ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರವದಿ ಇಷ್ಟು ದಿನ ಇರಲಿದೆ. ಇದು ಸೂರ್ಯ ಚಂದ್ರರಂತೆ ಇದು ಖಚಿತ ಎಂದು ಭವಿಷ್ಯ ನುಡಿಯಲಾಗಿದೆ.
ದಾವಣಗೆರೆ (ಸೆ.21): ಸೂರ್ಯ, ಚಂದ್ರರು ಇರುವುದು ಎಷ್ಟುಸತ್ಯವೋ, ಮುಂದಿನ 3 ವರ್ಷದ ಅವಧಿಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯುವುದೂ ಅಷ್ಟೇ ಸತ್ಯ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದರು. ಹೊನ್ನಾಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಕೋವಿಡ್, ಡಿಜೆ ಹಳ್ಳಿ-ಕೆಜೆ ಹಳ್ಳಿ ಗಲಭೆಯಂತಹ ಸಾಕಷ್ಟುಸವಾಲುಗಳನ್ನು ಬಿಎಸ್‌ವೈ ಸಮರ್ಥವಾಗಿ ನಿಭಾಯಿಸಿದ್ದು, ಡ್ರಗ್ಸ್ ಮಾಫಿಯಾ ಮಟ್ಟಹಾಕಲು ದಿಟ್ಟಕ್ರಮ ಕೈಗೊಂಡಿದ್ದಾರೆ. ಡ್ರಗ್ ಮಾಫಿಯಾ, ಮಾದಕ ವಸ್ತುಗಳ ಜಾಲವನ್ನು ಮಟ್ಟಹಾಕದೆ ಹಿಂದೆ ಆಳಿದ ಸರ್ಕಾರಗಳು ಸಂಪೂರ್ಣ ಕಡೆಗಣಿಸಿದ್ದವು. ಆದರೆ, ಯಡಿಯೂರಪ್ಪ ಸರ್ಕಾರ ಡ್ರಗ್ಸ್ ಮಾಫಿಯಾ ಬೇರು ಸಮೇತ ಕಿತ್ತು ಹಾಕುವುದರ ಜೊತೆಗೆ, ಡ್ರಗ್ಸ್ ಮುಕ್ತ ರಾಜ್ಯ ನಿರ್ಮಾಣಕ್ಕೆ ಕಂಕಣಬದ್ಧವಾಗಿದೆ ಎಂದು ತಿಳಿಸಿದರು.
ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲೆಂದು ನಾನು 2 ಸಲ ದಿಲ್ಲಿಗೆ ಹೋಗಲಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಹೋಗಿದ್ದೆ. ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಒಂದು ಸಚಿವ ಸ್ಥಾನವಾದರೂ ನೀಡುವಂತೆ ಎಲ್ಲಾ ಶಾಸಕರೂ ಒತ್ತಾಯ ಮಾಡಿದ್ದೇವೆ. ಮುಖ್ಯಮಂತ್ರಿ ಬಿಎಸ್‌ವೈ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಹಾಗೂ ಪಕ್ಷದ ವರಿಷ್ಟರಿಗೆ ಮನವಿ ಮಾಡಿದ್ದೇವೆ. ಆದರೆ, ಸಚಿವ ಸ್ಥಾನಕ್ಕಾಗಿ ನಾವ್ಯಾರೂ ಲಾಬಿ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಸಚಿವ ಸ್ಥಾನದ ಅವಕಾಶ ಕೇಳುವುದು ತಪ್ಪಲ್ಲ. ಸಿಎಂ, ಪಕ್ಷದ ವರಿಷ್ಟರು, ರಾಜ್ಯಾಧ್ಯಕ್ಷರು ಏನು ಕ್ರಮ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ಸಚಿವ ಸ್ಥಾನಕ್ಕಾಗಿ ಎಲ್ಲಿಯೂ ಲಾಬಿ ಮಾಡಿಲ್ಲ. ಸಚಿವ ಸ್ಥಾನ ಕೊಟ್ಟರೆ, ಸಮರ್ಥವಾಗಿ ನಿಭಾಯಿಸುವೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
' ಜೋಡೆತ್ತುಗಳ ನಡುವೆ ಮುನಿಸು : ಶಿರಾದಲ್ಲಿ ಬಿಜೆಪಿ ಗೆಲುವು ಕನ್ಫರ್ಮ್'
ತಾ. ಶಿರಮಗೊಂಡನಹಳ್ಳಿಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ ನಿವಾಸ, ಬೆಂಗಳೂರಿನ ನನ್ನ ಮನೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರೂ ಒಟ್ಟಿಗೆ ಸೇರಿ ಸಭೆ ಮಾಡಿದ್ದು ನಿಜ. ಜಿಲ್ಲೆಯಲ್ಲಿ ಎಸ್.ಎ.ರವೀಂದ್ರನಾಥ ಸೇರದಂತೆ ಯಾರಿಗೇ ಸಚಿವ ಸ್ಥಾನ ನೀಡಿದರೂ ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಭೈರತಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಾಕಷ್ಟುಕೆಲಸ ಮಾಡುತ್ತಿದ್ದಾರೆ. ಭೈರತಿ ಬದಲಾವಣೆ ಮಾಡುವಂತೆ ನಾವ್ಯಾರೂ ಎಲ್ಲಿಯೂ ಕೇಳಿಲ್ಲ. ಜಿಲ್ಲಾ ಸಚಿವರಾಗಿ ಭೈರತಿ ಮುಂದುವರಿಯಲಿ. ಆದರೆ, ದಾವಣಗೆರೆ ಜಿಲ್ಲೆಗೊಂಡು ಸಚಿವ ಸ್ಥಾನ ನೀಡಲಿ ಎಂಬುದು ನಮ್ಮ ಮುಖ್ಯ ಬೇಡಿಕೆ. ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತದೆಂಬ ವಿಶ್ವಾಸವೂ ಇದೆ ಎಂದು ಹೇಳಿದರು.