಗತ್ಯ ಪ್ರವಾಸ ತಪ್ಪಿಸಿರಿ, ನೆರೆ 'ಹೊರೆ’ ಯಾಗದಂತೆ ನೋಡಿಕೊಳ್ಳಿ, ಅಗತ್ಯವಿದ್ದರೆ ಮಾತ್ರ ಪ್ರವಾಸ ಮಾಡಿರಿ, ಇದರಿಂದ ಸೋಂಕು ಕಟ್ಟಿ ಹಾಕಬಹುದು, ಮೈ ಮರೆತರೆ 2 ನೇ ಅಲೆಯಲ್ಲಿ ಕಾಡಿದಂತೆ ಆಸ್ಪತ್ರೆಗೆ ಜನ ಮುಗಿಬೀಳುವ ದಿನಗಳು ದೂರವೇನಿಲ್ಲ ಎಂದು ಡಾ. ಸುದರ್ಶನ್ ಎಚ್ಚರಿಕೆ ನೀಡಿದರು.
Coronavirus: ರಾಜ್ಯದಲ್ಲಿ ಕೊರೋನಾ ಅಬ್ಬರ: 3.5 ತಿಂಗಳ ಬಳಿಕ ಅತೀ ಹೆಚ್ಚು ಕೇಸ್!
ಮುಖದ ಮೇಲೆ ಮಾಸ್ಕ್ ಈ ವರ್ಷವೂ ಪಕ್ಕಾ:
ಕಳೆದ 2 ವರ್ಷದಿಂದ ಮಾಸ್ಕ್(Mask) ನಮ್ಮೆಲ್ಲರ ಮುಖ ಅಲಂಕರಿಸಿದ್ದು 3ನೇ ವರುಷವೂ ಮುಂದದುವರಿಯಲಿದೆ ಎಂದ ಡಾ. ಸುದರ್ಶನ ಮಾಸ್ಕ್ ಧಾರಣೆಯ ಮೂಲಕ ಓಸಂಕು ಹರಡದಂತೆ ಎಚ್ಚರದಿಂದ ಇರಿ, ಮಾಸ್ಕ್ ಧಾರಣೆ ಯಾವುದೇ ಕಾರಣಕ್ಕೂ ಮರೆಯಬೇಡಿರೆಂದು ಕಿವಿಮಾತು ಹೇಳಿದ್ದಾರೆ.
ಕೋವಿಡ್ ವೈರಸ್ ರಾತ್ರಿಯೇ ಹರಡುತ್ತಾ?:
ಸರಕಾರ ಸದ್ಯ 10 ದಿನಗಳ ರಾತ್ರಿ ಕರ್ಫ್ಯೂ(Night Curfew) ಹೇರಿದೆ, ಇದನ್ನು ವಿರೋಧಿಸುವವರು ವೈರಾಣು ರಾತ್ರಿಯೇ ಹರಡುತ್ತಾ? ಯಾಕೆ ಇಂತಹ ಕ್ರಮ ಎಂದು ಕೇಳುತ್ತಿದ್ದಾರೆ. ಕೋವಿಡ್ ಹರಡುವಿಕೆ ದರ, ಸೋಂಕಿನ ತೀವ್ರತೆ ಗಮನಿಸಿ ತಜ್ಞರು ಲೆಕ್ಕ ಹಾಕಿ ರಾತ್ರಿ, ಹಗಲು ಎಂಬಿತ್ಯಾದಿ ನಾನಾ ನಮೂನೆ ಕರ್ಫ್ಯೂ ಸಲಹೆ ನೀಡಿರುತ್ತಾರೆ. ಇಂತಹ ವಿಚಾರದಲ್ಲಿ ಮೊಂಡು ವಾದ ಸರಿಯಲ್ಲ. ಸೋಂಕು ಒಮ್ಮೆ ಹರಡಿದರೆ ನಿಯಂತ್ರಣ ಕಷ್ಟ. ಅದು ಹರಡದಂತೆ ಕೈಗಳ್ಳುವ ಕ್ರಮಗಳೇ ಮುಖ್ಯ ಎಂದು ಮೊಂಡು ವಾದ ಹಾಕುವವರಿಗೆ ಖಡಕ್ ಉತ್ತರ ಡಾ. ಸುದರ್ಶನ ತಮ್ಮ ಮಾತಲ್ಲಿ ನೀಡಿದರು.