Bengaluru: ಮತ್ತೊಂದು ಟೋಲ್ ಶುಲ್ಕದ 18.50 km ಉದ್ದದ ಫ್ಲೈಓವರ್: ಕನಕಪುರ ರಸ್ತೆಗೆ ಪರ್ಯಾಯ ಮಾರ್ಗ

Published : Aug 19, 2026, 07:07 AM IST
Bengaluru Flyover

ಸಾರಾಂಶ

ಬೆಂಗಳೂರಿನ ದಕ್ಷಿಣ ಭಾಗದ ಸಂಚಾರ ದಟ್ಟಣೆ ನಿವಾರಿಸಲು, 18.50 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 'ಬಿಒಒಟಿ' ಮಾದರಿಯಲ್ಲಿ ನಿರ್ಮಾಣವಾಗಲಿರುವ ಈ ಟೋಲ್ ಸಹಿತ ಮೇಲ್ಸೇತುವೆಯು ಕನಕಪುರ ರಸ್ತೆಗೆ ಪರ್ಯಾಯ ಮಾರ್ಗವಾಗಿ ಕಾರ್ಯನಿರ್ವಹಿಸಲಿದೆ.

ವಿಶೇಷ ವರದಿ 

ಬೆಂಗಳೂರು: ನಗರದ ದಕ್ಷಿಣ ಭಾಗದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಮತ್ತೊಂದು ಬೃಹತ್ ಫ್ಲೈಓವರ್ ಯೋಜನೆ ಸಿದ್ಧವಾಗಿದೆ. ರಾಗಿಗುಡ್ಡ ಜಂಕ್ಷನ್‌ನಿಂದ ತಲಘಟ್ಟಪುರ ಜಂಕ್ಷನ್ ಮಾರ್ಗವಾಗಿ ಕನಕಪುರ ಮುಖ್ಯ ರಸ್ತೆಯ ನೈಸ್ ಜಂಕ್ಷನ್‌ವರೆಗೆ 18.50 ಕಿ.ಮೀ ಉದ್ದದ ‘ಟೋಲ್ ಶುಲ್ಕ’ವಿರುವ ಎಲಿವೇಟೆಡ್ ಕಾರಿಡಾರ್ (ಫ್ಲೈಓವರ್) ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಟರ್ ಲಿಮಿಟೆಡ್ ಯೋಜನೆ ರೂಪಿಸಿದೆ.

ಯೋಜನೆಯ ಶೇ.40ರಷ್ಟು ವೆಚ್ಚ ಅಂದರೆ 913 ಕೋಟಿ

‘ನಿರ್ಮಾಣ, ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆ’ (ಬಿಒಒಟಿ) ಮಾದರಿಯಲ್ಲಿ ಅಂದಾಜು 2,283 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕಾರಿಡಾರ್‌ ಎರಡು ಬದಿಗಳು ಸೇರಿ ನಾಲ್ಕು ಲೈನ್‌ಗಳನ್ನು ಒಳಗೊಂಡಿರಲಿದೆ. ಕಾರಿಡಾರ್ ನಿರ್ಮಿಸುವ ಸಂಸ್ಥೆಯೇ ನಿಗದಿತ ಅವಧಿಯವರೆಗೆ ಟೋಲ್ ಶುಲ್ಕವನ್ನು ಸಂಚರಿಸುವ ವಾಹನಗಳಿಂದ ಸಂಗ್ರಹಿಸಲಿದೆ. ಯೋಜನೆಯ ಶೇ.40ರಷ್ಟು ವೆಚ್ಚ ಅಂದರೆ 913 ಕೋಟಿ ರು.ಯನ್ನು ರಾಜ್ಯ ಸರ್ಕಾರ ಭರಿಸಲಿದೆ. ಮಳೆಗಾಲದ ಅವಧಿ ಸೇರಿ ಒಟ್ಟು 30 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು ಎನ್ನುವ ಗುರಿ ಹೊಂದಲಾಗಿದೆ.

ಮಾರೇನಹಳ್ಳಿ ಮುಖ್ಯ ರಸ್ತೆಯ ರಾಗಿಗುಡ್ಡ ಜಂಕ್ಷನ್‌ನಲ್ಲಿ ಆರಂಭವಾಗುವ ಕಾರಿಡಾರ್ ತಲಘಟ್ಟಪುರ ಜಂಕ್ಷನ್ ಬಳಿಯ ಜಲಮಂಡಳಿ ಪೈಪ್‌ಲೈನ್ ರಸ್ತೆಯ ಮೂಲಕ ನೈಸ್ ರೋಡ್ ಜಂಕ್ಷನ್ ಬಳಿ ಸೇರಲಿದೆ. ಕಾರಿಡಾರ್‌ ಮಾರ್ಗದಲ್ಲಿ ಬರುವ ವಸಂತಪುರ, ವಾಜರಹಳ್ಳಿ ಮುಖ್ಯರಸ್ತೆ, ಔಟರ್ ರಿಂಗ್ ರೋಡ್, ಸಂಗಮ್ ಸರ್ಕಲ್ ಬಳಿ ವಾಹನಗಳು ಕಾರಿಡಾರ್‌ಗೆ ಸೇರಲು ಮತ್ತು ಹೊರ ಬರಲು ರೋಟರಿ ಸರ್ಕಲ್, ಅಪ್‌ರ್‍ಯಾಂಪ್ ಮತ್ತು ಡೌನ್‌ರ್‍ಯಾಂಪ್‌ಗಳನ್ನು ನಿರ್ಮಿಸಲಾಗುತ್ತದೆ.

ನೂತನ ಕಾರಿಡಾರ್ ನಿರ್ಮಾಣದಿಂದ ಸಿಲ್ಕ್‌ಬೋರ್ಡ್ ಜಂಕ್ಷನ್ ಕಡೆಯಿಂದ ಕನಕಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಈ ಮೇಲ್ಸೇತುವೆ ಅನುಕೂಲವಾಗಲಿದೆ. ಅಲ್ಲದೇ ನೈಸ್ ರಸ್ತೆಗೆ ಕಾರಿಡಾರ್ ಸೇರುವುದರಿಂದ ತುಮಕೂರು ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ ಸೇರಿದಂತೆ ವಿವಿಧ ಭಾಗಗಳಿಗೆ ತೆರಳುವ ಜನರಿಗೆ ಅನುಕೂಲವಾಗಿದೆ. ಕನಕಪುರ ರಸ್ತೆಗೆ ಪರ್ಯಾಯವಾಗಿ ಸಮನಾಂತರವಾಗಿ ಈ ಕಾರಿಡಾರ್ ನಿರ್ಮಾಣವಾಗಲಿದೆ.

ಇದನ್ನೂ ಓದಿ: ಔಟರ್ ರಿಂಗ್ ರಸ್ತೆಯ 17 ಕಿ.ಮೀ ಮಾರ್ಗದ ವೈಟ್‌ ಟಾಪಿಂಗ್ ಕಾಮಗಾರಿ ಈಗ ಬೇಡ ಎಂದ ORRCA

ಕಾರಿಡಾರ್ ಎಲ್ಲಿಂದ ಎಲ್ಲಿಗೆ?

ಮಾರೇನಹಳ್ಳಿ ಮುಖ್ಯ ರಸ್ತೆಯ ರಾಗಿಗುಡ್ಡ ಜಂಕ್ಷನ್‌ನಿಂದ ತಲಘಟ್ಟಪುರ ಜಂಕ್ಷನ್ ಬಳಿಯ ಜಲಮಂಡಳಿ ಪೈಪ್‌ಲೈನ್ ರಸ್ತೆಯ ಮೂಲಕ ನೈಸ್ ರೋಡ್ ಜಂಕ್ಷನ್‌ನಿಂದ ಸ್ವಲ್ಪ ಮುಂದೆ ಕಾರಿಡಾರ್ ಅಂತ್ಯವಾಗುತ್ತದೆ.

ಇದನ್ನೂ ಓದಿ: Bengaluru: ಸೋಂಕು ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕ್ಲಾರೆನ್ಸ್ ಶಾಲೆಗೆ ನೋಟಿಸ್‌

PREV
Read more Articles on
click me!

Recommended Stories

ಔಟರ್ ರಿಂಗ್ ರಸ್ತೆಯ 17 ಕಿ.ಮೀ ಮಾರ್ಗದ ವೈಟ್‌ ಟಾಪಿಂಗ್ ಕಾಮಗಾರಿ ಈಗ ಬೇಡ ಎಂದ ORRCA
Bengaluru: ಸೋಂಕು ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕ್ಲಾರೆನ್ಸ್ ಶಾಲೆಗೆ ನೋಟಿಸ್‌