ರಾಜ್ಯ ರಾಜಧಾನಿ ಬೆಂಗಳೂರು ಶುಕ್ರವಾರ ತೀವ್ರ ಚಳಿಗೆ ಅಕ್ಷರಶಃ ನಡುಗಿತು. ಬಂಗಾಳಕೊಲ್ಲಿಯಲ್ಲಿನ ಚಂಡಮಾರುತದ ಪ್ರಭಾವ ರಾಜಧಾನಿಯ ಹವಾಮಾನದ ಮೇಲಾಗಿದ್ದು, ಇನ್ನೂ ಎರಡ್ಮೂರು ದಿನ ತೀವ್ರ ಚಳಿ ಇರಲಿದೆ.
ಬೆಂಗಳೂರು (ಡಿ.10): ರಾಜ್ಯ ರಾಜಧಾನಿ ಬೆಂಗಳೂರು ಶುಕ್ರವಾರ ತೀವ್ರ ಚಳಿಗೆ ಅಕ್ಷರಶಃ ನಡುಗಿತು. ಬಂಗಾಳಕೊಲ್ಲಿಯಲ್ಲಿನ ಚಂಡಮಾರುತದ ಪ್ರಭಾವ ರಾಜಧಾನಿಯ ಹವಾಮಾನದ ಮೇಲಾಗಿದ್ದು, ಇನ್ನೂ ಎರಡ್ಮೂರು ದಿನ ತೀವ್ರ ಚಳಿ ಇರಲಿದೆ. ಶುಕ್ರವಾರವಂತೂ ದಿಢೀರನೇ ಭಾರಿ ಚಳಿಯ ಅನುಭವ ಬೆಂಗಳೂರಿಗರಿಗೆ ಆಯಿತು. ನಗರದ ಕನಿಷ್ಠ ತಾಪಮಾನದಲ್ಲಿ ಅಷ್ಟೊಂದು ಇಳಿಕೆ ದಾಖಲಾಗಿರದಿದ್ದರೂ ಗರಿಷ್ಠ ತಾಪಮಾನದಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಐದಾರು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಕುಸಿತ ದಾಖಲಾಗಿದ್ದು, ಚಳಿಗೆ ಕಾರಣವಾಯಿತು.
ಹಾಗೆಯೇ ಸಾಮಾನ್ಯವಾಗಿ ದಿನದ ಅತಿ ಕನಿಷ್ಠ ತಾಪಮಾನ ಸೂರ್ಯೋದಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ದಾಖಲಾಗುತ್ತದೆ. ಆದರೆ ಈ ವಿದ್ಯಮಾನಕ್ಕೆ ವ್ಯತಿರಿಕ್ತವಾಗಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ದಿನದ ಕನಿಷ್ಠ ತಾಪಮಾನ ನಗರದಲ್ಲಿ ದಾಖಲಾಗಿದೆ. ಇದರಿಂದಾಗಿ ಮಧ್ಯಾಹ್ನದ ಬಳಿಕ ಜನರಿಗೆ ಭಾರಿ ಚಳಿಯ ಅನುಭವ ಆಯಿತು. ರಾಜ್ಯ ಹವಾಮಾನ ಕೇಂದ್ರದ ಹಿರಿಯ ಅಧಿಕಾರಿ ಎ.ಪ್ರಸಾದ್ ’ಕನ್ನಡ ಪ್ರಭ’ದ ಜೊತೆ ಮಾತನಾಡಿ, ಶುಕ್ರವಾರ ನಸುಕಿನ ಹೊತ್ತು ದಿನದ ಕನಿಷ್ಠ ತಾಪಮಾನ 18.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ ಮಧ್ಯಾಹ್ನ 17.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಕರ್ನಾಟಕಕ್ಕೂ ತಟ್ಟಿದ ಮ್ಯಾಂಡೌಸ್ ಎಫೆಕ್ಟ್: ಮೈಕೊರೆಯುವ ಚಳಿ ಮಧ್ಯೆ ಭಾರೀ ಮಳೆ..!
ಇದರಿಂದಾಗಿ ಜನರಿಗೆ ಹಗಲಲ್ಲೇ ಭಾರಿ ಚಳಿಯ ಅನುಭವವಾಗಿದೆ. ಚಂಡ ಮಾರುತ ಬೀಸುವಾಗ ದಟ್ಟಮೋಡ ಇರುವ ಕಾರಣ ಕನಿಷ್ಠ ತಾಪಮಾನದಲ್ಲಿ ದೊಡ್ಡ ಮಟ್ಟದ ಇಳಿಕೆ ಆಗುವುದಿಲ್ಲ. ಆದರೆ ಗರಿಷ್ಠ ತಾಪಮಾನದಲ್ಲಿ ಭಾರಿ ಇಳಿಕೆ ಆಗುತ್ತದೆ. ಇದರ ಜೊತೆಗೆ ವೇಗವಾಗಿ ಬೀಸುವ ಗಾಳಿ, ಹವಾಮಾನದಲ್ಲಿ ಹೆಚ್ಚಿರುವ ತೇವಾಂಶ ಮತ್ತು ಹನಿ ಹನಿ ಮಳೆಯಿಂದಾಗಿ ಚಳಿ ಹೆಚ್ಚಿದೆ. ಇನ್ನೂ ಎರಡ್ಮೂರು ದಿನ ಇದೇ ಪರಿಸ್ಥಿತಿ ಇರಬಹುದು. ಬಳಿಕ ತಾಪಮಾನದಲ್ಲಿ ಏರಿಕೆ ಕಾಣಬಹುದು ಎಂದು ಹೇಳಿದ್ದಾರೆ. ಚಳಿಯಿಂದ ಪಾರಾಗಲು ಜನ ಶ್ವೆಟರ್, ಜರ್ಕಿನ್, ಕೋಟು, ಪೂರ್ಣ ತೋಳಿನ ಉಡುಗೆ ಧರಿಸಿದ್ದರು. ಇದರ ಜೊತೆಗೆ ಬಿಸಿ ಪಾನೀಯ, ಬಿಸಿಬಿಸಿ ತಿಂಡಿ ಸೇವಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಪಾರ್ಕ್ಗಳಲ್ಲಿ ವಾಯು ವಿಹಾರಿಗಳ ಸಂಖ್ಯೆ ಕಡಿಮೆ ಇತ್ತು.
ರಾಜ್ಯಕ್ಕೆ 'ಮ್ಯಾಂಡೌಸ್' ಚಂಡಮಾರುತ ಆಗಮನ: ಮುಂದಿನ 5 ದಿನ ಮಳೆ
ಇಂದು ಮಳೆ ಸಾಧ್ಯತೆ: ಶನಿವಾರ ಮತ್ತು ಭಾನುವಾರ ನಗರದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮುಂಜಾನೆ ಅವಧಿಯಲ್ಲಿ ಮಂಜು ಮಸುಕಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 23 ಮತ್ತು 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.