ಹಾಸನ: ರಾಯರ ದರ್ಶನಕ್ಕೂ ಮುನ್ನವೇ ಮಸಣ ಸೇರಿದ 8 ಮಂದಿ ಸಂಬಂಧಿಕರು, ಸಾವನ್ನಪ್ಪಿದ ಒಂದೊಂದು ಕುಟುಂಬದ್ದು ಒಂದೊಂದು ಕಥೆ!

Published : Apr 16, 2026, 04:52 PM IST
Mantralaya Road Accident

ಸಾರಾಂಶ

ಮಂತ್ರಾಲಯದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ರಾಯರ ದರ್ಶನಕ್ಕೆ ತೆರಳುತ್ತಿದ್ದ ಹಾಸನ ಮತ್ತು ಚಿಕ್ಕಮಗಳೂರು ಮೂಲದ ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟಿದ್ದಾರೆ. ಗೂಡ್ಸ್ ವಾಹನ ಮತ್ತು ಟ್ಯಾಂಕರ್ ನಡುವಿನ ಈ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಾಯಗೊಂಡಿದ್ದು, ಈ ದುರ್ಘಟನೆ ಗ್ರಾಮಗಳಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.

ರಾಯಚೂರು/ಹಾಸನ: ಮಂತ್ರಾಲಯದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಎಂಟು ಮಂದಿ ಮೃತಪಟ್ಟಿರುವ ದುರ್ಘಟನೆ ಕುಟುಂಬಗಳನ್ನೇ ನಡುಗಿಸಿದೆ. ರಾಯರ ದರ್ಶನಕ್ಕಾಗಿ ಹೊರಟಿದ್ದ ಒಂದೇ ಕುಟುಂಬದ ಸದಸ್ಯರು ಮಸಣ ಸೇರಿರುವುದು ಹೃದಯವಿದ್ರಾವಕ ಘಟನೆ ಇಡೀ ಜಿಲ್ಲೆಯ ಜನರನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಒಬ್ಬೊಬ್ಬರದು ಒದೊಂದು ಕಥೆ ಹೇಳುತ್ತಿದೆ.

ಗುರುವಾರ ಬೆಳಗ್ಗೆ ಮಂತ್ರಾಲಯದತ್ತ ಸಾಗುತ್ತಿದ್ದ KA-46-9745 ಸಂಖ್ಯೆಯ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನ ಮತ್ತು KA-32-AC-1117 ಸಂಖ್ಯೆಯ ಟ್ಯಾಂಕರ್ ನಡುವೆ ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಈ ಭೀಕರ ಅಪಘಾತ ಮಂತ್ರಾಲಯ ಮಠದಿಂದ ಸುಮಾರು 7 ಕಿ.ಮೀ ದೂರದಲ್ಲಿ ಸಂಭವಿಸಿದ್ದು, ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಈ ಗೂಡ್ಸ್ ವಾಹನದಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಮೂಲದ ಒಟ್ಟು 21 ಜನ ಪ್ರಯಾಣಿಸುತ್ತಿದ್ದು, ಅದರಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಕರ್ನೂಲ್ ಜಿಲ್ಲಾ ಆಸ್ಪತ್ರೆ ಹಾಗೂ ಏಮಿಗನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಒಂದೇ ಕುಟುಂಬದ ದುರಂತ

ಮೃತರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶೆಟ್ಟಿಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗ್ರಾಮಸ್ಥರಾಗಿದ್ದಾರೆ. ಸಂಬಂಧಿಕರೆಲ್ಲರೂ ಒಟ್ಟಾಗಿ ಮಂತ್ರಾಲಯ ಪ್ರವಾಸ ಕೈಗೊಂಡಿದ್ದರು. ಆದರೆ ಈ ಪ್ರಯಾಣವೇ ಅವರ ಜೀವನದ ಕೊನೆಯ ಪ್ರಯಾಣವಾಗಿರುವುದು ದೊಡ್ಡ ದುರಂತ

ಮೃತರ ಪಟ್ಟಿ:

ಕುಮಾರ್ (51)

ಜಯಮ್ಮ (60) – ಕುಮಾರ್ ಅವರ ಅತ್ತೆ

ಸುನೀಲ್ (27) – ಕುಮಾರ್ ಪುತ್ರ

ವೀಣಾ (25) – ಕುಮಾರ್ ಪುತ್ರಿ

ನಿಶಿತಾ (3) – ವೀಣಾ ಮಗಳು

ಲೋಲಾಕ್ಷಿ (38) – ಕುಮಾರ್ ತಮ್ಮನ ಪತ್ನಿ

ಪುಟ್ಟಮ್ಮ (60) – ತರೀಕೆರೆ ತಾಲೂಕು ಉಡೇವಾ ಗ್ರಾಮ

ಮೀನಾಕ್ಷಮ್ಮ (54) – ತರೀಕೆರೆ ತಾಲೂಕು ಉಡೇವಾ ಗ್ರಾಮ

ಕನಸು ಕಂಡಿದ್ದ ಜಯಮ್ಮ… ಕನಸೇ ಉಳಿಯಿತು

ಈ ದುರಂತದಲ್ಲಿ ಮೃತಪಟ್ಟ ಜಯಮ್ಮ ಅವರ ಕಥೆ ಎಲ್ಲರನ್ನೂ ಕಣ್ಣೀರಿಟ್ಟಿದೆ. 65ನೇ ವಯಸ್ಸಿನಲ್ಲಿ ಒಂದು ಮನೆ ಕಟ್ಟಬೇಕೆಂಬ ಕನಸು ಕಂಡಿದ್ದ ಅವರು, ಎಲ್ಲರೂ ಮನೆ ಕಟ್ಟಿಕೊಂಡು ಹೋಗಿದ್ದಾರೆ, ನಾವು ಕೂಡ ಕಟ್ಟೋಣ ಎಂದು ಕುಟುಂಬದವರೊಂದಿಗೆ ಹೇಳಿಕೊಂಡಿದ್ದರಂತೆ. ಧರ್ಮಸ್ಥಳ ಸಂಘದಿಂದ 3 ಲಕ್ಷ ರೂಪಾಯಿ ಸಾಲ ಪಡೆದು ಮನೆ ಕಟ್ಟುವ ಯೋಚನೆ ಮಾಡಿದ್ದ ಅವರು, ಕೂಲಿ ಕೆಲಸ ಮಾಡಿ ಸಾಲ ತೀರಿಸೋಣ ಎಂದು ನಿರ್ಧರಿಸಿದ್ದರು. ಮಂತ್ರಾಲಯದಿಂದ ಹಿಂದಿರುಗಿದ ಬಳಿಕ ಈ ಕುರಿತು ಚಿಂತನೆ ನಡೆಸಬೇಕೆಂದು ಕೊಂಡಿದ್ದರು, ಅದಕ್ಕೆ ಅವಕಾಶವೇ ಸಿಕ್ಕಿಲ್ಲ. ಮಂತ್ರಾಲಯಕ್ಕೆ ಹೊರಡುವ ಮುನ್ನ ರಾಯರಿಗೆ ಕಾಣಿಕೆ ಎಂದು ₹100 ಪಡೆದುಕೊಂಡು ಹೋಗಿದ್ದ ಜಯಮ್ಮ, ಬದುಕಿನ ಕೊನೆಯ ಪ್ರಯಾಣ ಮುಗಿಸಿರುವುದು ಅತ್ಯಂತ ದುಃಖಕರ ಸಂಗತಿ.

ಹೋಗಬೇಕಿತ್ತು… ಆದರೆ ಹಣ ಇರಲಿಲ್ಲ

ಕುಟುಂಬದ ಶೋಭಾ ಎಂಬವರು ಕೂಡ ಈ ಪ್ರವಾಸಕ್ಕೆ ಹೋಗಬೇಕಾಗಿತ್ತು. ಆದರೆ ಹಣದ ಅಭಾವದಿಂದ ಅವರು ಹೋಗಿರಲಿಲ್ಲ. ಹೋಗಿದ್ದರೆ ನನ್ನ ಸ್ಥಿತಿಯೂ ಇದೇ ಆಗುತ್ತಿತ್ತು ಎಂದು ಅತ್ತೆಯ ಮಾತು ನೆನೆದು ಕಣ್ಣೀರಿಟ್ಟಿದ್ದಾರೆ ಸೊಸೆ.

ಗಾಯಾಳುಗಳ ಸ್ಥಿತಿ ಗಂಭೀರ

ತರೀಕೆರೆ ತಾಲೂಕಿನ ಉಡೇವಾ ಗ್ರಾಮದಿಂದ ಒಟ್ಟು 9 ಜನ ತೆರಳಿದ್ದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಧಿಕಾರಿಗಳ ಭೇಟಿ, ಪ್ರಕರಣ ದಾಖಲು

ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರ್‌ಟಿಒ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿ ಘಟನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದರು.

ಈ ಸಂಬಂಧ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಮೃತದೇಹಗಳನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಏಮಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ಮೃತರ ಬಂಧುಗಳು ಸ್ಥಳಕ್ಕೆ ಆಗಮಿಸುತ್ತಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಗ್ರಾಮಗಳಲ್ಲಿ ನೀರವ ಮೌನ

ಒಂದೇ ಕುಟುಂಬದ ಹಲವು ಮಂದಿ ಪ್ರಾಣ ಕಳೆದುಕೊಂಡಿರುವುದು ಗ್ರಾಮಗಳಲ್ಲಿ ಬಾರೀ ನೋವು ತರಿಸಿದೆ. ಬದುಕಿನ ಕನಸುಗಳನ್ನು ಹೊತ್ತು ಹೊರಟವರು ಮರಣದ ಕದ ತಟ್ಟಿದ ಈ ಘಟನೆ, ರಸ್ತೆ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಚಿಂತನೆಗೆ ದಾರಿ ಮಾಡಿಕೊಟ್ಟಿದೆ.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ ಭೇಟಿ: ಪತಿಯನ್ನ ನೋಡಲು ನಟ ಧನ್ವೀರ್ ಜೊತೆ ಆಗಮಿಸಿದ ದರ್ಶನ್ ಪತ್ನಿ!
ಬೇಕಾಬಿಟ್ಟಿ ಕಸ ಸುರಿದ ಬ್ಲಿಂಕ್ ಇಟ್ (Blinkit) ಸಂಸ್ಥೆಗೆ ₹80,000 ದಂಡ ಹಾಕಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ!