ದಕ್ಷಿಣ ಕನ್ನಡ: 20 ದಿನದಲ್ಲಿ 630 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್‌..!

By Kannadaprabha NewsFirst Published Aug 26, 2021, 8:02 AM IST
Highlights

*  ಕೇರಳ ವಿದ್ಯಾರ್ಥಿಗಳೇ ಅಧಿಕ, ನೆಗೆಟಿವ್‌, ಕ್ವಾರಂಟೈನ್‌ ಬಳಿಕವೂ ಕೊರೋನಾ ಪತ್ತೆ
*  29 ಕಾಲೇಜುಗಳು ಕಂಟೈನ್‌ಮೆಂಟ್‌ ಝೋನ್‌ ಆಗಿ ಪರಿವರ್ತನೆ
*  ಕೊರೋನಾ ಮಾರ್ಗಸೂಚಿ ಪಾಲನೆ ಮಾಡದ ಕಾಲೇಜುಗಳಿಗೆ ಜಿಲ್ಲಾಡಳಿತ ನೋಟಿಸ್‌ ಜಾರಿ
 

ಮಂಗಳೂರು(ಆ.26): ಕೊರೋನಾ ಸೋಂಕು ಏರಿಕೆ ಹಾದಿಯಲ್ಲೇ ಇರುವ ಜಿಲ್ಲೆಯಲ್ಲಿ ಕಳೆದ 20 ದಿನಗಳ ಅವಧಿಯಲ್ಲಿ ಬರೋಬ್ಬರಿ 630 ವಿದ್ಯಾರ್ಥಿಗಳಿಗೆ ಪಾಸಿಟಿವ್‌ ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ದರ ಕಡಿಮೆ ಇರುವುದರಿಂದ ಶಾಲೆಗಳ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗದೆ ಇರುವುದರಿಂದ ಇನ್ನೂ ಎರಡು ವಾರಗಳ ಕಾಲ ಶಾಲಾರಂಭವನ್ನು ಮುಂದೂಡಿ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿತ್ತು. ಈ ನಡುವೆ ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಶಾಲಾರಂಭ ಮತ್ತಷ್ಟು ವಿಳಂಬವಾಗುವ ಲಕ್ಷಣ ಕಾಣಿಸುತ್ತಿದೆ.

ಕೇರಳ ವಿದ್ಯಾರ್ಥಿಗಳೇ ಅಧಿಕ: 

ಜಿಲ್ಲೆಯಲ್ಲಿ ಕಾಲೇಜುಗಳು ಆರಂಭಗೊಂಡ ಬಳಿಕ ಆರೋಗ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ 29 ಕಾಲೇಜುಗಳ 630 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇವರಲ್ಲಿ 326ರಷ್ಟು ಕೇರಳದವರಾಗಿದ್ದರೆ, ಉಳಿದ ವಿದ್ಯಾರ್ಥಿಗಳು ಮಹಾರಾಷ್ಟ್ರ, ಉತ್ತರ ಭಾರತ ಹಾಗೂ ದ.ಕ. ಮೂಲದವರಾಗಿದ್ದಾರೆ. ಸೋಂಕು ಪತ್ತೆಯಾಗುತ್ತಿದ್ದಂತೆ 29 ಕಾಲೇಜುಗಳನ್ನು ಕಂಟೈನ್‌ಮೆಂಟ್‌ ಝೋನ್‌ ಆಗಿ ಪರಿವರ್ತಿಸಲಾಗಿದೆ.

ದಾಖಲೆಯ 1.95 ಲಕ್ಷ ಪರೀಕ್ಷೆ: 4.98 ಲಕ್ಷ ಜನಕ್ಕೆ ಲಸಿಕೆ

ಪ್ರಸ್ತುತ ಸೋಂಕಿತರ ಪೈಕಿ ನರ್ಸಿಂಗ್‌, ವೈದ್ಯಕೀಯ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳೇ ಅಧಿಕ. ಇಲ್ಲಿನ ನರ್ಸಿಂಗ್‌, ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇತರ ವಿದ್ಯಾರ್ಥಿಗಳಿಗೂ ಸೋಂಕು ಹರಡಿರುವ ಸಾಧ್ಯತೆ ಕಂಡುಬಂದಿದೆ. ಈ ಎಲ್ಲ ಸೋಂಕಿತ ವಿದ್ಯಾರ್ಥಿಗಳನ್ನು ಆಯಾ ಕಾಲೇಜುಗಳ ಹಾಸ್ಟೆಲ್‌ಗಳು, ಫ್ಲ್ಯಾಟ್‌ಗಳು, ಕೊರೋನಾ ಆರೈಕೆ ಕೇಂದ್ರಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕ್ವಾರಂಟೈನ್‌ ಬಳಿಕವೂ ಸೋಂಕು: 

ಹೊರರಾಜ್ಯಗಳಿಂದ ಆಗಮಿಸುವ ವಿದ್ಯಾರ್ಥಿಗಳು ನೆಗೆಟಿವ್‌ ಸರ್ಟಿಫಿಕೆಟ್‌ ತರುವುದು ಕಡ್ಡಾಯ. ಹಾಗೆ ವರದಿ ತಂದು ಏಳು ದಿನಗಳ ಕ್ವಾರಂಟೈನ್‌ ಅವಧಿ ಪೂರೈಸಿದ ಬಳಿಕವೂ ಹಲವು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಪರೀಕ್ಷೆಗಳು ಮತ್ತು ಭೌತಿಕ ತರಗತಿ ಸಂದರ್ಭದಲ್ಲಿ ದೈಹಿಕ ಅಂತರ ಇತ್ಯಾದಿ ಕೊರೋನಾ ಮಾರ್ಗಸೂಚಿಗಳನ್ನು ಪಾಲನೆ ಮಾಡದ ಕಾಲೇಜುಗಳಿಗೆ ಜಿಲ್ಲಾಡಳಿತ ನೋಟಿಸ್‌ ಜಾರಿಗೊಳಿಸುತ್ತಿದೆ.
 

click me!