Council Election Result : ನಾಟಕ ಮಾಡಿ ಒಳ ಒಪ್ಪಂದ ಮಾಡಿಕೊಂಡಿದ್ದ ಕಾಂಗ್ರೆಸ್‌, ಜೆಡಿಎಸ್‌

By Kannadaprabha News  |  First Published Dec 18, 2021, 12:44 PM IST
  •  ಮೇಲುನೋಟಕ್ಕೆ ಕಿತ್ತಾಡಿ, ಒಳ ಒಪ್ಪಂದ ಮಾಡಿಕೊಂಡ ಕಾಂಗ್ರೆಸ್‌, ಜೆಡಿಎಸ್‌
  •  ವಿಧಾನ ಪರಿಷತ್‌ ಪರಾಜಿತ ಅಭ್ಯರ್ಥಿ ಆರ್‌. ರಘು ಆರೋಪ
  •  ನನ್ನ ಸೋಲಿಗೆ ಯಾರನ್ನೂ ಹೊಣೆ ಮಾಡುವುದಿಲ್ಲ
  •  ಚುನಾವಣಾ ರಾಜಕೀಯ ಬೇಡ, ಸಕ್ರಿಯನಾಗಿರುತ್ತೇನೆ
     

 ಮೈಸೂರು (ಡಿ.18): ಮೈಸೂರು (Mysuru), ಚಾಮರಾಜನಗರ (Chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ (MLC Election) ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಮತ್ತು ಜೆಡಿಎಸ್‌ (JDS) ಪಕ್ಷಗಳು ಮೇಲ್ನೋಟಕ್ಕೆ ಕಿತ್ತಾಡಿಕೊಂಡು ಒಳ ಒಪ್ಪಂದ ಮಾಡಿಕೊಂಡ ಪರಿಣಾಮ ನನಗೆ ದ್ವಿತೀಯ ಪ್ರಾಶಸ್ತ್ಯದ ಮತ ಹೆಚ್ಚು ಬರಲಿಲ್ಲ ಎಂದು ಪರಾಜಿತ ಬಿಜೆಪಿ (BJP) ಅಭ್ಯರ್ಥಿ ರಘು ಆರ್‌. ಕೌಟಿಲ್ಯ ತಿಳಿಸಿದರು.

ಕಾಂಗ್ರೆಸ್‌ (Congress) ಮತ್ತು ಜೆಡಿಎಸ್‌ (JDS) ಮೇಲು ನೋಟಕ್ಕೆ ಆಗದವರಂತೆ ಇದ್ದು, ಒಳಗೊಳಗೆ ಚೆನ್ನಾಗಿರುತ್ತಾರೆ. ಈ ಅನೈತಿಕ ಒಳ ಒಪ್ಪಂದವೂ ನನ್ನ ಸೋಲಿಗೆ ಕಾರಣ ಇರಬಹುದು. ಮೊದಲ ಪ್ರಾಶಸ್ತ್ಯ ಮತದಲ್ಲಿ ಗೆದ್ದ ಕಾಂಗ್ರೆಸ್‌ (Congress) ಅಭ್ಯರ್ಥಿ ಬ್ಯಾಲೆಟ್‌ನಲ್ಲಿ ಹೆಚ್ಚಿನ ಪಾಲು ಜೆಡಿಎಸ್‌ (JDS) ಅಭ್ಯರ್ಥಿಗೆ 2ನೇ ಪ್ರಾಶಸ್ತ್ಯ ದ ಮತ ನೀಡಲಾಗಿದೆ. ಇದನ್ನು ಗಮನಿಸಿದರೆ ಚುನಾವಣೆಯಲ್ಲಿ (Election)  ಆ ಎರಡೂ ಪಕ್ಷಗಳ ನಡುವೆ ಒಳ ಒಪ್ಪಂದ ನಡೆದಿರುವ ಸಾಬೀತಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Tap to resize

Latest Videos

ನನ್ನ ಸೋಲಿಗೆ ಬಿಜೆಪಿ (BJP) ನಾಯಕರು ಕಾರಣ ಎಂದು ಹೇಳುತ್ತಿರುವುದು ಕೇವಲ ಊಹಾ ಪೋಹವಷ್ಟೆ. ಚುನಾವಣೆ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಯಾರ ಒಳ ಏಟಿನಿಂದ ನನಗೆ ಸೋಲಾಗಿಲ್ಲ. ಈ ಸೋಲಿಗೆ ಯಾರನ್ನೂ ದೂರುವುದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa), ಎರಡೂ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar), ಸಂಸದರಾದ ವಿ. ಶ್ರೀನಿವಾಸ ಪ್ರಸಾದ್‌ (Shrinivas Prasad),  ಪ್ರತಾಪ್‌ ಸಿಂಹ (Prathap Simha) ಸೇರಿದಂತೆ ಬಿಜೆಪಿಯ (BJP) ಎಲ್ಲಾ ಶಾಸಕರು ಸಂಘಟಿತ ಹೋರಾಟ ನಡೆಸಿದ್ದರು. ಆದರೆ ದ್ವಿತೀಯ ಪ್ರಾಶಸ್ತ್ಯದ ಮತ ನೀಡಿದವರು ನಮ್ಮನ್ನು ವಿಜಯದ ದಡ ಸೇರಿಸಲಿಲ್ಲ. ವಿಶ್ವಾಸವಿತ್ತು, ಆದರೆ ಅಂತಿಮ ಘಟ್ಟದಲ್ಲಿ ತೆಪ್ಪದಲ್ಲಿ ಕುಳಿತು ಹೋರಾಡುವಂತಾಯಿತು ಎಂದರು.

ಚುನಾವಣೆ ಸೋಲಿನಿಂದ ವಿಚಲಿತನಾಗಿಲ್ಲ. ಮುಂದೆ ಚುನಾವಣೆ (Election) ರಾಜಕೀಯದಿಂದ ದೂರ ಉಳಿದರೂ ಪಕ್ಷದ ಸೇವೆಯಲ್ಲಿ ನಿರಂತರವಾಗಿ ಮುಂದುವರೆಯುತ್ತೇನೆ. ಮತದಾರರು ನಮ್ಮನ್ನು ಪರಿಪೂರ್ಣವಾಗಿ ಸ್ವೀಕಾರ ಮಾಡದೆ ಇರುವುದು ನೋವು ತಂದಿದೆ. ಸೈದ್ಧಾಂತಿಕ ಹೋರಾಟದ ಮೂಲಕ ಬಂದ ನನಗೆ ವಿಧಾನ ಪರಿಷತ್‌ ಪ್ರವೇಶಿಸಲು ಸಾಧ್ಯವಾಗದ್ದು ನೋವುಂಟು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್‌ ಆಶಯ ಮತ್ತು ಸಾಮಾಜಿಕ ನ್ಯಾಯವನ್ನು ಪಾಲಿಸುವ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ. ನನ್ನಂತಹ ಸೂಕ್ಷ್ಮ ಸಮುದಾಯದ ವ್ಯಕ್ತಿಯನ್ನು ಗುರುತಿಸಿ ಟಿಕೆಟ್‌ ನೀಡಿ ಸಮರೋಪಾದಿಯಲ್ಲಿ ನನ್ನನ್ನು ಗೆಲ್ಲಿಸಲು ಪಕ್ಷ ಸಾಕಷ್ಟುಶ್ರಮವಹಿಸಿತ್ತು. ಜೊತೆಗೆ ರಾಜ್ಯಾದ್ಯಂತ ಹಲವು ಸೂಕ್ಷ್ಮ ಸಮುದಾಯಗಳಿಗೆ ಹಲವು ಸ್ಥಾನಮಾನಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಬಿಜೆಪಿ ಮೆರೆದಿದೆ ಎಂದು ಅವರು ಹೇಳಿದರು.

ರಘು ಕೌಟಿಲ್ಯ ಸೋಲಿಗೆ ಬಿಜೆಪಿ (BJP) ಮುಖಂಡರೇ ಕಾರಣ ಎಂಬ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೊ ತಿಳಿದಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದೂ ಇಲ್ಲ. ಸದ್ಯಕ್ಕೆ ನನಗೆ ಚುನಾವಣೆ ರಾಜಕಾರಣದ ಬಗ್ಗೆ ಭ್ರಮ ನಿರಸನವಾಗಿದೆ. ನಾನು ಮುಂದೆ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ ಅಷ್ಟೇ. ನನಗೆ ಮತ ನೀಡಿ ಬೆಂಬಲಿಸಿದ ಮತದಾರರಿಗೆ ಕೃತಜ್ಞನಾಗಿರುತ್ತೇನೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಬಿಜೆಪಿ ನಗರ ಕಾರ್ಯದರ್ಶಿ ವಾಣೀಶ್‌ ಕುಮಾರ್‌, ಮುಖಂಡರಾದ ಮಹೇಶ್‌ ರಾಜ್‌ ಅರಸ್‌, ಪ್ರದೀಪ್‌ ಇದ್ದರು.

click me!