* ಸಹ ಸಿಬ್ಬಂದಿಯ ಕಷ್ಟಕ್ಕೆ ಸಿಬ್ಬಂದಿಗಳ ನೆರವು
* ದತ್ತಜಯಂತಿಗೆ ಡ್ಯೂಟಿಗೆ ಬಂದ ಬಹುಮಾನವನ್ನು ನೀಡಿದ ಸಿಬ್ಬಂದಿಗಳು
* ಖಾಕಿಯೊಳಗಿನ ಮಾನವೀಯತೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಮೇ.14) : ASI ಪತ್ನಿಯೊಬ್ಬರು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು, ಅವರ ನೋವಿಗೆ ಕಾಫಿನಾಡ ಖಾಕಿಗಳು ಹೆಗಲು ಕೊಟ್ಟಿದ್ದಾರೆ. ತಮಗೆ ಬಂದ ಬಹುಮಾನದ ಹಣವನ್ನೆಲ್ಲಾ ASI ಪತ್ನಿಯ ಚಿಕಿತ್ಸೆಗೆ ನೀಡಿ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ. ದತ್ತಜಯಂತಿ ಡ್ಯಾಟಿಯ 50 ಸಾವಿರ ಹಣವನ್ನೂ ಚಿಕಿತ್ಸೆಗೆ ನೀಡಿರುವ ಪೊಲೀಸರು ಕಾರ್ಯಕ್ಕೆ ಜನರು ಕೂಡ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಖಾಕಿಯೊಳಗಿನ ಮಾನವೀಯತೆ
ಪೊಲೀಸರ ಜೊತೆ ಅತಿಯಾದ ವಿಶ್ವಾಸವೂ ಒಳ್ಳೆಯದಲ್ಲ. ಅತಿಯಾದ ವಿರೋಧವೂ ಒಳ್ಳೆಯದ್ದಲ್ಲ ಎಂಬ ಮಾತಿದೆ. ಇದು ಪೊಲೀಸ್ ಜನರ ನಡುವಿನದ್ದಾದ್ರೆ, ಇಲಾಖೆಯೊಳಗೆ ಪೊಲೀಸರನ್ನ ಕಂಡ್ರೆ ಪೊಲೀಸರಿಗೆ ಆಗೋದಿಲ್ಲ ಅನ್ನೋದು ಗುಟ್ಟಾಗೇನು ಉಳಿದಿಲ್ಲ. ನಾನಾ ಜಾಗದಲ್ಲಿ ನಾನಾ ರೀತಿ ಹೊರಬಂದಿದೆ. ಆದ್ರೆ, ಈ ಆರೋಪಕ್ಕೆ ಕಾಫಿನಾಡು ಮಾತ್ರ ಮುಕ್ತವಾಗಿದೆ. ಯಾಕಂದ್ರೆ, ಸಿಬ್ಬಂದಿಗಳ ನೋವಿಗೆ ಸಿಬ್ಬಂದಿಗಳೇ ಹೆಗಲಾಗಿದ್ದಾರೆ. ಎಷ್ಟರಮಟ್ಟಿಗಂದ್ರೆ ಕೈಯಲ್ಲಿರೋ ದುಡ್ಡನ್ನ ಕೊಡುವುದರ ಜೊತೆ ತಮಗೆ ಬಂದ ಬಹುಮಾನದ ಹಣವನ್ನೂ ನೋವಿನ ಸಿಬ್ಬಂದಿ ಕೈಗಿಟ್ಟಿದ್ದಾರೆ.
ಚಿಕ್ಕಮಗಳೂರು ನಗರದ ಗ್ರಾಮಾಂತರ ಠಾಣೆಯಲ್ಲಿ ಎ.ಎಸ್.ಐ ಆಗಿ ಕರೀಗೌಡ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಇವರ ಪತ್ನಿ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದಾರೆ. ಆರೋಗ್ಯದಲ್ಲಿ ಒಂದಷ್ಟು ಸುಧಾರಣೆಯೂ ಆಗಿದೆ. ಹಲವು ಸರ್ಜರಿಗಳ ಬಳಿಕ ಕಿಮಿಯೋಥೆರಪಿ ನಡೆಯುತ್ತಿದೆ. ಕಿಮಿಯೋಥೆರಪಿ ನಡೆಯುವಾಗ ಸಾಕಷ್ಟು ಹಣದ ಅವಶ್ಯಕತೆ ಇರುತ್ತೆ. ಹಾಗಾಗಿ, ಕಳೆದ ಎರಡ್ಮೂರು ವರ್ಷಗಳಿಂದ ಕರೀಗೌಡರವರ ಹೋರಾಟದ ಬದುಕನ್ನ ಕಂಡ ಗ್ರಾಮಾಂತರ ಠಾಣಾ ಪೊಲೀಸರು ತಮ್ಮ ಶಕ್ತಿ ಮೀರಿ ಹಣಕಾಸಿನ ನೆರವು ನೀಡಿದ್ದಾರೆ.
Chikkamagaluru: ಚಾರ್ಮಾಡಿ ಘಾಟ್ ರಹಸ್ಯ: ಘಾಟ್ ಕಾಯುವ ತಾಯಿ ಗುಳಿಗಮ್ಮ!
ಜೊತೆಗೆ, ಕಳೆದ ದತ್ತಜಯಂತಿಯ ಸಂದರ್ಭದಲ್ಲಿ 30 ಸಾವಿರಕ್ಕೂ ಅಧಿಕ ಜನಸಾಮಾನ್ಯರಿದ್ದರೂ ಕೂಡ ಒಂದೇ ಒಂದು ಸಣ್ಣ ಸಮಸ್ಯೆಯಾಗದಂತೆ ದತ್ತಜಯಂತಿಯಲ್ಲಿ ಬಂದೋಬಸ್ತ್ ಕಲ್ಪಿಸಿದ್ದರೆಂಬ ಕಾರಣಕ್ಕೆ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ವೈಯಕ್ತಿಕವಾಗಿ ಗ್ರಾಮಾಂತರ ಠಾಣಾ ಸಿಬ್ಬಂದಿಗಳಿಗೆ 50 ಸಾವಿರ ಬಹುಮಾನ ನೀಡಿದ್ದರು. ಗ್ರಾಮಾಂತರ ಠಾಣೆಯ ಎಲ್ಲಾ ಪೊಲೀಸರು ಆ ಹಣವನ್ನೂ ಕರೀಗೌಡರ ಪತ್ನಿಯ ಚಿಕಿತ್ಸೆಗೆ ನೀಡಿ ಖಾಕಿಯೊಳಗಿನ ಮಾನವೀಯತೆಯನ್ನ ತೋರಿದ್ದಾರೆ.
ಎಸ್ಪಿ ಅಕ್ಷಯ್ ಶ್ಲಾಘನೆ
ಕೆಲಸದ ಒತ್ತಡ ಹಾಗೂ ಅಸಮಾಧಾನದ ಮಧ್ಯೆಯೂ ಸಿಬ್ಬಂದಿಗಳ ನೋವಿಗೆ ಹೆಗಲಾಗಿರೋ ಸಿಬ್ಬಂದಿಗಳಿಗೆ ಎಸ್ಪಿ ಅಕ್ಷಯ್ ಶ್ಲಾಘಿಸಿದ್ದಾರೆ.
ಕಳೆದ ವರ್ಷವೂ ನಗರದ ಸೆನ್ ಸ್ಟೇಷನ್ನಲ್ಲಿ ಸಿಬ್ಬಂದಿಯೊಬ್ಬರು ಆನ್ ಡ್ಯೂಟಿಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಅವರಿಗೂ ಬ್ರೈನ್ ಟ್ಯೂಮರ್ ಇರುವುದು ಖಚಿತವಾಗಿತ್ತು. ಒಂದು ವರ್ಷಗಳ ಕಾಲ ನಿರಂತರ ಸರ್ಜರಿ ಬಳಿಕ ದೇಹ ಕೂಡ ಸಂಪೂರ್ಣ ಪ್ಯಾರಲೈಸ್ ಆಗಿತ್ತು. ಕುಟುಂಬಸ್ಥರು ಹಣಕ್ಕಾಗಿ ತೀವ್ರ ಪರದಾಡಿದ್ದರು. ಬೆಳಗಾದರೆ ಸರ್ಜರಿ ಮಾಡಬೇಕಿತ್ತು. ಆದರೆ ಕೈಯಲ್ಲಿ ಹಣ ಇಲ್ಲ. ಆಗ ಅವರ ಬ್ಯಾಚ್ಮೇಟ್‌ಗೆ ವಿಷಯ ತಿಳಿದು ಬೆಳಗಾಗುವಷ್ಟರಲ್ಲಿ ಎಲ್ಲರೂ ಸೇರಿ ಒಂದು ಲಕ್ಷ ಹಣ ನೀಡಿ ಸರ್ಜರಿ ಮಾಡಿಸಿದ್ದಾರೆ.
ಆಗ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಕೂಡ ಅವರ ಪರಿಸ್ಥಿತಿಯನ್ನ ಮನಗಂಡು ಇಲಾಖೆಯಿಂದ ಬಾಕಿ ಉಳಿದಿದ್ದ ಅವರ ಎಲ್ಲಾ ಬಿಲ್ ಕ್ಲಿಯರ್ ಮಾಡಿಸಿಕೊಟ್ಟಿದ್ದಾರೆ. ಮತ್ತೆ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸೇರಿ ಸುಮಾರು ಮೂರು ಲಕ್ಷದಷ್ಟು ಹಣವನ್ನ ಆ ಕುಟುಂಬಕ್ಕೆ ನೀಡಿದ್ದಾರೆ. ಕೆಲಸದ ಒತ್ತಡ ಹಾಗೂ ಅಸಮಾಧಾನದ ಮಧ್ಯೆಯೂ ಸಿಬ್ಬಂದಿಗಳ ನೋವಿಗೆ ಹೆಗಲಾಗಿರೋ ಸಿಬ್ಬಂದಿಗಳಿಗೆ ಎಸ್ಪಿ ಅಕ್ಷಯ್ ಕೂಡ ಶ್ಲಾಘಿಸಿದ್ದಾರೆ.
ಒಟ್ಟಾರೆ, ಪೊಲೀಸರು ಪೊಲೀಸರಿಗೆ ಸಹಾಯ ಮಾಡಿದ್ದಾರೆ ಅಂತಲ್ಲ. ರಸ್ತೆಯಲ್ಲಿ ಅಪಘಾತವಾದ ವ್ಯಕ್ತಿಗೆ ಆಸ್ಪತ್ರೆಗೆ ಸೇರಿಸಿ ರಕ್ತ ಕೊಟ್ಟ ಪೊಲೀಸರು ಇದ್ದಾರೆ. ಪರೀಕ್ಷೆಗೆ ಲೇಟಾಯ್ತು ಎಂದು ಡ್ಯೂಟಿ ಬಿಟ್ಟು ಎಕ್ಸಾಂ ಹಾಲ್ಗೆ ಕರೆದುಕೊಂಡು ಹೋಗಿ ಸಸ್ಪೆಂಡ್ ಆದ ಪೊಲೀಸರು ಇದ್ದಾರೆ. ಇಲಾಖೆಯೊಳಗೋ-ಹೊರಗೋ ಒಳ್ಳೆಯವರು-ಕೆಟ್ಟವರು ಇಬ್ಬರೂ ಇದ್ದಾರೆ. ಕಷ್ಟ ಎಲ್ಲರಿಗೂ ಇರುತ್ತೆ. ಆ ಕಷ್ಟದ ಮಧ್ಯೆಯೂ ಕೈಯಲ್ಲಿರೋ ಹಣದ ಜೊತೆ ಬಹುಮಾನದ ಹಣವನ್ನೂ ಸಿಬ್ಬಂದಿಯ ಹೆಂಡತಿಯ ಚಿಕಿತ್ಸೆಗೆ ನೀಡಿ ಮಾನವೀಯತೆ ತೋರಿದ್ದಾರೆ.