ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ: ಮಾಳವಿಕಾ ಅವಿನಾಶ್

Published : Apr 16, 2026, 05:52 PM IST
malavika avinash

ಸಾರಾಂಶ

ಮುಂದಿನ ಲೋಕಸಭೆ ಚುನಾವಣೆಯೊಳಗೆ ಜನಗಣತಿ ಮುಗಿಯುವುದು ಕಷ್ಟವಾಗುತ್ತಿರುವ ಕಾರಣ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ ಎಂದು ಮಾಳವಿಕಾ ಅವಿನಾಶ್ ತಿಳಿಸಿದರು.

ಮೈಸೂರು (ಏ.16): ಮುಂದಿನ ಲೋಕಸಭೆ ಚುನಾವಣೆಯೊಳಗೆ ಜನಗಣತಿ ಮುಗಿಯುವುದು ಕಷ್ಟವಾಗುತ್ತಿರುವ ಕಾರಣ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತದಲ್ಲಿ ಮಹಿಳೆಯರ ಸಬಲೀಕರಣದ ಜತೆಗೆ ದೇಶದ ಅಭಿವೃದ್ಧಿಯಲ್ಲೂ ಮಹಿಳೆಯರು ನಾಯಕತ್ವ ವಹಿಸಬೇಕು ಎಂಬ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಹಿಳೆಯರಿಗಾಗಿ ಶೇ.33ರಷ್ಟು ಮೀಸಲಾತಿ ನೀಡುತ್ತಿದೆ ಎಂದರು.

2047ರ ವಿಕಸಿತ ಭಾರತದ ಕಲ್ಪನೆ ದೊಡ್ಡದು. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಮಹಿಳೆಯರು ಸಬಲೀಕರಣಗೊಳ್ಳಬೇಕು. ಇದಕ್ಕಾಗಿ ಹಲವಾರು ಕಾರ್ಯಕ್ರಮ ಜಾರಿಗೊಳಿಸಲಾಗಿದೆ. 2027ರಲ್ಲೇ ಜನಗಣತಿ ಮಾಡಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಜಗಣಗತಿಯನ್ನು 2027ಕ್ಕೆ ಮಾಡಲಾಗುತ್ತಿದೆ. 2029ರ ಲೋಕಸಭೆ ಚುನಾವಣೆಯೊಳಗೆ ಜನಗಣತಿ ಮುಗಿಯುವುದು ಕಷ್ಟವಾದ್ದರಿಂದ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ ಎಂದರು.

ಈಗಾಗಲೇ ಲೋಕಸಭೆಯಲ್ಲಿ 543 ಸ್ಥಾನಗಳಿವೆ. ಅದನ್ನು ಹೆಚ್ಚಿಸಿ 816ಕ್ಕೆ ಹೆಚ್ಚಿಸಲಾಗುತ್ತಿದೆ. ಇದರಿಂದ ಪುರುಷರಿಗೂ ತಮ್ಮ ಸ್ಥಾನ ತಪ್ಪಿ ಹೋಗುವ ಭಯವೂ ಇರುವುದಿಲ್ಲ. ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಥಾನಗಳನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಇದು ಸಂಭ್ರಮದ ಕ್ಷಣ. ಭಾರತದ ಮಹಿಳೆಯರಲ್ಲದೆ ವಿಶ್ವದ ಮಹಿಳೆಯರು ಸಂಭ್ರಮಿಸುವ ಕ್ಷಣ ಎಂದರು. 21ನೇ ಶತಮಾನದ ಪ್ರಮುಖ ನಿರ್ಣಯಗಳಲ್ಲಿ ಈ ನಿರ್ಣಯವೂ ಒಂದು. ವಿಶ್ವದ ಅನೇಕ ಮುಂದುವರೆದ ರಾಷ್ಟ್ರಗಳಲ್ಲಿ ಈ ರೀತಿಯ ಮೀಸಲಾತಿ ಇಲ್ಲವೆ ಇಲ್ಲ.

ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ರಾಜಕಾರಣ ಮಾಡಬಾರದು. ರಾಜಕೀಯವಾಗಿ ಭಿನ್ನಾಭಿಪ್ರಾಯ ಏನೇ ಇದ್ದರೂ ಮಹಿಳಾ ಮೀಸಲಾತಿ ವಿಚಾರದಲ್ಲಿ ಎಲ್ಲರೂ ಒಕ್ಕೂರಲಿನಿಂದ ಈ ಕಾಯ್ದೆಯನ್ನು ಸ್ವಾಗತಿಸಬೇಕು ಎಂದರು. ಕಾಂಗ್ರೆಸ್‌ ನಲ್ಲಿ ಇರುವಂತೆ ಬಿಜೆಪಿಯಲ್ಲಿ ವಂಶಪಾರಂಪರ್ಯ ಆಡಳಿತವಿಲ್ಲ. ಕಾಂಗ್ರೆಸ್‌ ನಲ್ಲಿ ಒಂದೇ ಕುಟುಂಬ ಸಬಲೀಕರಣವಾಗುತ್ತಿದೆ. ಬಿಜೆಪಿಯಲ್ಲಿ ಹಾಗೆ ಆಗಿಲ್ಲ. ಇಲ್ಲಿ ತಳಮಟ್ಟದ ಕಾರ್ಯಕರ್ತರೂ ಉನ್ನತ ಹುದ್ದೇಗೇರುತ್ತಾರೆ ಎಂದರು.

ಸಾಮಾನ್ಯ ವಿಷಯವಲ್ಲ

77 ವರ್ಷಗಳ ಕಾಲ ಮಹಿಳೆಯರು ಕಾದಂತಹ ಕ್ಷಣ ಇದಾಗಿದೆ. ರಾಜಕಾರಣದಲ್ಲಿ ಅವಕಾಶ ಗಳಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಹೀಗಾಗಿ ಒಂದು ವಾರಗಳ ಕಾಲ ಜನಜಾಗೃತಿ ದೃಷ್ಟಿಯಲ್ಲಿ ರಾಜ್ಯದ 15 ಭಾಗಳಲ್ಲಿ ನಾರಿಶಕ್ತಿ ಸಮ್ಮೇಳನ, ನಾರಿಶಕ್ತಿ ಪಾದಯಾತ್ರೆ, ಬೈಕ್ ಮತ್ತು ಸ್ಕೂಟಿ ರ್ಯಾಲಲಿ ನಡೆಯುತ್ತಿದೆ. ಜತೆಗೆ ಲೇಖನಗಳ, ಮಾನವ ಸರಪಳಿ, ಸಾಮಾಜಿಕ ಮಾಧ್ಯಮದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಈ ಸಂಭ್ರಮದ ಕ್ಷಣದಲ್ಲಿ ಮಹಿಳೆರು ಭಾಗವಹಿಸಬೇಕೆಂಬ ದೃಷ್ಟಿಯಿಂದ ಹಾಗೂ ತಮ್ಮ ಅನುಭವವನ್ನು ತಿಳಿಸಬೇಕೆಂಬ ದೃಷ್ಟಿಯಿಂದ ಮೊ. 96671 73333 ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಜತೆಗೆ ಸಹಿ ಸಂಗ್ರಹ ಅಭಿಯಾನವನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಕಾರವಾರ: ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ, ಚಾಲಕ ನಾಪತ್ತೆ
ಯೋಗೇಶ ಗೌಡ ಹತ್ಯೆ: ಕುಲಕರ್ಣಿಗೆ ಪರಮಾಪ್ತನೇ ತಿರುಗಿ ಬಿದ್ದ! ಮಾತು ಬದಲಿಸಿ ಕಾಂಗ್ರೆಸ್ ಸೇರಿದ್ದ ಯೋಗೇಶ್ ಪತ್ನಿ!