* ಒಬ್ಬರಲ್ಲೇ 2 ಶಿಲೀಂಧ್ರ ಪತ್ತೆ ರಾಜ್ಯದಲ್ಲೇ ಮೊದಲು
* ಕೊರೋನಾದಿಂದ 12 ದಿನ ಐಸಿಯುನಲ್ಲಿದ್ದು ಚೇತರಿಸಿಕೊಂಡಿದ್ದ ಡಾಕ್ಟರ್
* ಕೊರೋನಾ ಸೋಂಕಿತನಾದ ಬಳಿಕವೇ ವೈದ್ಯನಿಗೆ ಮಧುಮೇಹ ಪತ್ತೆ
ಬೆಂಗಳೂರು(ಜೂ.26): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಸಿರು ಶಿಲೀಂಧ್ರ ಸೋಂಕು ಪತ್ತೆಯಾಗಿದ್ದು, ಬೆಂಗಳೂರು ಮೂಲದ ಮಕ್ಕಳ ವೈದ್ಯರೊಬ್ಬರಲ್ಲಿ ಕಪ್ಪು ಶಿಲೀಂಧ್ರ ಹಾಗೂ ಹಸಿರು ಶಿಲೀಂಧ್ರ ಎರಡೂ ಪತ್ತೆಯಾಗಿದೆ.
ಈ ರೀತಿ ಕಪ್ಪು ಶಿಲೀಂಧ್ರ (ಮ್ಯುಕೊರ್‌ಮಿಕೊಸಿಸ್) ಹಾಗೂ ಹಸಿರು ಶಿಲೀಂಧ್ರ (ಆಸ್ಪೆರ್ಜಿಲಾಸಿಸ್) ಎರಡೂ ಒಬ್ಬರಲ್ಲೇ ಪತ್ತೆಯಾಗಿರುವುದು ದೇಶದಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ. ಬೆಂಗಳೂರು ಮೂಲದ ವೈದ್ಯರಿಗೆ ಏಪ್ರಿಲ್ ತಿಂಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರಿಗೆ ದೇಹದಲ್ಲಿ ಆಮ್ಲಜನಕ ಪ್ರಮಾಣ 80ಕ್ಕೆ ಕುಸಿದಿದ್ದರಿಂದ ತುರ್ತು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ 12 ದಿನ ಐಸಿಯುನಲ್ಲಿದ್ದ ವೈದ್ಯರು ಬಳಿಕ ಚೇತರಿಸಿಕೊಂಡಿದ್ದರು.
ಚೇತರಿಸಿಕೊಂಡ ಬಳಿಕ ಮುಖದ ಒಂದು ಭಾಗದಲ್ಲಿ ಮರಗಟ್ಟಿದ ಅನುಭವ ಹಾಗೂ ಮೂಗು ಸೋರುವಿಕೆ ಲಕ್ಷಣಗಳು ಕಂಡು ಬಂದಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾನಿಂಗ್ ಮಾಡಿದ್ದರೂ ಶಿಲೀಂಧ್ರ ಸೋಂಕು ದೃಢಪಟ್ಟಿರಲಿಲ್ಲ. ಬಳಿಕವೂ ರೋಗ ಲಕ್ಷಣಗಳು ಮುಂದುವರೆದಿತ್ತು.
ಹುಬ್ಬಳ್ಳಿ: 8 ಜನರ ದೃಷ್ಟಿ ಕಿತ್ತುಕೊಂಡ ಬ್ಲ್ಯಾಕ್ ಫಂಗಸ್..!
ಬಳಿಕ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಇಎನ್‌ಟಿ ತಜ್ಞರನ್ನು ಭೇಟಿ ಮಾಡಿದ್ದ ಕಾರ್ತಿಕೇಯನ್ ಅವರ ಮೂಗಿನಲ್ಲಿ ಹಸಿರು ಮತ್ತು ಬೂದಿ ಬಣ್ಣ ಮಿಶ್ರಿತ ಫಂಗಸ್ ಪತ್ತೆಯಾಗಿತ್ತು. ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ ಮೂಗಿನ ಮೂಳೆಯಲ್ಲಿದ್ದ ಶಿಲೀಂಧ್ರದ ಜೀವಕೋಶಗಳನ್ನು ತೆಗೆಯಲಾಯಿತು. ಕಣ್ಣು ಅಥವಾ ಮಿದುಳಿಗೆ ವ್ಯಾಪಿಸಿದ್ದರೆ ರೋಗಿ ಬದುಕುತ್ತಲೇ ಇರಲಿಲ್ಲ ಎಂದು ಬಿಜಿಎಸ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಸೋಂಕಿತ ವ್ಯಕ್ತಿಗೆ ಈ ಮೊದಲು ಮಧುಮೇಹ ಇರುವುದು ಪತ್ತೆಯಾಗಿರಲಿಲ್ಲ. ಕೊರೋನಾ ಸೋಂಕಿತನಾದ ಬಳಿಕವೇ ಅವರಿಗೆ ಮಧುಮೇಹ ಪತ್ತೆಯಾಗಿತ್ತು. ಹೀಗಿದ್ದರೂ ಎರಡೂ ಶಿಲೀಂಧ್ರ ಸೋಂಕು ಉಂಟಾಗಿದೆ. ಸದ್ಯ ರೋಗಿ ಚೇತರಿಸಿಕೊಂಡಿದ್ದಾರೆ ಎಂದರು.