ಉಪಚುನಾವಣೆ ಕದನ: ಹಿರೇಕೆರೂರು, ರಾಣಿಬೆನ್ನೂರಿನಲ್ಲಿ ಸಿಎಂ ಯಡಿಯೂರಪ್ಪ ಪ್ರಚಾರ

By Web Desk  |  First Published Nov 24, 2019, 7:45 AM IST

ಇಂದು ಜಿಲ್ಲೆಗೆ ಸಿಎಂ ಯಡಿಯೂರಪ್ಪ, ಬಿಜೆಪಿಯಲ್ಲಿ ಉತ್ಸಾಹ|ಹಿರೇಕೆರೂರು ಕ್ಷೇತ್ರದ ರಟ್ಟೀಹಳ್ಳಿ, ರಾಣಿಬೆನ್ನೂರಿನಲ್ಲಿ ಅಬ್ಬರದ ಪ್ರಚಾರ|ಗ್ರಾಮೀಣ ಭಾಗದಲ್ಲಿ ಸ್ಥಳೀಯ ನಾಯಕರೇ ನಡೆಸುತ್ತಿದ್ದ ಪ್ರಚಾರಕ್ಕೆ ಭಾನುವಾರದಿಂದ ಅಬ್ಬರ ಪಡೆದುಕೊಳ್ಳಲಿದೆ|
 


ಹಾವೇರಿ(ನ.24): ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು(ಭಾನುವಾರ) ಸಿಎಂ ಯಡಿಯೂರಪ್ಪ ಹಿರೇಕೆರೂರು ಮತ್ತು ರಾಣಿಬೆನ್ನೂರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ನಡೆಸಲಿದ್ದು, ಇದು ಕಮಲ ಪಾಳೆಯದ ಉತ್ಸಾಹಕ್ಕೆ ಕಾರಣವಾಗಿದೆ.

ನಾಮಪತ್ರ ವಾಪಸ್‌ ಪಡೆದ ಬಳಿಕ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ಕಾವು ಹೆಚ್ಚುತ್ತಿದೆ. ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿಗಳು ಒಂದು ಹೆಜ್ಜೆ ಮುಂದಿದ್ದಾರೆ. ನಾಮಪತ್ರ ಸಲ್ಲಿಸಿದ ದಿನದಿಂದಲೂ ಹಳ್ಳಿಹಳ್ಳಿಗಳಲ್ಲಿ ಹಿರೇಕೆರೂರು ಅಭ್ಯರ್ಥಿ ಬಿ.ಸಿ. ಪಾಟೀಲ ಹಾಗೂ ರಾಣಿಬೆನ್ನೂರಿನಲ್ಲಿ ಅರುಣಕುಮಾರ್‌ ಪೂಜಾರ ಬಿಜೆಪಿ ಬಾವುಟ ಹಿಡಿದು ತಿರುಗುತ್ತಿದ್ದಾರೆ. ಹೋದಲ್ಲೆಲ್ಲ ಭರ್ಜರಿ ಸ್ವಾಗತ, ಪ್ರತಿಕ್ರಿಯೆ ದೊರೆತಿರುವುದು ಕಮಲ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಆದರೆ, ಇದುವರೆಗೆ ಗ್ರಾಮೀಣ ಭಾಗದಲ್ಲಿ ಸ್ಥಳೀಯ ನಾಯಕರೇ ನಡೆಸುತ್ತಿದ್ದ ಪ್ರಚಾರಕ್ಕೆ ಭಾನುವಾರದಿಂದ ಅಬ್ಬರ ಪಡೆದುಕೊಳ್ಳಲಿದೆ.

Tap to resize

Latest Videos

ಇಂದು ಮುಖ್ಯಮಂತ್ರಿ:

ಕೇವಲ 15 ದಿನಗಳ ಹಿಂದಷ್ಟೇ ಜಿಲ್ಲೆಯ ಹಿರೇಕೆರೂರು ಮತ್ತು ರಾಣಿಬೆನ್ನೂರಿಗೆ ಆಗಮಿಸಿ ನೂರಾರು ಕೋಟಿ ರು. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಆಗಲೇ ಪ್ರಚಾರಕ್ಕೆ ಮುನ್ನುಡಿ ಬರೆದು ಹೋಗಿದ್ದರು. ಈಗ 15 ದಿನಗಳ ಬಳಿಕ ಭಾನುವಾರ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಹಿರೇಕೆರೂರು ಕ್ಷೇತ್ರದ ರಟ್ಟೀಹಳ್ಳಿಯಲ್ಲಿ ಚುನಾವಣಾ ಭಾಷಣ ಮಾಡಲಿದ್ದಾರೆ. ಇದು ಕೌರವ ಬಿ.ಸಿ. ಪಾಟೀಲ ಪಾಲಿಗೆ ದೊಡ್ಡ ಶಕ್ತಿ ಕೊಡಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಷ್ಟು ವರ್ಷ ಕಾಂಗ್ರೆಸ್‌ನಲ್ಲಿದ್ದ ಬಿ.ಸಿ. ಪಾಟೀಲ ಈಗ ದಿಢೀರ್‌ ಆಗಿ ಬಿಜೆಪಿ ಅಭ್ಯರ್ಥಿಯಾಗಿ ಬಂದಿರುವುದರಿಂದ ಕಮಲ ಕಾರ್ಯಕರ್ತರಲ್ಲಿ ಅನೇಕರಿಗೆ ಇನ್ನೂ ಅವರನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಪಕ್ಷ, ಯಡಿಯೂರಪ್ಪ ಅವರನ್ನು ಬೆಂಬಲಿಸುವುದರಲ್ಲಿ ಅನುಮಾನವಿಲ್ಲ. ಭಾನುವಾರ ಯಡಿಯೂರಪ್ಪ ಆಗಮನದಿಂದ ಕಾರ್ಯಕರ್ತರಲ್ಲಿದ್ದ ಅಳುಕು ದೂರವಾಗುವ ನಿರೀಕ್ಷೆ ಹೊಂದಲಾಗಿದೆ. ಗೊಂದಲಗಳನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಾಗಿ ಶ್ರಮಿಸುವ ಮುನ್ಸೂಚನೆ ದೊರೆತಿದೆ.

ರಾಣಿಬೆನ್ನೂರು ಕ್ಷೇತ್ರದಲ್ಲಿ 41 ವರ್ಷದ ಯುವ ಅಭ್ಯರ್ಥಿ ಅರುಣಕುಮಾರ್‌ ಪೂಜಾರ ಅವರ ಸ್ಪರ್ಧೆಯಿಂದ ಕಾಂಗ್ರೆಸ್‌ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಆರ್‌. ಶಂಕರ್‌ ಸ್ಪರ್ಧಿಸಿದ್ದರೆ ತಮಗೆ ಗೆಲುವು ಸುಲಭ ಅಂದುಕೊಂಡಿದ್ದ ಕೆ.ಬಿ. ಕೋಳಿವಾಡರ ಲೆಕ್ಕಾಚಾರವನ್ನು ಬಿಜೆಪಿ ನಾಯಕರು ಬುಡಮೇಲು ಮಾಡಿ ಯುವ ಮುಖಂಡನನ್ನು ಕಣಕ್ಕಿಳಿಸಿದೆ. ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದವರೆಲ್ಲರ ಭಿನ್ನಮತ ಶಮನಗೊಳಿಸಿರುವ ನಾಯಕರು, ಈಗ ಗೆಲುವಿಗಾಗಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಸಣ್ಣಪುಟ್ಟಭಿನ್ನಾಭಿಪ್ರಾಯಗಳೆಲ್ಲ ಭಾನುವಾರದ ಮುಖ್ಯಮಂತ್ರಿಗಳ ಭೇಟಿಯಿಂದ ಮರೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಬಿಜೆಪಿಗೆ ಭಾನುವಾರದಿಂದ ಮತ್ತಷ್ಟುಹುಮ್ಮಸ್ಸು ದೊರೆಯುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!