ಹನೂರು ಶೂಟೌಟ್‌ನಲ್ಲಿ ಪರಾರಿಯಾಗಿದ್ದ 4ನೇ ಆರೋಪಿ ದಾಸ್ ಪ್ರತ್ಯಕ್ಷ; ಕೇಸಿಗೆ ಟ್ವಿಸ್ಟ್ ನೀಡಿದ ವಿಡಿಯೋ ಹೇಳಿಕೆ!

Sathish Kumar KH   | Kannada Prabha
Published : Aug 19, 2026, 08:04 AM IST
Hanur Shootout Case 4th Accused video

ಸಾರಾಂಶ

ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟೌಟ್‌ನಿಂದ ಪರಾರಿಯಾಗಿದ್ದ ಮಹಿಮಾದಾಸ್, ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಅರಣ್ಯ ಇಲಾಖೆಯವರು ಗುಂಡು ಹಾರಿಸಿದಾಗ ಭಯದಿಂದ ಓಡಿಹೋದೆ ಎಂದು ಹೇಳಿಕೊಂಡಿದ್ದು, ಪೊಲೀಸರ ರಕ್ಷಣೆ ಕೋರಿದ್ದಾನೆ. ಈ ಹೇಳಿಕೆಯು ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿದೆ.

ಚಾಮರಾಜನಗರ (ಆ.19): ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಆ.15ರಂದು ನಡೆದ ಶೂಟೌಟ್‌ ವೇಳೆ ಪರಾರಿಯಾಗಿ ಬದುಕುಳಿದ ಮರಿಯಮಂಗಲ ಗ್ರಾಮದ ಮಹಿಮಾದಾಸ್ ಈಗ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾನೆ.

ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಮಹಿಮಾದಾಸ್‌, ಶೂಟೌಟ್ ವೇಳೆ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದರ ಮಧ್ಯೆಯೇ ಆತ ಅಜ್ಞಾತಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾನೆ.

ಪೊಲೀಸರೇ, ನನ್ನನ್ನು ನೀವೇ ನೋಡಿಕೊಳ್ಳಬೇಕು

‘ನಾನು ಬೆಟ್ಟದಿಂದ ಕೆಳಗಿಳಿದು ಬಂದಿದ್ದೆ. ಆಗ ಅರಣ್ಯ ಇಲಾಖೆಯ ಸಿಬ್ಬಂದಿ ಬಂದರು. ಅವರು ಬಂದ ತಕ್ಷಣ ಶೂಟ್‌ ಮಾಡಿದರು, ನನಗೆ ಭಯವಾಯ್ತು, ಓಡಿ ಹೋದೆ. ಆಗ ಸಮಯ ಸರಿ ಸುಮಾರು ಬೆಳಗಿನ ಜಾವ 5.20 ಆಗಿತ್ತು. ಭಯದಿಂದ ನಾನು ಅಲ್ಲಿಂದ ಓಡಿ ಬಿಟ್ಟೆ. 5 ನಿಮಿಷ ಆದ ಮೇಲೆ ಯಾವುದೇ ಶಬ್ದ ಇರಲಿಲ್ಲ. ಆದರೆ, ನನಗೆ ಹುಷಾರಿರಲಿಲ್ಲ. ಹೀಗಾಗಿ, ಅಲ್ಲಿಂದ ಓಡಿ ಮನೆಗೆ ಬಂದೆ. ಬಳಿಕ, ಮನೆಯವರು ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಈಗ ಅರಣ್ಯ ಇಲಾಖೆಯವರು ಎಲ್ಲಾ ಕಡೆ ನನ್ನನ್ನು ಹುಡುಕುತ್ತಿದ್ದಾರೆ. ನನಗೆ ಭಯವಾಗುತ್ತಿದೆ. ಹೀಗಾಗಿ, ಪೊಲೀಸರೇ, ನನ್ನನ್ನು ನೀವೇ ನೋಡಿಕೊಳ್ಳಬೇಕು’ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದು, ಮಹಿಮಾದಾಸ್ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.

PREV
Read more Articles on
click me!

Recommended Stories

Bengaluru: ಮತ್ತೊಂದು ಟೋಲ್ ಶುಲ್ಕದ 18.50 km ಉದ್ದದ ಫ್ಲೈಓವರ್: ಕನಕಪುರ ರಸ್ತೆಗೆ ಪರ್ಯಾಯ ಮಾರ್ಗ
ಔಟರ್ ರಿಂಗ್ ರಸ್ತೆಯ 17 ಕಿ.ಮೀ ಮಾರ್ಗದ ವೈಟ್‌ ಟಾಪಿಂಗ್ ಕಾಮಗಾರಿ ಈಗ ಬೇಡ ಎಂದ ORRCA