
ಬೆಂಗಳೂರು (ಜು.10): ಸಾಲದ ಸುಳಿಗೆ ಸಿಲುಕಿ ಸಾಲಗಾರರ ಕಿರುಕುಳ ತಾಳಲಾರದೆ ಆಟೋ ಚಾಲಕರೊಬ್ಬರು ತಮ್ಮ ಜೀವನದ ಪಯಣವನ್ನು ಅಕಾಲಿಕವಾಗಿ ಅಂತ್ಯಗೊಳಿಸಿರುವ ಹೃದಯವಿದ್ರಾವಕ ಘಟನೆ ನಗರದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಮಾಲ್ ಉದ್ದೀನ್ ಎಂಬುವವರೇ ಸಾಲದ ಬಾಧೆಯಿಂದಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡ ದುರ್ದೈವಿ. ಸಾಯುವ ಮುನ್ನ ಅವರು ತಮ್ಮ ಆಟೋದಲ್ಲಿ ಕುಳಿತು ಮಾಡಿಕೊಂಡಿರುವ ಸೆಲ್ಫಿ ವಿಡಿಯೋ ಈಗ ಸಾಲಗಾರರ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ.
ಸುಮಾರು ಒಂದು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಜಮಾಲ್ ಉದ್ದೀನ್ ಅವರಿಗೆ ಆರಂಭದಲ್ಲಿ ಸಾಲ ನೀಡಿದ್ದ ವ್ಯಕ್ತಿ, ಬಡ್ಡಿ ಬೇಡ ಕೇವಲ ವಾರಕ್ಕೆ 10 ಸಾವಿರದಂತೆ ಅಸಲು ಮರಳಿಸಿದರೆ ಸಾಕು ಎಂದು ನಂಬಿಸಿದ್ದ. ಆದರೆ, ಕಾಲಕ್ರಮೇಣ ಸಾಲಗಾರನ ಅಸಲಿ ಮುಖವಾಡ ಕಳಚಿದೆ. 20 ಸಾವಿರ ರೂಪಾಯಿಗೆ 4 ಸಾವಿರದಂತೆ ಭಾರಿ ಬಡ್ಡಿ ನೀಡುವಂತೆ ಒತ್ತಡ ಹೇರಲಾರಂಭಿಸಿದ್ದಾನೆ. ನಂತರ ಹಂತ ಹಂತವಾಗಿ 5 ಸಾವಿರ ಹಾಗೂ 10 ಸಾವಿರದಷ್ಟು ಬಡ್ಡಿ ನೀಡುವಂತೆ ಟಾರ್ಚರ್ ಶುರು ಮಾಡಿದ್ದಾನೆ ಎಂದು ಮೃತರು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.
'ಹಣ ನೀಡದಿದ್ದರೆ ನಿನ್ನ ಆಟೋ ಮತ್ತು ನಿನ್ನ ಮಗನ ಆಟೋವನ್ನು ಸೀಜ್ ಮಾಡಿಕೊಂಡು ಹೋಗುತ್ತೇನೆ. ಅಷ್ಟೇ ಅಲ್ಲದೆ ನಿನ್ನ ಮನೆಯವರಿಗೂ ತೊಂದರೆ ಕೊಡುತ್ತೇನೆ' ಎಂದು ಸಾಲಗಾರ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಬ್ಯುಸಿನೆಸ್ ಡಲ್ ಆಗಿದ್ದ ಕಾರಣ ಹಣ ಕಟ್ಟಲು ಜಮಾಲ್ ಅವರು ಕಷ್ಟಪಡುತ್ತಿದ್ದರು. 'ದಿನಕ್ಕೆ ಸಾವಿರ ರೂಪಾಯಿ ದುಡಿಯುತ್ತಿದ್ದೆ, ಅದರಲ್ಲಿ ಇಷ್ಟು ದೊಡ್ಡ ಮಟ್ಟದ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ' ಎಂದು ಅವರು ವಿಡಿಯೋದಲ್ಲಿ ನೋವಿನಿಂದ ನುಡಿದಿದ್ದಾರೆ. 50 ಸಾವಿರಕ್ಕೆ ಶೇ. 20ರಷ್ಟು ಬಡ್ಡಿ ಕೇಳುವ ಮೂಲಕ ಸಾಲಗಾರ ಜಮಾಲ್ ಅವರ ಬದುಕನ್ನು ಹೈರಾಣಾಗಿಸಿದ್ದನು.
ಸಾಲಗಾರನ ನಿರಂತರ ಕಿರುಕುಳ ಹಾಗೂ ಅವಮಾನದಿಂದ ಮನನೊಂದ ಜಮಾಲ್ ಉದ್ದೀನ್, ತಮ್ಮ ಆಟೋದಲ್ಲಿಯೇ ವಿಷಕಾರಿ ಪದಾರ್ಥ ಸೇವಿಸಿ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಬಾಗಲೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೀಟರ್ ಬಡ್ಡಿ ಆಸೆಗೆ ಬಡವರ ಬದುಕು ಬೀದಿಗೆ ಬರುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಕನ್ನಡಿ ಹಿಡಿದಿದೆ.