'ಮಂಡ್ಯದಲ್ಲಿ ಹೊಸ ಗಾಳಿ ಬೀಸಲು ಆರಂಭ'

By Kannadaprabha NewsFirst Published Aug 26, 2021, 7:54 AM IST
Highlights
  • ಇಲ್ಲಿಯವರೆಗೆ ಜಾತಿ, ಕುಟುಂಬ ರಾಜಕಾರಣ, ಗೂಂಡಾ ರಾಜಕಾರಣ ನೋಡಿದ್ದ ಮಂಡ್ಯ ಜಿಲ್ಲೆ
  • ಜಿಲ್ಲೆಯೊಳಗೆ ಪರಿವರ್ತನೆಯ ಹೊಸ ಗಾಳಿ ಬೀಸಲು ಆರಂಭವಾಗಿದೆ 

ಮಂಡ್ಯ (ಆ.26):  ಇಲ್ಲಿಯವರೆಗೆ ಜಾತಿ, ಕುಟುಂಬ ರಾಜಕಾರಣ, ಗೂಂಡಾ ರಾಜಕಾರಣ ನೋಡಿದ್ದ ಮಂಡ್ಯ ಜಿಲ್ಲೆಯೊಳಗೆ ಪರಿವರ್ತನೆಯ ಹೊಸ ಗಾಳಿ ಬೀಸಲು ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಬುಧವಾರ ನಗರದಲ್ಲಿ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮೈಸೂರು ಮಹಾರಾಜರ ಕಾಲದಲ್ಲಿ ಮಂಡ್ಯ ಜಿಲ್ಲೆ ಅಭಿವೃದ್ಧಿಯನ್ನು ಕಂಡಿತ್ತು. ಮೈಸೂರು ಸಕ್ಕರೆ ಕಾರ್ಖಾನೆ, ಏಷ್ಯಾದಲ್ಲೇ ಮೊದಲ ವಿದ್ಯುತ್‌ ಉತ್ಪಾದಿಸಿದ ಕೀರ್ತಿ, ನೀರಾವರಿಗೆ ಮೊದಲ ಬಾರಿಗೆ ಅಣೆಕಟ್ಟು ನಿರ್ಮಿಸಿದ ಹೆಗ್ಗಳಿಕೆ ಮಂಡ್ಯಕ್ಕಿತ್ತು. ಆನಂತರ ಮಂಡ್ಯ ಪ್ರಗತಿಯನ್ನು ಕಾಣಲು ಸಾಧ್ಯವಾಗಲೇ ಇಲ್ಲ ಎಂದು ವಿಷಾದಿಸಿದರು.

ಕಾಂಗ್ರೆಸ್‌ನವರ ಗೂಂಡಾ ರಾಜಕಾರಣ, ಜೆಡಿಎಸ್‌ನವರ ಕುಟುಂಬ ರಾಜಕಾರಣದಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ನಾರಾಯಣಗೌಡರ ಗೆಲುವಿನೊಂದಿಗೆ ಜಿಲ್ಲೆಯೊಳಗೆ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಜಿಲ್ಲೆಯಲ್ಲಿ ನೆಲೆಯೂರಿರುವ ಗೂಂಡಾಗಿರಿ, ಜಾತಿ, ಕುಟುಂಬ ರಾಜಕಾರಣಕ್ಕೆ ಅಂತ್ಯವಾಡಲು ಇಂದಿನ ಸಭೆಯಲ್ಲಿ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

ದೆಹಲಿಯಲ್ಲಿ ಬೀಡುಬಿಟ್ಟ ಜಾರಕಿಹೊಳಿ ಬ್ರದರ್ಸ್: ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡ

ತಾಲಿಬಾನಿಗಳ ಕರೆತರುತ್ತಿದ್ದರು:  ದೇಶದಲ್ಲಿ ಇದೀಗ ಯುಪಿಎ ಸರ್ಕಾರ ಇದ್ದಿದ್ದರೆ, ಅಷ್ಘಾನಿಸ್ತಾನದಿಂದ ಭಾರತೀಯರ ಬದಲಿಗೆ ತಾಲಿಬಾನಿಗಳನ್ನು ಕರೆತರುತ್ತಿತ್ತು. ಮೋದಿ ಇರುವುದರಿಂದ ಆಫ್ಘನ್‌ನಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಆ ಮೂಲಕ ತಾಲಿಬಾನಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.

ಅಕ್ರಮ ಗಣಿಗಾರಿಕೆಗೆ ಬ್ರೇಕ್‌:

ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಎಂದಿಗೂ ಅವಕಾಶ ಕೊಡುವುದಿಲ್ಲ. ಯಾರೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಅವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿರುವ ಮೈಷುಗರ್‌ ಕಾರ್ಖಾನೆ ಆರಂಭಕ್ಕೆ ರಾಜ್ಯಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಿಂದೆ ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕಾರ್ಖಾನೆಗೆ 200 ಕೋಟಿ ರು.ಗೂ ಹೆಚ್ಚಿನ ಹಣ ನೀಡಿದ್ದಾರೆ ಎಂದರು.

ಅದ್ಧೂರಿ ಬೈಕ್‌ ಜಾಥಾ

ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ದುಶ್ಯಂತ್‌ ಕುಮಾರ್‌ ಸಿಂಗ್‌, ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಬಿಜೆಪಿ ಕಾರ್ಯಕರ್ತರು ವಿಶ್ವೇಶ್ವರಯ್ಯ ಪ್ರತಿಮೆ ಎದುರು ಭವ್ಯ ಸ್ವಾಗತ ಕೋರಿದರು. ಅಲ್ಲಿಂದ ತೆರೆದ ಜೀಪಿನಲ್ಲಿ, ಬೈಕ್‌ ರಾರ‍ಯಲಿ ಮೂಲಕ ಸಭೆ ನಿಗದಿಯಾಗಿದ್ದ ಸ್ಥಳಕ್ಕೆ ಕರೆತರಲಾಯಿತು. ಹೆದ್ದಾರಿಯುದ್ದಕ್ಕೂ ಬಿಜೆಪಿ ಬ್ಯಾನರ್‌, ಬಂಟಿಂಗ್ಸ್‌, ಕೇಸರಿ ಧ್ವಜ, ಫ್ಲೆಕ್ಸ್‌ಗಳು ಎಲ್ಲೆಡೆ ರಾರಾಜಿಸುತ್ತಿದ್ದವು.

ಬೆಲ್ಲ ಪ್ರದರ್ಶಿಸಿ ಉದ್ಘಾಟನೆ

ಸಭೆ-ಸಮಾರಂಭಗಳನ್ನು ದೀಪ ಬೆಳಗಿಸುವುದರೊಂದಿಗೆ, ಗಿಡಕ್ಕೆ ನೀರೆರೆಯುವುದರೊಂದಿಗೆ ಉದ್ಘಾಟಿಸುವುದು ಸಾಮಾನ್ಯ. ಆದರೆ, ಮಂಡ್ಯದ ಪ್ರತಿಷ್ಠೆಯ ಸಂಕೇತವಾಗಿರುವ ಬೆಲ್ಲವನ್ನು ಪ್ರದರ್ಶಿಸುವುದರೊಂದಿಗೆ ಉದ್ಘಾಟಿಸಿದ್ದು ವಿನೂತನವಾಗಿತ್ತು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್‌ಕುಮಾರ್‌ ಗೌತಮ್‌, ಪರದೆಯಿಂದ ಸುತ್ತುವರಿದು ಅದರ ಮೇಲೆ ಇಡಲಾಗಿದ್ದ ಮುಚ್ಚಳವನ್ನು ಮೇಲೆತ್ತುತ್ತಿದ್ದಂತೆ ಪರದೆ ಕೆಳಗೆ ಜಾರಿಬಿದ್ದು ಬೆಲ್ಲದ ಹಚ್ಚುಗಳು ಪ್ರದರ್ಶನಗೊಂಡವು.

ಸಭೆಯಲ್ಲಿ ಪಾಲ್ಗೊಂಡಿದ್ದ ಅತಿಥಿ ಗಣ್ಯರು ಹಾಗೂ ಪದಾಧಿಕಾರಿಗಳಿಗೆ ಬೆಲ್ಲದ ಮಿಠಾಯಿ, ಕಡಲೆಕಾಯಿ ಮಿಠಾಯಿಯನ್ನು ನೀಡಲಾಯಿತು. ಬೆಲ್ಲದ ಮಿಠಾಯಿ ರುಚಿಗೆ ಗಣ್ಯರು ಮಾರುಹೋಗಿದ್ದರು. ಹೊರಗೆ ಸಭೆಗೆ ಆಗಮಿಸಿದವರೆಲ್ಲರಿಗೂ ಕಬ್ಬಿನ ಜ್ಯೂಸ್‌ ನೀಡಲಾಯಿತು. ಅಲ್ಲದೆ ಹೊರಗಿನಿಂದ ಆಗಮಿಸಿದ್ದ ಪದಾಧಿಕಾರಿಗಳಿಗೆ 1 ಕೆಜಿ ಬೆಲ್ಲವನ್ನು ಉಡುಗೊರೆಯಾಗಿ ನೀಡಲಾಯಿತು.

click me!