* ತುಮಕೂರು ನಗರದ 41 ಕಡೆಗಳಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್
* ಸಾರ್ವಜನಿಕರ ಭದ್ರತೆ ಸುರಕ್ಷತೆಗಾಗಿ ನಿರ್ಮಾಣ
* ಉಪಯೋಗಕ್ಕೆ ಬಾರದ ಕಾಲ್ ಬಾಕ್ಸ್
* ಕರೆಗಳು ಬಂದದ್ದೇ ಅಪರೂಪಕ್ಕೆ
ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು.
ತುಮಕೂರು, (ಮೇ.14) : ಸ್ಮಾರ್ಟ್ ಸಿಟಿ ನಿರ್ಮಿಸಿರುವ ಎಮರ್ಜೆನ್ಸಿ ಕಾಲ್ ಬಾಕ್ಸ್ ಯೋಜನೆ ಹಳ್ಳ ಹಿಡಿದೆ. ಸಾರ್ವಜನಿಕರಿಗೆ ಹಾಗೂ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಶುರುವಾದ ಈ ಯೋಜನೆಗೆ ಜನರ ಸ್ಪಂದನೆ ಇಲ್ಲದಂತಾಗಿದೆ. ನಗರದ ತುಂಬ ಎಮರ್ಜೆನ್ಸಿ ಕಾಲ್ ಬಾಕ್ಸ್ ಆಳವಡಿಸಿದ್ರು. ಜನರು ಬಳಕೆ ಮಾಡದೆ ನಿರಾಸಕ್ತಿ ತೋರಿಸಿದ್ದಾರೆ. ಪೂರ್ವ ತಯಾರಿ ಹಾಗೂ ಜನರಿಗೆ ಅಗತ್ಯವಿಲ್ಲದಂತಹ ಯೋಜನೆಗಳನ್ನು ರೂಪಿಸಿ ಸ್ಮಾರ್ಟ್ ಸಿಟಿ ಯೋಜನೆ ಹಳ್ಳ ಹಿಡಿಯುವಂತೆ ಅಧಿಕಾರಿಗಳು ಮಾಡಿದ್ರಾ ಅಂತ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ನಗರದ 41 ಕಡೆ ಎಮರ್ಜೆನ್ಸಿ ಕಾಲಿಂಗ್ ಬಾಕ್ಸ್
ತುಮಕೂರು ನಗರದ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರ ವ್ಯಾಪ್ತಿಯ 41 ಪ್ರದೇಶಗಳಲ್ಲಿ ಪಬ್ಲಿಕ್ ಅನೌನ್ಸ್ಮೆಂಟ್ ಮತ್ತು ಎಮರ್ಜೆನ್ಸಿ ಕಾಲ್ ಬಾಕ್ಸ್ ಅಳವಡಿಸಲಾಗಿದ್ದರೂ ನಿರುಪಯುಕ್ತ ಎನಿಸಿದೆ . ನಗರದಲ್ಲಿ ಸ್ಮಾರ್ಟ್ ಸಿಟಿ ಕೈಗೊಂಡಿರುವ ಪ್ರಮುಖ ಯೋಜನೆಗಳಲ್ಲೊಂದಾದ ಸಮಗ್ರ ನಗರ ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರ ( ಐಸಿಎಂಸಿಸಿ ) ಯೋಜನೆಯಡಿ ಈ ಎಮರ್ಜೆನ್ಸಿ ಕಾಲ್ ( ತುರ್ತು ಸಹಾಯವಾಣಿ ) ಬಾಕ್ಸ್ಗಳನ್ನು ಅಳವಡಿಸಲಾಗಿದೆ . ಸಾರಿಗೆ , ಅಗ್ನಿಶಾಮಕ , ಜಲಮಂಡಳಿ , ಪೊಲೀಸ್ , ಇ - ಆಡಳಿತ ಸೇರಿ ವಿವಿಧ ಕ್ರಿಯಾತ್ಮಕ ಇಲಾಖೆಗಳನ್ನೊಳಗೊಂಡಂತೆ ಏಕೈಕ ವೇದಿಕೆ ಕಲ್ಪಿಸಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸುರಕ್ಷತೆ ಒದಗಿಸುವುದು ಈ ತುರ್ತು ಸಹಾಯವಾಣಿ ಉದ್ದೇಶವಾಗಿದೆ.
Russia-Ukraine War: ಅತಂತ್ರರಾದ ವಿದ್ಯಾರ್ಥಿಗಳ ನೆರವಿಗೆ ಬಂದ ಸಿದ್ಧಗಂಗಾ ಮಠ
ಸಾರ್ವಜನಿಕರು ಅಪಘಾತ , ಆಂಬುಲೆನ್ಸ್ ಸೇವೆ , ಪೊಲೀಸ್ 112 ಸೇವೆ , ಕಳವು , ಆರೋಗ್ಯ ಸೇವೆ , ಸಂಚಾರಿ ನಿಯಮ ಉಲ್ಲಂಘನೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್ ಉಪಯೋಗಿಸಬಹುದು. ಇಂತಹ ರಸ್ತೆ ಅಪಘಾತ ಸೇರಿ ಮತ್ತಿತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಮೂಲಕ ಜೀವವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದರೂ ಅಗತ್ಯ ನೆರವು ದೊರೆಯದೆ ಗಾಯಾಳುಗಳು ಸಾವನ್ನಪ್ಪಿರುವ ಎಷ್ಟೋ ನಿದರ್ಶನಗಳಿವೆ . ಸಂದರ್ಭಗಳಲ್ಲಿ ಗಾಯಾಳುಗಳಿಗೆ ಸಕಾಲದಲ್ಲಿ ಆಂಬುಲೆನ್ಸ್ ಸೇವೆ , ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ತುರ್ತು ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯುವ ಮೂಲಕ ಜೀವನ್ಮರಣದ ನಡುವೆ ಹೋರಾಡುತ್ತಿರುವವರಿಗೆ ಮರು ಜೀವ ನೀಡಲು ಸಾಧ್ಯ ಮಾಡಬಹುದು . ಆದರೆ ಇಂತಹ ಮಹತ್ವದ ಯೋಜನೆ ಹಳ್ಳ ಹಿಡಿದಿದೆ. ತುಮಕೂರು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಇಂದು ಈ ಎಮರ್ಜೆನ್ಸಿ ಕಾಲ್ಸ್ ಬಾಕ್ಸ್ ನಾ ರಿಯಾಲಿಟಿ ಚೆಕ್ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವುದಾಗಿ ತಿಳಿಸಿದರು.
ಎರಡು ವರ್ಷದಲ್ಲಿ 300 ಕರೆ
ಎಮರ್ಜೆನ್ಸಿ ಕಾಲ್ ಬಾಕ್ಸ್ ಬಳಸುವ ವಿಧಾನ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್ನಲ್ಲಿರುವ ಕೆಂಪು ಗುಂಡಿ ಒತ್ತಿ ಕರೆ ಮಾಡಬೇಕು . ತುರ್ತು ಸಹಾಯವಾಣಿಯಲ್ಲಿ ಕ್ಯಾಮರಾ ಅಳವಡಿಸಲಾಗಿದ್ದು , ಕೆಂಪು ಗುಂಡಿ ಒತ್ತಿದ ಕೂಡಲೇ ಸ್ಮಾರ್ಟ್ ಸಿಟಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ಗೆ ವೀಡಿಯೋ ಕರೆ ಬರುತ್ತದೆ . ನಂತರ ಕಮ್ಯಾಂಡ್ ಸೆಂಟರ್ ಆಪರೇಟರ್ಗಳು ಸ್ವೀಕೃತ ಕರೆ ಆಧರಿಸಿ ನಕಲಿ ಕರೆಯೋ ಅಥವಾ ಅಸಲೀ ಕರೆಯೋ ಎಂದು ತಿಳಿದು ಅಗತ್ಯ ಸೇವೆ ನೀಡಲಿದ್ದಾರೆ. ತುಮಕೂರು ನಗರದಲ್ಲಿ 2020 ರಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್ ಅಳವಡಿಸಲಾಗಿದ್ದರೂ ಈವರೆಗೂ 300 ಕರೆ ಮಾತ್ರ ಸ್ವೀಕರಿಸಿರುವುದು ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡಿದೆ . ದಿನಪೂರ್ತಿ ಕಾರ್ಯನಿರ್ವಹಿಸುವ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ನಲ್ಲಿ ಮಹಾನಗರ ಪಾಲಿಕೆ , ಪೊಲೀಸ್ ಇಲಾಖೆ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ನ 38 ಸಿಬ್ಬಂದಿ 3 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ .
ಬಹಳಷ್ಟು ಜನರಿಗೆ ಎಮರ್ಜೆನ್ಸಿ ಕಾಲ್ ಬಾಕ್ಸ್ ಬಳಕೆ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿಯೇ ಇಲ್ಲದಿರುವುದು ಯೋಜನೆ ಹಳ್ಳಹಿಡಿಯಲು ಕಾರಣವಾಗಿದೆ . ನಗರ ವ್ಯಾಪ್ತಿಯ ದೇವರಾಯಪಟ್ಟಣ , ಸಿದ್ದಗಂಗಾ ಮಠ ಮುಂಭಾಗದ ಗೇಟ್ , ಸಿದ್ಧಗಂಗಾ ಮಠ ಹಿಂಭಾಗದ ಗೇಟ್ , ಗೋಕುಲ್ ಬಡಾವಣೆ , ಹನುಮಂತಪುರ , ಯಲ್ಲಾಪುರ , ಎಚ್.ಎಂ.ಎಸ್ . ಸಾಲೆ , ದಿಟ್ಟೂರು , ರಾಣಿ ಚೆನ್ನಮ್ಮ ವೃತ್ತ , ಕಾರ್ತಿಕ್ ಬಾರ್ , ಸಂಕ್ರಾಂತಿ ಸ್ಟೋರ್ , ಎಸ್ಎಸ್ ಐಟಿ ಕಾಲೇಜು , ಮರಳೂರು ದಿಣ್ಣಿ , ಬನಶಂಕರಿ , ಮಾರುತಿ ನಗರ ಕಮಾನು , ಜಿಮ್ ವೃತ್ತ , ಉಪ್ಪಾರಹಳ್ಳಿ ಆಟೋನಿಲ್ದಾಣ , ನಮ್ಮೂರ ಆಹಾರ , ದೋಬಿ ಘಾಟ್ , ಹೊರಪೇಟೆ ವೃತ್ತ , ಕೋತಿ ತೋಪು , ಅಮಾನಿಕೆರೆ ಪಾರ್ಕ್ , ರಂಗಾಪುರ ಸೈವಾಕ್ , ಬಾಂಬೆ ಬಿಲ್ಡಿಂಗ್ , ಕುರಿಪಾಳ್ಯ ವೃತ್ತ , ಕೆಸರಮಡು , ಶೆಟ್ಟಿಹಳ್ಳಿ , ಗೆದ್ದಲಹಳ್ಳಿ , ಕ್ಯಾತಸಂದ್ರ , ಬಡವಾಡಿ , ಶಿವಕುಮಾರ ಸ್ವಾಮಿ ವೃತ್ತ , ಭದ್ರಮ್ಮ ವೃತ್ತ , ಕಾಲೆಕ್ಸ್ ವೃತ್ತ , ಗುಬ್ಬಿ ಗೇಟ್ , ಕೋಡಿ ವೃತ್ತದ ಬಳಿ ತಲಾ ಒಂದು ಹಾಗೂ ದಾನಾ ಪ್ಯಾಲೇಸ್ , ಶಿರಾ ಗೇಟ್ ಪ್ರದೇಶದಲ್ಲಿ ತಲಾ 2 ಸೇರಿ 41 ಕಡೆ ಎಮರ್ಜೆನ್ಸಿ ಕಾಲ್ ಬಾಕ್ಸ್ ಲಭ್ಯವಿದೆ. ಈ ಯೋಜನೆಯ ಲಾಭವನ್ನು ಈಗಲಾದ್ರೂ ಜನರು ಪಡೆದುಕೊಳ್ಳಬೇಕಾಗಿದೆ.