ಯಡಿಯೂರಪ್ಪರಂತೆ ಅಭಿವೃದ್ಧಿ ರಥ ಮುನ್ನಡೆಸಲು ಬದ್ಧ; ವಿಜಯೇಂದ್ರ

By Kannadaprabha News  |  First Published Dec 10, 2022, 8:46 AM IST

ವಿರೋಧಿಗಳ ಟೀಕೆ, ಟಿಪ್ಪಣಿಗಳನ್ನು ಆಶೀರ್ವಾದ ಎಂದು ಭಾವಿಸಿ ಕಾರ್ಯಕರ್ತರು, ಎಲ್ಲರನ್ನೂ ಒಗ್ಗೂಡಿಸಿಕೊಂಡು ವಿಶ್ವಾಸ ಗಳಿಸಿ, 50 ಸಾವಿರ ಮತಗಳ ಅಂತರದ ಗುರಿಯನ್ನು ತಲುಪುವ ಸಂಕಲ್ಪ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಕ್ಷೇತ್ರದ ವಿಧಾನಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಹೇಳಿದರು.


ಶಿಕಾರಿಪುರ (ಡಿ.10) : ವಿರೋಧಿಗಳ ಟೀಕೆ, ಟಿಪ್ಪಣಿಗಳನ್ನು ಆಶೀರ್ವಾದ ಎಂದು ಭಾವಿಸಿ ಕಾರ್ಯಕರ್ತರು, ಎಲ್ಲರನ್ನೂ ಒಗ್ಗೂಡಿಸಿಕೊಂಡು ವಿಶ್ವಾಸ ಗಳಿಸಿ, 50 ಸಾವಿರ ಮತಗಳ ಅಂತರದ ಗುರಿಯನ್ನು ತಲುಪುವ ಸಂಕಲ್ಪ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಕ್ಷೇತ್ರದ ವಿಧಾನಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಹೇಳಿದರು.

ಗುರುವಾರ ಸಂಜೆ ಪಟ್ಟಣದ ರಥಬೀದಿಯಲ್ಲಿನ ತರಳಬಾಳು ಜಗದ್ಗುರು ಸಮುದಾಯ ಭವನದಲ್ಲಿ ನಡೆದ ನಗರ ಬಿಜೆಪಿ ಶಕ್ತಿ ಕೇಂದ್ರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 3-4 ದಶಕಗಳಿಂದ ಕ್ಷೇತ್ರದ ಶಾಸಕ, ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ತಾಲೂಕನ್ನು ಸಮಗ್ರ ಅಭಿವೃದ್ಧಿಪಡಿಸಿದ್ದಾರೆ. ತಾವು ಸಹ ಅಭಿವೃದ್ಧಿಯ ರಥವನ್ನು ಮುಂದೆ ಎಳೆದುಕೊಂಡು ಹೋಗುವ ಕರ್ತವ್ಯ, ಜವಾಬ್ದಾರಿಯ ಅರಿವು ಹೊಂದಿರುವುದಾಗಿ ತಿಳಿಸಿದರು.

Tap to resize

Latest Videos

ವಿಜಯೇಂದ್ರನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ: ಬಿ.ಎಸ್‌.ಯಡಿಯೂರಪ್ಪ

ಈಗಾಗಲೇ ಪಕ್ಷದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಸಂಘಟನೆಗೆ ಶಕ್ತಿ ತುಂಬುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ನೆಲೆ ಇಲ್ಲದೆ ಠೇವಣಿ ದೊರೆಯದ ಕೆ.ಆರ್‌.ಪೇಟೆ, ಶಿರಾ ಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರ ಜತೆಯಲ್ಲಿ ಕಮಲವನ್ನು ಅರಳಿಸಲು ಹೆಚ್ಚಿನ ರೀತಿಯಲ್ಲಿ ಶ್ರಮಿಸಿದ್ದಾಗಿ ತಿಳಿಸಿದರು.

ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಿ ಗ್ರಾಮೀಣ ಪ್ರದೇಶಕ್ಕೆ ಪಕ್ಷ ವಿಸ್ತರಿಸಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆಯೇರಲು ಯಡಿಯೂರಪ್ಪ ಅವರ ಜತೆಗೆ ತಾಲೂಕಿನ ಜನತೆ ನೀಡಿದ ಸಹಕಾರ, ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ. ಹಣದ ಹಾರ ಹಾಕಿ ಸಂಭ್ರಮಿಸಿದ ಕಾರ್ಯಕರ್ತರಿಂದಾಗಿ ಪಕ್ಷ ಇಂದು ಸದೃಢವಾಗಿದೆ. ಕಾಂಗ್ರೆಸ್‌ ಬಾವುಟಕ್ಕಿಂತ ಎತ್ತರದಲ್ಲಿ ಬಿಜೆಪಿ ಬಾವುಟ ಹಾರಿಸುತ್ತಿದ್ದ ಕಾರ್ಯಕರ್ತರ ಛಲ, ಹಠ ಕೇವಲ ಬಿಜೆಪಿಯಲ್ಲಿ ಮಾತ್ರ ಸಾದ್ಯ ಎಂದು ಅಭಿಪ್ರಾಯಪಟ್ಟರು.

ಸಂಸದ ರಾಘವೇಂದ್ರ ಮಾತನಾಡಿ, ಪಕ್ಷದ ಗೆಲುವಿನಲ್ಲಿ ಕಾರ್ಯಕರ್ತರು ಮುಖಂಡರ ಶ್ರಮ ಬಹುಮುಖ್ಯ ಕಾರಣವಾಗಿದೆ. ನಮ್ಮನ್ನು ಹಾರೈಸಿದಲ್ಲಿ ಅಣ್ಣ, ತಮ್ಮ ಬೀಗರ ರೀತಿ ನಿಮ್ಮ ಮನೆಯ ಎಲ್ಲ ಕಾರ್ಯಕ್ರಮಗಳಲ್ಲಿ ನೆರವಾಗುತ್ತೇವೆ. .80 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಕ್ಷ, ಬಿಎಸ್‌ವೈರವರ ವಿಶ್ವಾಸದಿಂದ ಅಲ್ಪಸಂಖ್ಯಾತರು ಬೆಂಬಲಿಸುತ್ತಿದ್ದು, ಎಲ್ಲರ ವಿಶ್ವಾಸ ಗಳಿಸಿದಲ್ಲಿ 50 ಸಾವಿರ ಅಂತರದ ಗೆಲವು ಅಸಾಧ್ಯವಲ್ಲ ಎಂದು ತಿಳಿಸಿದರು.

ನೀರಾವರಿ, ವಿದ್ಯುತ್‌, ರೈಲ್ವೆ ಸಂಪರ್ಕ ಸಹಿತ ತಾಲೂಕು ಸಮಗ್ರ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಈ ಬಗ್ಗೆ ವಿರೋಧಿಗಳು ಬೆರಳು ತೋರಿಸುವಂತಿಲ್ಲ. ಚುನಾವಣೆ ಸಂದರ್ಭದಲ್ಲಿ ಮೈಮರೆತಲ್ಲಿ ಯಡಿಯೂರಪ್ಪನವರು ಹಿಂದೆ ಪರಾಭವಗೊಂಡಿದ್ದಾರೆ. ಪಕ್ಷದ ವಿರುದ್ಧ ಎಲ್ಲ ವಿರೋಧಿಗಳು ಒಗ್ಗಟ್ಟಾಗಿದ್ದು ಸವಾಲನ್ನು ಸಮರ್ಥವಾಗಿ ಎದುರಿಸಬೇಕಾಗಿದೆ ಎಂದರು.

ನಿವೃತ್ತ ಕೆಎಎಸ್‌ ಅಧಿಕಾರಿ ಎಚ್‌.ಟಿ. ಬಳಿಗಾರ್‌ ಮಾತನಾಡಿ, ಶಿಸ್ತಿನ ಪಕ್ಷ ಬಿಜೆಪಿ ಸೇರ್ಪಡೆ ಬಗ್ಗೆ ಸಂತೃಪ್ತಿ ಹೊಂದಿದೆ. ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ ಪಕ್ಷಕ್ಕೆ ಪ್ರಬಲ ಶಕ್ತಿಯಾಗಿದೆ. ಪ್ರತಿ ಬೂತ್‌ನಲ್ಲಿ 50-60 ಕಾರ್ಯಕರ್ತರ ತಂಡ ಸಂಘಟನೆಯಲ್ಲಿ ತೊಡಗಿಸಿಕೊಂಡು ತಳಮಟ್ಟದಲ್ಲಿ ಪಕ್ಷಕ್ಕೆ ಭದ್ರ ಬುನಾದಿಯನ್ನು ಹಾಕುತ್ತಿದ್ದಾರೆ. ಗುಜರಾತ್‌ ಫಲಿತಾಂಶ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಚುನಾವಣೆಗೂ ಮುನ್ನವೇ ರಾಜಕೀಯ ಚದುರಂಗದಾಟ ಆರಂಭಿಸಿದ ವಿಜಯೇಂದ್ರ: ಜೆಡಿಎಸ್‌ಗೆ ಬಿಗ್‌ ಶಾಕ್‌?

ಪುರಸಭಾ ಮಾಜಿ ಅಧ್ಯಕ್ಷ ರಮೇಶ್‌ (ರಾಮಿ) ಸಹಿತ ನೂರಾರು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು. ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ನಗರಾಧ್ಯಕ್ಷ ಮೋಹನ್‌, ತಾಲೂಕು ಅಧ್ಯಕ್ಷ ವೀರೇಂದ್ರ, ಮುಖಂಡ ವಸಂತಗೌಡ, ಬಿ.ಡಿ.ಭೂಕಾಂತ್‌, ಪುರಸಭಾಧ್ಯಕ್ಷೆ ರೇಖಾಬಾಯಿ ಮತ್ತಿತರರು ಉಪಸ್ಥಿತರಿದ್ದರು.

click me!