
ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜು.10): ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಪಾರದರ್ಶಕ ಮತ್ತು ಸಮಯ ಉಳಿತಾಯದ ಉದ್ದೇಶದಿಂದ ತಂದ ಈ ಯೋಜನೆ ಈಗ ತಾಂತ್ರಿಕ ದೋಷಗಳ ಗೂಡಾಗಿದೆ. ಸಾರ್ವಜನಿಕರು ಕೆಲಸ ಕಾರ್ಯ ಬಿಟ್ಟು ಕಚೇರಿಗಳ ಮುಂದೆ ದಿನಗಟ್ಟಲೆ ಕಾಯುವಂತಾಗಿದೆ. ಈ ಕುರಿತು ಒಂದು ವರದಿ ನೋಡಿ.
ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಜಾರಿಗೊಳಿಸಲಾಗಿರುವ ಆಧಾರ್ ಆಧಾರಿತ ಇ-ಸೈನ್ ಮತ್ತು ಡಿಜಿಟಲ್ ಸಹಿಯ ಕಾಗದರಹಿತ ನೋಂದಣಿ ವ್ಯವಸ್ಥೆ ಸಾರ್ವಜನಿಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಆಸ್ತಿ ಮಾರಾಟ-ಖರೀದಿ ನೋಂದಣಿ, ಸೇಲ್ ಡೀಡ್, ಮಾರ್ಟ್ಗೇಜ್ ಸೇರಿದಂತೆ ಪ್ರಮುಖ ನೊಂದಣಿ ಪ್ರಕ್ರಿಯೆಗಳಿಗೆ ಕಾವೇರಿ 2.0 ಪೋರ್ಟಲ್ ಬಳಸಲಾಗುತ್ತಿದ್ದು, ಇದು ಪದೇ ಪದೇ ಕೈಕೊಡುತ್ತಿದೆ. ಈ ಮೊದಲು ಕೇವಲ ಒಂದು ಗಂಟೆಯಲ್ಲಿ ಮುಗಿಯುತ್ತಿದ್ದ ನೋಂದಣಿ ಕಾರ್ಯಕ್ಕೆ ಈಗ ಮೂರ್ನಾಲ್ಕು ಗಂಟೆಗಳು, ಕೆಲವೊಮ್ಮೆ ಮೂರ್ನಾಲ್ಕು ದಿನಗಳ ಕಾಲ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಮುಖ್ಯವಾಗಿ ನೋಂದಣಿ ಶುಲ್ಕ ಪಾವತಿಸಲು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಲು ಸಕಾಲಕ್ಕೆ ಒಟಿಪಿ (OTP) ಬರುವುದೇ ಇಲ್ಲ. ಇದರ ಜೊತೆಗೆ ಸರ್ವರ್ ಡೌನ್ ಸಮಸ್ಯೆ ಸಾಮಾನ್ಯವಾಗಿದೆ. ಇನ್ನು ವಯಸ್ಸಾದವರ ಪಾಡಂತು ಹೇಳತೀರದಾಗಿದೆ. ನೊಂದಣಿ ಪ್ರಕ್ರಯೆಗೆ ಮೂರು ಬಾರಿ ತಂಬ್ (Thumb) ನೀಡಬೇಕಾದ ನಿಯಮವಿದ್ದು, ಬಯೋಮೆಟ್ರಿಕ್ ಸರಿಯಾಗಿ ಮ್ಯಾಚ್ ಆಗದೆ ವೃದ್ಧರು ಇಡೀ ದಿನ ಕಚೇರಿಯಲ್ಲೇ ಕೂರುವಂತಾಗಿದೆ. ಸರ್ಕಾರ ಪರಿಸರಸ್ನೇಹಿ ಅಂತ ಹೇಳಿ ಈ ಕಾಗದರಹಿತ ವ್ಯವಸ್ಥೆ ತಂದಿದ್ದೇನೋ ಸರಿ.
ಆದರೆ ತಾಂತ್ರಿಕವಾಗಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕಾವೇರಿ 2.0 ಸರ್ವರ್ ಯಾವಾಗಲೂ ಡೌನ್ ಇರುತ್ತೆ, ಒಟಿಪಿ ಬರೋದೇ ಇಲ್ಲ. ದಿನವಿಡೀ ಖರೀದಿದಾರರು, ಮಾರಾಟಗಾರರು ಕೆಲಸ ಬಿಟ್ಟು ಇಲ್ಲೇ ಕಾಯ್ಬೇಕು. ಕಾಗದ ಇದ್ದಾಗಲೇ ಕೆಲಸ ಬೇಗ ಆಗ್ತಿತ್ತು ಎನ್ನುತ್ತಾರೆ. ಇಷ್ಟೆಲ್ಲಾ ತಾಂತ್ರಿಕ ಅಡಚಣೆಗಳಾಗಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದರೂ, ನೋಂದಣಿ ಅಧಿಕಾರಿಗಳ ಸಮರ್ಥನೆ ಮಾತ್ರ ಬೇರೆಯದೇ ಆಗಿದೆ. ಈ ಹೊಸ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.
ಈ ಹಿಂದಿನ ನೋಂದಣಿ ಅಂಕಿಅಂಶಗಳಿಗೂ ಮತ್ತು ಇಂದಿನ ಅಂಕಿಅಂಶಗಳಿಗೂ ಯಾವುದೇ ವ್ಯತ್ಯಾಸವಾಗಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ, ಪರಿಸರಸ್ನೇಹಿ ಹಾಗು ಪಾರದರ್ಶಕತೆಯ ಹೆಸರಿನಲ್ಲಿ ತಂದ ತಂತ್ರಜ್ಞಾನ ಸರಿಯಾದ ಸಿದ್ಧತೆ ಇಲ್ಲದ ಕಾರಣ ಜನರಿಗೆ ಪಜೀತಿಯಾಗಿ ಪರಿಣಮಿಸಿದೆ. ಅಧಿಕಾರಿಗಳು ಕೇವಲ ಅಂಕಿಅಂಶಗಳ ಸಮರ್ಥನೆ ಮಾಡಿಕೊಳ್ಳುವುದನ್ನು ತಾಂತ್ರಿಕ ತೊಂದರೆಗಳ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕಿದೆ.