ಅನಾಥ ಕಂದಮ್ಮಗಳಿಗೆ ಆಧಾರ್ ಕೂಡ ಸಿಗದೇ ಸಂಕಷ್ಟ: ಚಾಮರಾಜನಗರದಲ್ಲಿ ಕರುಣಾಜನಕ ಘಟನೆ

Published : Apr 16, 2026, 06:03 PM IST
orphan children india

ಸಾರಾಂಶ

ಚಾಮರಾಜನಗರದ ಮೂಡಲ ಅಗ್ರಹಾರದ ಮಹದೇವ ಕುಡಿತದ ದಾಸನಾಗಿದ್ದ. ಎರಡು ತಿಂಗಳ ಹಿಂದೆ ಕುಡಿದ ಅಮಲಿನಲ್ಲಿ ತನ್ನ ಪತ್ನಿ ಸುಮತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದ. ಸುಟ್ಟಗಾಯಗಳಿಂದ ಸುಮತಿ ಮೃತಪಟ್ಟಿದ್ದಳು.

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಏ.16): ಅಮ್ಮ ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ಅಪ್ಪ ಜೈಲು ಸೇರಿದ್ದಾನೆ. ಈ ದಂಪತಿಯ ಹೆಣ್ಣು ಮಕ್ಕಳಿಬ್ಬರು ಈಗ ಅನಾಥರಾಗಿದ್ದಾರೆ. ಈ ಅನಾಥ ಮಕ್ಕಳಿಗೆ ಕನಿಷ್ಟ ಆಧಾರ್ ಕಾರ್ಡ್ ಕೂಡ ಸಿಗದೆ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಚಾಮರಾಜನಗರ ತಾಲೋಕಿನ ಮೂಡಲ ಅಗ್ರಹಾರದ ಮಹದೇವ ಕುಡಿತದ ದಾಸನಾಗಿದ್ದ. ಎರಡು ತಿಂಗಳ ಹಿಂದೆ ಕುಡಿದ ಅಮಲಿನಲ್ಲಿ ತನ್ನ ಪತ್ನಿ ಸುಮತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದ. ಸುಟ್ಟಗಾಯಗಳಿಂದ ಸುಮತಿ ಮೃತಪಟ್ಟಿದ್ದಳು.

ಪತಿ ಜೈಲು ಸೇರಿದ್ದು ಈ ದಂಪತಿಗೆ ಇದ್ದ 6 ವರ್ಷ ಹಾಗು ಒಂದುವರೆ ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದೀಗ ತಂದೆ ತಾಯಿ ಇಲ್ಲದೆ ತಬ್ಬಲಿಗಳಾಗಿದ್ದಾರೆ. ವಯಸ್ಸಾದ ಅಜ್ಜಿ ಅಂಕಮ್ಮನಿಗೆ ಈ ಎಳೆಯ ಮಕ್ಕಳನ್ನು ಸಾಕಬೇಕಾದ ಅನಿವಾರ್ಯತೆ ಎದುರಾಗಿದೆ. ತನ್ನ ಕಿವಿಯೋಲೆ, ಮೂಗೂತಿ ಅಡವಿಟ್ಟು ಸೊಸೆಯ ಅಂತ್ಯಸಂಸ್ಕಾರ ಹಾಗು ಹನ್ನೆರಡನೇ ದಿನದ ಕಾರ್ಯ ಮಾಡಿದ ಅಂಕಮ್ಮ ಈಗ ಮೊಮ್ಮಕ್ಕಳಿಬ್ಬರನ್ನು ಸಾಕಲು ಹೆಣಗಾಡುತ್ತಿದ್ದಾರೆ. . ತನಗೆ ಬರುವ 800 ರೂಪಾಯಿ ವಿಧವಾ ವೇತನದಲ್ಲೇ ಈ ಮಕ್ಕಳನ್ನು ಪೋಷಿಸಬೇಕಿದೆ.

ಈ ಮಕ್ಕಳ ಹೆಸರನ್ನು ಪಡಿತರ ಚೀಟಿಗೆ ಸೇರಿಸಲು ಈ ಮಕ್ಕಳ ಆಧಾರ್ ಕಾರ್ಡ್ ಬೇಕು. ಆದರೆ ಆಧಾರ್ ಕಾರ್ಡ್ ಮಾಡಿಸಲು ಕಚೇರಿಯಿಂದ ಕಚೇರಿ ಅಲೆದು ಸಾಕಾಗಿ ಹೋಗಿದ್ದಾರೆ. ಆಧಾರ್ ಕಾರ್ಡ್ ಮಾಡಿಸಲು ಸಹಾಯ ಮಾಡುವಂತೆ ಸಂತೇಮರಹಳ್ಳಿ ಪೊಲೀಸ್ ಠಾಣೆಗೆ ಹೋದರೆ ಅಲ್ಲಿನ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಈ ಮಕ್ಕಳನ್ನು ಯಾವುದಾದರೂ ಅನಾಥ ಶ್ರಮಕ್ಕೆ ಸೇರಿಸಿ ಕೂಲಿ ಮಾಡಿಕೊಂಡು ಇರು ಹೋಗು ಎಂಬ ಪುಕ್ಕಟೆ ಸಲಹೆ ಕೊಟ್ಟಿದ್ದಾರಂತೆ. ಈ ಮಾತುಗಳನ್ನು ಕೇಳುತ್ತಿದ್ದಂತೆ ಅಂಕಮ್ಮನ ಕರುಳು ಚುರುಕ್ ಎಂದಿದ್ಧು ಅಲ್ಲಿಂದ ಗಳಗಳನೆ ಅತ್ತುಕೊಂಡು ವಾಪಸ್ ಬಂದಿದ್ದಾರೆ..

ನಿತ್ಯ ಪರದಾಟ

ಒಂದುವರೆ ವರ್ಷದ ಹೆಣ್ಣು ಮಗುವಂತು ಅಂಕಮ್ಮನ ಕೈ ಬಿಡುತ್ತಿಲ್ಲ. ಎಳೆಯ ವಯಸ್ಸಿನ ಮಕ್ಕಳನ್ನು ನೋಡಿಕೊಳ್ಳಬೇಕಾಗಿರೋದ್ರಿಂದ ಅಂಕಮ್ಮ ಕೂಲಿ ಕೆಲಸಕ್ಕೂ ಹೋಗಲಾಗುತ್ತಿಲ್ಲ. ಬೇರೆ ಆದಾಯದ ಮೂಲಗಳಿಲ್ಲದೆ ಈ ಎಳೆವಯಸ್ಸಿನ ಹೆಣ್ಣು ಮಕ್ಕಳ ಪಾಲನೆ ಪೋಷಣೆಗೆ ನಿತ್ಯ ಪರದಾಡುವಂತಾಗಿದೆ. ಅಧಿಕಾರಿಗಳು ಇದನ್ನೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಈ ಹೆಣ್ಞು ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟಲ್ಲಿ ಪಡಿತರ ಚೀಟಿ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ದಾನಿಗಳು ನೆರವಿನ ಹಸ್ತ ಚಾಚಿದರೆ ಈ ಕಂದಮ್ಮಗಳ ಮುಂದಿನ ಭವಿಷ್ಯಕ್ಕೆ ನೆರವಾಗಲಿದೆ.

PREV
Read more Articles on
click me!

Recommended Stories

ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ: ಮಾಳವಿಕಾ ಅವಿನಾಶ್
ಕಾರವಾರ: ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ, ಚಾಲಕ ನಾಪತ್ತೆ