ವರದಿ : ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಜ.02): ಜಿಲ್ಲೆಯಲ್ಲಿ ಹೊಸದಾಗಿ ಬರೋಬ್ಬರಿ 7,379 ಕುಟುಂಬಗಳು ಹೊಸ ಪಡಿತರ ಚೀಟಿಗಾಗಿ (Ration Card) ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಆ ಪೈಕಿ 7 ಅರ್ಜಿಗಳು ಮಾತ್ರ ವಿಲೇವಾರಿ ಆಗಿದ್ದು ಇನ್ನೂ 7,372 ಅರ್ಜಿಗಳು ಆಹಾರ ಇಲಾಖೆ (Food Department) ಅಧಿಕಾರಿಗಳ ಪರಿಶೀಲನೆಗಾಗಿ ಎದುರು ನೋಡುತ್ತಿವೆ. ಹೌದು, ಆಹಾರ ಇಲಾಖೆ ಪ್ರತಿ ವರ್ಷ ಹೊಸ ಪಡಿತರ ಚೀಟಿಗಳ ವಿತರಣೆಗೆ ಆನ್‌ಲೈನ್ (Online) ಮೂಲಕ ಅರ್ಜಿ ಆಹ್ವಾನಿಸಿ ಅರ್ಹರಿಗೆ ಪಡಿತರ ಚೀಟಿಗಳ ವಿತರಣೆ ಮಾಡುತ್ತಿದ್ದರೂ ಈ ವರ್ಷ ಒಟ್ಟು 7,379 ಮಂದಿ ಹೊಸ ಪಡಿತರ ಚೀಟಿಗಾಗಿ ಜಿಲ್ಲಾದ್ಯಂತ ಅರ್ಜಿ ಹಾಕಿ ಹೊಸ ಪಡಿತರ ಚೀಟಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯ ಸರ್ಕಾರ (Karnataka Govt) ಅರ್ಹರಿಗೆ ಬಿಪಿಎಲ್ (BPL) ಪಡಿತರ ಚೀಟಿ ವಿತರಿಸಬೇಕೆಂಬ ನಿಯಮಗಳನ್ನು ರೂಪಿಸಿದೆ. ಇದರ ನಡುವೆ ಜಿಲ್ಲೆಯಲ್ಲಿ ಕೂಡ ಕೆಲ ಅರ್ನಹರು ಬಿಪಿಎಲ್ (BPL) ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ. ಇದರ ನಡುವೆಯು ಇದೀಗ ಹೊಸದಾಗಿ 7.379 ಮಂದಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಇದೀಗ ಹೊಸ ಪಡಿತರ ಚೀಟಿಗಳ ವಿತರಣೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆಗೆ ಮುಂದಾಗಿದೆ.
ತಾಲೂಕುವಾರು ಮಾಹಿತಿ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಡಿ.29ರ ಅಂತ್ಯಕ್ಕೆ ಒಟ್ಟು 1156, ಚಿಕ್ಕಬಳ್ಳಾಪುÃ ತಾಲೂಕಿನಲ್ಲಿ 1,387, ಚಿಂತಾಮಣಿ ತಾಲೂಕಿನಲ್ಲಿ 1,745, ಗೌರಿಬಿದನೂರು ತಾಲೂಕಿನಲ್ಲಿ 1,556, ಗುಡಿಬಂಡೆ ತಾಲೂಕಿನಲ್ಲಿ 347, ಶಿಡ್ಲಘಟ್ಟತಾಲೂಕಿನಲ್ಲಿ 1,188 ಮಂದಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈಗಷ್ಟೇ ಹೊಸ ಪಡಿತರ ಚೀಟಿಗಳ ವಿತರಣೆಗೆ ಆದೇಶಿಸಿರುವ ಹಿನ್ನಲೆಯಲ್ಲಿ ಸಲ್ಲಿಕೆಯಾಗಿರುವ 7.379 ಅರ್ಜಿಗಳ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಸಲ್ಲಿಕೆಯಾಗಿರುವ ಒಟ್ಟು ಅರ್ಜಿಗಳಲ್ಲಿ ಅರ್ಧದಷ್ಟುಅರ್ಜಿಗಳು ತಿರಸ್ಕೃತಗೊಳ್ಳಲಿವೆ. ಆದರೂ ಅರ್ಹರಿಗೆ ಪಡಿತರ ಚೀಟಿ ವಿತರಿಸುವ ದೃಷ್ಟಿಯಿಂದ ಗ್ರಾಮ (Village) ಮಟ್ಟದಲ್ಲಿ ಪರಿಶೀಲನೆ ನಡೆಸಿ ಅರ್ಹರಿಗೆ ಪಡಿತರ ಚೀಟಿ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.
312 ಅರ್ಜಿ ವಿತ್ ಡ್ರಾ: ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಇಲಾಖೆಗೆ ಆನ್‌ಲೈನ್ ಮೂಲಕ ಒಟ್ಟು 7,691 ಅರ್ಜಿಗಳು ಹೊಸ ಪಡಿತರ ಚೀಟಿಗೆ ಸಲ್ಲಿಕೆಯಾಗಿವೆ. ಆ ಪೈಕಿ 312 ಅರ್ಜಿಗಳು ವಿತ್ ಡ್ರಾ ಆಗಿವೆ. ಆಗಾಗಿ ಒಟ್ಟು 7,379 ಅರ್ಜಿಗಳು ಉಳಿದುಕೊಂಡಿವೆ. 7 ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ವಿಲೇವಾರಿ ಮಾಡಿದ್ದು ಇನ್ನೂ ಉಳಿದಂತೆ 3,372 ಅರ್ಜಿಗಳು ಅಧಿಕಾರಿಗಳ ಪರಿಶೀಲನೆಗೆ ಎದುರು ನೋಡುತ್ತಿವೆ.
ಹೊಸ ಪಡಿತರ ಚೀಟಿ ಶೀಘ್ರ ವಿತರಣೆ : ಜಿಲ್ಲೆಯಲ್ಲಿ ಒಟ್ಟು 7,379 ಮಂದಿ ಪಡಿತರ ಚೀಟಿಗಾಗಿ ಹೊಸದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 7 ಅರ್ಜಿ ವಿಲೇವಾರಿ ಮಾಡಿದ್ದು ಇನ್ನೂ 7,373 ಅರ್ಜಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಸರ್ಕಾರ ಕೂಡ ಹೊಸ ಪಡಿತರ ಚೀಟಿ ವಿತರಣೆಗೆ ಆದೇಶಿಸಿದ್ದು ಸದ್ಯದಲ್ಲೆ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಹೊಸ ಪಡಿತರ ಚೀಟಿಗಳ ವಿತರಣೆ ಮಾಡಲಾಗುವುದು.
ಪಿ.ಸವಿತಾ, ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ.
ಅಧಿಕಾರಿಗಳಿಗೆ ಡಿಜಿಟಲ್ ಕೀ ಸಮಸ್ಯೆ!
ಆಹಾರ ಇಲಾಖೆ ಅಧಿಕಾರಿಗಳಿಗೆ ಹೊಸ ಪಡಿತರ ಚೀಟಿ ವಿತರಿಸಲು ಇಲಾಖೆ ನೀಡಿರುವ ಡಿಜಿಟಲ್ ಕೀ ಸಮಸ್ಯೆ ಎದುರಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಆನ್‌ಲೈನ್ ಮೂಲಕವೇ ಅರ್ಜಿಗಳ ಪರಿಶೀಲಿಸಿ ಅರ್ಹರಿಗೆ ಹೊಸ ಪಡಿತರ ಚೀಟಿ ವಿತರಿಸಲು ಅನುಮೋದನೆಗೆ ಸರ್ಕಾರ ಕೊಟ್ಟಿರುವ ಡಿಜಿಟಲ್ ಕೀ ವ್ಯವಸ್ಥೆ ತಾಂತ್ರಿಕ ದೋಷದಿಂದ ಕೂಡಿದೆ. ಆಗಾಗಿ ಹಳೆ ವ್ಯವಸ್ಥೆಯಲ್ಲಿ ಹೊಸ ಪಡಿತರ ಚೀಟಿ ವಿತರಿಸಲು ಸರ್ಕಾರ ಆದೇಶಿಸಿದೆಯೆಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.