ತಬ್ಬಿಬ್ಬಾದ ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೂ ಮುನ್ನವೇ ಸ್ವಯಂ ನಿರ್ಬಂಧ| ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮ| ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್| ಗ್ರಾಮವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಣೆ|
ಶಿವಮೂರ್ತಿ ಇಟಗಿ
ಯಲಬುರ್ಗಾ(ಮೇ.02): ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಬರೋಬ್ಬರಿ 73 ಪ್ರಕರಣ ಬಂದಿದ್ದು, ಗ್ರಾಮಸ್ಥರೇ ಸ್ವಯಂ ಮುಂಜಾಗ್ರತೆ ಕ್ರಮ ಕೈಗೊಂಡು ಗ್ರಾಮಕ್ಕೆ ಬೇಲಿ ಹಾಕಿಕೊಂಡಿದ್ದಾರೆ. ಇದರಿಂದ ಈ ಗ್ರಾಮದವರು ಹೊರ ಹೋಗುವಂತಿಲ್ಲ. ಹೊರಗಿನವರು ಇಲ್ಲಿಗೆ ಬರುವಂತಿಲ್ಲ.
ಕೇವಲ 3 ದಿನದಲ್ಲಿ ಗ್ರಾಮದ 73 ಜನರಿಗೆ ಮಹಾಮಾರಿ ಅಂಟಿದೆ. ಸೋಂಕಿನಿಂದ ಗ್ರಾಮಸ್ಥರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಕುಕನೂರು ತಾಲೂಕಿನಲ್ಲಿ 150 ಪ್ರಕರಣವಿದ್ದು, ಅದರಲ್ಲಿ ಈ ಗ್ರಾಮದ ಕೊಡುಗೆಯೇ ಅರ್ಧದಷ್ಟಿದೆ.
ಮಹಾಮಾರಿಯ ಆರ್ಭಟದಿಂದ ಬೆಚ್ಚಿ ಬಿದ್ದ ಗ್ರಾಮಸ್ಥರು ಊರು ಸಂಪರ್ಕಿಸುವ ಎಲ್ಲ ರಸ್ತೆಗಳಿಗೂ ತಾವೇ ಸ್ವತಃ ಬೇಲಿ ಹಾಕಿಕೊಂಡು ಸ್ವಯಂ ಸೀಲ್‌ಡೌನ್ ಮಾಡಿದ್ದಾರೆ. ಇನ್ನು ಗ್ರಾಮದ ಒಳ ರಸ್ತೆಗಳಲ್ಲೂ ಬೇಲಿ, ಮುಳ್ಳುಕಂಟಿ ಹಾಕಿಕೊಂಡು ಜನ ಸಂಚರಿಸದಂತೆ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಇದನ್ನು ತಡೆಗಟ್ಟಲು ಇದೊಂದೇ ಉಪಾಯ ಎಂದು ತಿಳಿದುಕೊಂಡಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ಳುವ ಪೂರ್ವದಲ್ಲಿಯೇ ಗ್ರಾಮದ ಹಿರಿಯರೇ ಇಂತಹದೊಂದು ನಿರ್ಧಾರ ಕೈಗೊಂಡಿದ್ದಾರೆ.
ಬಂತೆಲ್ಲಿಂದ?
ಗ್ರಾಮಕ್ಕೆ ಮಹಾಮಾರಿ ಎಲ್ಲಿಂದ ಎಂಟ್ರಿ ಕೊಟ್ಟಿದೆ ಎಂಬ ಬಗ್ಗೆ ನಿಖರವಾಗಿ ತಿಳಿಯದಿದ್ದರೂ ಗ್ರಾಮದ ಕೆಲವರು ಗದಗ ಜಿಲ್ಲೆ ರೋಣದಲ್ಲಿನ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರಂತೆ. ಅಲ್ಲಿಂದ ಬಂದ ಬಳಿಕವೇ ಪ್ರಕರಣಗಳ ಸಂಖ್ಯೆ ಹೆಚ್ಚಿದೆಯಂತೆ. ಮದುವೆಯೇ ಮೂಲವಿರಬಹುದು ಎಂಬ ಶಂಕೆ ಗ್ರಾಮಸ್ಥರದ್ದು. ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಪಾಸಿಟಿವ್ ಸಂಖ್ಯೆಗಳು ಹೆಚ್ಚುತ್ತಲೇ ಇದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭಿಸಿದ್ದಾರೆ. ಎಲ್ಲರ ಸ್ವಾ್ಯಬ್ ಟೆಸ್ಟ್‌ಗೂ ಕ್ರಮ ಕೈಗೊಂಡಿದ್ದಾರೆ. ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸುವ ಕಾರ್ಯ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರಿಂದ ನಡೆಯುತ್ತಿದೆ.
ವಲಸೆ ಕಾರ್ಮಿಕರಿಂದ ಕೊರೋನಾ ಸ್ಫೋಟ ಇಲ್ಲ
ಗಂಭೀರವಾಗಿದ್ದವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ರೋಗ ಲಕ್ಷಣ ಇಲ್ಲದವರನ್ನು ಮನೆಯಲ್ಲಿಯೇ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿಗಾದಲ್ಲಿ ಐಸೋಲೇಶನ್‌ದಲ್ಲಿ ಇಡಲಾಗಿದೆ. ಕಟ್ಟೆಚ್ಚರ ವಹಿಸಲಾಗಿದ್ದು, ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಭೇಟಿ:
ಗ್ರಾಮಕ್ಕೆ ಶನಿವಾರ ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಗ್ರಾಮವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ.
ಗ್ರಾಮವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ವಿಶೇಷ ನಿಗಾ ಇಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona