
ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗಿನ ಜಾವ ನಡೆದಿದ್ದ ಮೂವರ ಎನ್‌ಕೌಂಟರ್ ಪ್ರಕರಣ ಇದೀಗ ತೀವ್ರ ಚರ್ಚೆ ಹಾಗೂ ಗ್ರಾಮಸ್ಥರು ಮತ್ತು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಸಿಬ್ಬಂದಿ ಯಾಕೆ ಮತ್ತು ಯಾವ ಆಧಾರದ ಮೇಲೆ ಶೂಟೌಟ್ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುವ ವರೆಗೂ ನಾವು ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಮೃತರ ಸಂಬಂಧಿ ವಿಜಯ್ ಆಂಥೋನಿ ಮೈಸೂರಿನ ಕೆ.ಆರ್. ಆಸ್ಪತ್ರೆಯ ಬಳಿ ಖಡಕ್ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದೇ ಈ ಭೀಕರ ಸುದ್ದಿ ತಿಳಿದು ಮೈಸೂರಿಗೆ ಧಾವಿಸಿರುವ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಮೃತದೇಹಗಳನ್ನು ವೀಕ್ಷಿಸಲು ಬಂದ ಮೃತರ ನಿಕಟ ಸಂಬಂಧಿ ವಿಜಯ್ ಆಂಥೋನಿ ಮಾಧ್ಯಮಗಳೊಂದಿಗೆ ಮಾತನಾಡಿ ಅರಣ್ಯ ಇಲಾಖೆಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
"ಮೃತಪಟ್ಟ ಮೂವರೂ (ಅಂತೊಣಿಸ್ವಾಮಿ, ಪೀಟರ್ ಹಾಗೂ ಕುಮಾರ್) ನನಗೆ ಸ್ವಂತ ಮಾವಂದಿರು. ಅವರ್ಯಾರೂ ಬೇಟೆಗಾರರಲ್ಲ. ಎಲ್ಲರೂ ಕೃಷಿ ಮಾಡಿಕೊಂಡು, ಹಸು-ಎಮ್ಮೆಗಳನ್ನು ಸಾಕಿಕೊಂಡಿದ್ದ ಸಾಧಾರಣ ರೈತರು. ದನಕರುಗಳು ಕಾಡಿಗೆ ಮೇಯಲು ಹೋದಾಗ, ಅವು ರಾತ್ರಿಯಾದರೂ ಮನೆಗೆ ಬರದಿದ್ದರೆ ಹುಡುಕಿಕೊಂಡು ಹೋಗುವುದು ನಮಗೆ ಸಾಮಾನ್ಯ. ಅಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಇವರ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ವೇಳೆ ಅವರ ಬಳಿ ಆಯುಧವೇ ಇದ್ದರೂ, ನೇರವಾಗಿ ಜೀವ ತೆಗೆಯುವಂತೆ ಶೂಟ್ ಮಾಡುವ ಅಗತ್ಯ ಏನಿತ್ತು? ಗುಂಡು ಹೊಡೆಯುವಾಗ ಕನಿಷ್ಠ ಕಾಲಿನ ಕೆಳಭಾಗಕ್ಕಾದರೂ ಹೊಡೆದು ಬಂಧಿಸಬಹುದಿತ್ತಲ್ಲವೇ? ನಮ್ಮವರು ಫೈರಿಂಗ್ ಮಾಡಿದ್ದಾರೆ ಎಂದು ಇಲಾಖೆ ಹೇಳುತ್ತಿದೆಯಲ್ಲ, ಹಾಗಾದರೆ ಯಾವ ಅರಣ್ಯ ಸಿಬ್ಬಂದಿಗೆ ಗುಂಡು ತಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ!
ಮೂವರಿಗೂ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಶುಭ ದಿನದಂದೇ ನಮಗೆ ಈ ದುಃಖದ ಸುದ್ದಿ ತಲುಪಿಸಿದ್ದಾರೆ. ಇವರನ್ನು ಕೊಲ್ಲಲು ಅರಣ್ಯ ಇಲಾಖೆಗೆ ಅನುಮತಿ ಕೊಟ್ಟವರು ಯಾರು? ನಮಗೆ ಈ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಸಿಗಬೇಕು. ಶೂಟೌಟ್‌ಗೆ ಸೂಕ್ತ ಕಾರಣ ಮತ್ತು ಸ್ಪಷ್ಟನೆ ಸಿಗುವವರೆಗೂ ನಾವು ಮೃತದೇಹಗಳನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದಿದ್ದಾರೆ
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆಗೆ ಶಂಕಿತ ಬೇಟೆಗಾರರ ತಂಡ ಎಂಟ್ರಿ ಕೊಟ್ಟಿದೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಈ ವೇಳೆ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಹಾಗೂ ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಸ್ವಯಂ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ನಡೆಸಿದ ಪ್ರತ್ಯುತ್ತರದ ದಾಳಿಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳದಿಂದ ಒಂದು ನಾಡಬಂದೂಕು ಹಾಗೂ ಒಂದು ಜಿಂಕೆಯ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದ್ದು, ಗಾಯಗೊಂಡ ಅರಣ್ಯ ಸಿಬ್ಬಂದಿಯೊಬ್ಬರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ ಎನ್‌ಕೌಂಟರ್ ವಿಷಯ ತಿಳಿಯುತ್ತಿದ್ದಂತೆಯೇ ಶಾಗ್ಯ ಗ್ರಾಮದಲ್ಲಿ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ. ಅರಣ್ಯಾಧಿಕಾರಿಗಳು ಸುಳ್ಳು ಕಥೆ ಕಟ್ಟಿ, ಜೀವಂತವಾಗಿ ಹಿಡಿದು ಹತ್ತಿರದಿಂದ ಶೂಟ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ ಉಪವಲಯ ಅರಣ್ಯಾಧಿಕಾರಿಗಳ (DRFO) ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಕಚೇರಿಯ ಪೀಠೋಪಕರಣಗಳು, ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಧ್ವಂಸಗೊಳಿಸಲಾಗಿದೆ. ಪ್ರಸ್ತುತ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರ ಹಾಗೂ ಶಾಗ್ಯ ಅರಣ್ಯ ಕಚೇರಿಯ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಬಂದೋಬಸ್ತ್ ಅನ್ನು ಬಿಗಿಗೊಳಿಸಲಾಗಿದೆ.