ಕಿತ್ತೋದ ನಾಮಫಲಕ, ಹಿಂಬದಿಯ ಗೋಡೆ, ಕುರ್ಚಿಗಳು, ಹಿಡಿಕೆಗಳು, ಸರಿಪಡಿಸಲು ಜನಪ್ರತಿನಿಧಿ, ಅಧಿಕಾರಿಗಳಿಗೆ ಬೇಕು ಇಚ್ಛಾಶಕ್ತಿ
ಖಾನಾಪುರ(ಡಿ.22): ಗುಣಮಟ್ಟದ ಕಾಮಗಾರಿ ನಡೆಯದಿದ್ದರೇ ಏನಾಗುತ್ತದೆ ಎಂಬುವುದಕ್ಕೆ ತಾಲೂಕಿನ ಚಿಕದಿನಕೊಪ್ಪ ಸರ್ಕಾರಿ ಪ್ರೌಢಶಾಲೆಯ ಎದುರು ಅವರೊಳ್ಳಿ-ಪಾರಿಶ್ವಾಡ ರಸ್ತೆಯ ಮೇಲಿನ ಬಸ್ ತಂಗುದಾಣವೇ ಸಾಕ್ಷಿ! ಇತ್ತೀಚೆಗಷ್ಟೆ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಈಗ ಸಂಪೂರ್ಣ ಹಾಳಾಗಿದ್ದು, ಬಳಕೆಗೂ ಬಾರದಂತಾಗಿದೆ. ಇದರಿಂದಾಗಿ ನಾಗರಿಕರ ತೆರಿಗೆ ಹಣ ಕೂಡ ಈ ಮೂಲಕ ಪರೋಕ್ಷವಾಗಿ ದುಂದುವೆಚ್ಚವಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದ್ದಲ್ಲದೇ ಕಳಪೆಯಾಗಿ ನಿರ್ಮಿಸಿದ ಗುತ್ತಿಗೆದಾರರ ವಿರುದ್ಧ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಖಾನಾಪುರ ತಾಲೂಕಿನ ಚಿಕದಿನಕೊಪ್ಪ ಸರ್ಕಾರಿ ಪ್ರೌಢಶಾಲೆಯ ಎದುರು ಅವರೊಳ್ಳಿ-ಪಾರಿಶ್ವಾಡ ರಸ್ತೆಯ ಮೇಲೆ ಇತ್ತೀಚೆಗಷ್ಟೆನಿರ್ಮಿಸಿದ್ದ ಪ್ರಯಾಣಿಕರ ತಂಗುದಾಣ ಈಗ ಹಾಳಾಗಿದೆ. ತಂಗುದಾಣದ ನಾಮಫಲಕ, ಗೋಡೆ, ನೆಲ, ಕುರ್ಚಿ ಎಲ್ಲವೂ ಕಿತ್ತುಹೋಗಿವೆ. ಪರಿಣಾಮ ಪ್ರಯಾಣಿಕರ ಬಳಕೆಗೆ ಇದ್ದೂ ಇಲ್ಲದಂತಾಗಿರುವುದು ಅವಲಂಬಿತ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
Ground Report: ಚಿಕ್ಕೋಡಿಯಲ್ಲಿ ಬಿಜೆಪಿ, ಕಾಂಗ್ರೆಸ್ ಆಕಾಂಕ್ಷಿಗಳ ನಡುವೆ ಭರ್ಜರಿ ಟಿಕೆಟ್ ಫೈಟ್
ಮಳೆ, ಬಿಸಿಲಿಗಿಲ್ಲ ರಕ್ಷಣೆ!
ಚಿಕ್ಕದಿನಕೊಪ್ಪ ಪ್ರೌಢಶಾಲೆಯಲ್ಲಿ ಚಿಕ್ಕದಿನಕೊಪ್ಪ, ದೇಮಿನಕೊಪ್ಪ, ಕೊಡಚವಾಡ, ಅವರೊಳ್ಳಿ, ಬಿಳಕಿ ಹಾಗೂ ಅಕ್ಕಪಕ್ಕದ ವಿವಿಧ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. 10ಕ್ಕೂ ಹೆಚ್ಚು ಸಿಬ್ಬಂದಿ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಳೆಗಾಲ ಹಾಗೂ ಬೇಸಿಗೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸ್ಥಳೀಯ ಶಾಸಕರ ವಿಶೇಷ ಆಸಕ್ತಿವಹಿಸಿ ಶಾಲೆಯ ಬಳಿ ಬಸ್ ತಂಗುದಾಣ ನಿರ್ಮಿಸಿದ್ದಾರೆ. ಆದರೆ, ಬಸ್ ತಂಗುದಾಣದ ಕಾಮಗಾರಿ ಅತ್ಯಂತ ಕೀಳುದರ್ಜೆಯಿಂದ ಕೂಡಿರುವುದರಿಂದ ಅದನ್ನು ನಿರ್ಮಿಸಿದ ಕೆಲವೇ ಕೆಲವು ತಿಂಗಳಲ್ಲಿ ಸಂಪೂರ್ಣ ಹಾಳಾಗಿದೆ. ತಂಗುದಾಣ ನಿರ್ಮಾಣಕ್ಕೆ ಬಳಸಲಾದ ಕಬ್ಬಿಣದ ಕಂಬಗಳು ತುಕ್ಕು ಹಿಡಿದಿರುವುದು ಕೀಳುಮಟ್ಟದ ಕಾಮಗಾರಿಯಿಂದ ಎಂಬುವುದು ಮೇಲ್ನೋಟದಲ್ಲಿಯೇ ಕಾಣುತ್ತಿದೆ. ಹೀಗಾಗಿ ತಂಗುದಾಣ ನಿರ್ಮಾಣವಾದರೂ ಬಳಕೆಗೆ ಮಾತ್ರ ಯೋಗ್ಯವಿಲ್ಲದಂತಾಗಿದೆ.
ತಂಗುದಾಣ ಕಾಮಗಾರಿಗೆ ಕಾಳಜಿ ವಹಿಸಿಲ್ಲವೇ?
ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು 2020-21 ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ವಿಶೇಷ ಕಾಳಜಿ ವಹಿಸಿ ಚಿಕ್ಕದಿನಕೊಪ್ಪ ಸರ್ಕಾರಿ ಪ್ರೌಢಶಾಲೆಯ ಎದುರಿಗೆ ಈ ತಂಗುದಾಣ ನಿರ್ಮಿಸಿದ್ದಾರೆ. ತಂಗುದಾಣ ನಿರ್ಮಾಣವಾದ ಬಳಿಕ ಕೆಲವೇ ದಿನಗಳು ಮಾತ್ರ ಎಲ್ಲವೂ ಸರಿಯಾಗಿತ್ತು. 2-3 ತಿಂಗಳ ನಂತರ ತಂಗುದಾಣದಲ್ಲಿ ಅಳವಡಿಸಿದ್ದ ನಾಮಫಲಕ, ಹಿಂಬದಿಯ ಗೋಡೆ, ಕುರ್ಚಿಗಳು, ಹಿಡಿಕೆಗಳು ಕಿತ್ತುಹೋದವು. ಈ ವರ್ಷದ ಮಳೆಗಾಲದ ಬಳಿಕ ನೆಲವೂ ಹಾಳಾಗಿದೆ. ಇದರಿಂದಾಗಿ ಬಸ್ ತಂಗುದಾಣ ಉಪಯೋಗಕ್ಕೆ ಬಾರದಂತಾಗಿರುವುದು ಕಳಪೆ ಕಾಮಾಗಾರಿಗೆ ಕೈಗನ್ನಡಿಯಂತಾಗಿದೆ. ಶಾಸಕರು ಕೇವಲ ಅನುದಾನ ತಂದು ಕಾಮಗಾರಿ ಮಾಡಿಸಿದರೇ ಸಾಲದು ಕಾಮಗಾರಿಯ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅಂದಾಗ ಮಾತ್ರ ಅಭಿವೃದ್ಧಿ ಯೋಜನೆಗಳು ಹೆಚ್ಚೆಚ್ಚು ಜನ ಬಳಕೆಯಾಗುವುದಲ್ಲದೇ ಜನಪ್ರಿಯಗಳಾಗುತ್ತವೆ ಎನ್ನುವುದು ಜನರ ಸಲಹೆ.
Belagavi Winter Session: ಏಯ್ ಹೊರಗೆ ನಡಿ ಎಂದಿದ್ದಕ್ಕೆ ಕೋಲಾಹಲ, ಕಲಾಪ ಬಲಿ
ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರ ವಿಶೇಷ ಕಾಳಜಿಯಿಂದ ತಂಗುದಾಣ ನಿರ್ಮಾಣವಾಗಿದೆ. ಆದರೇ ಸದ್ಯ ಉಪಯೋಗಕ್ಕೆ ಬಾರದ ಸ್ಥಿತಿಗೆ ಬಂದಿದ್ದು, ನಾಮ್ ಕೆ ವಾಸ್ತೆ ಇದ್ದಂತಾಗಿದೆ. ಕೂಡಲೇ ತಂಗುದಾಣದಲ್ಲಿ ಕಿತ್ತು ಹೋದ ನಾಮಫಲಕ, ಹಿಂಬದಿಯ ಗೋಡೆ, ಕುರ್ಚಿಗಳನ್ನು ಶೀಘ್ರ ಸರಿಪಡಿಸಬೇಕು ಅಂತ ಅವರೊಳ್ಳಿ ಗ್ರಾಮಸ್ಥ, ಸಾಮಾಜಿಕ ಕಾರ್ಯಕರ್ತ ಯಶವಂತ ಕೋಡೊಳಿ ಹೇಳಿದ್ದಾರೆ.
ಚಿಕ್ಕದಿನಕೊಪ್ಪ ಪ್ರೌಢಶಾಲೆ ಬಳಿಯ ಬಸ್ ತಂಗುದಾಣ ಹಾಳಾಗಿರುವ ಕಾರಣ ಅಲ್ಲಿಯ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಈ ತಂಗುದಾಣವನ್ನು ದುರಸ್ತಿಗೊಳಿಸದಿದ್ದರೆ ತಾಲೂಕು ಕಚೇರಿ ಎದುರು ಹೋರಾಟ ನಡೆಸಲಾಗುವುದು ಅಂತ ಎಬಿವಿಪಿ ಮುಖಂಡ ಮಂಜುನಾಥ ಹಂಚಿನಮನಿ ತಿಳಿಸಿದ್ದಾರೆ.