ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯ ಹೊಸಮುಖಗಳು..!

By Kannadaprabha News  |  First Published Jul 9, 2021, 10:13 AM IST

* ಹೊಸಬರ ಅಖಾಡ ಆಗುತ್ತಿದೆ ಮಹಾನಗರ ಪಾಲಿಕೆ ಚುನಾವಣೆ
* ಪ್ರಚಾರದ ಮೂಲಕ ಸಂಕಲ್ಪ ಶೆಟ್ಟರ್‌ ರಾಜಕೀಯ ರಂಗಪ್ರವೇಶ
* ಪಾಲಿಕೆ ಚುನಾವಣೆಯ ಮೇಲೆ ಕಣ್ಣಿಟ್ಟ ಹೊಸಬರು
 


ಮಯೂರ ಹೆಗಡೆ

ಹುಬ್ಬಳ್ಳಿ(ಜು.09): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಕುರಿತಂತೆ ಚರ್ಚೆ ನಡೆಯುತ್ತಿರುವ ವೇಳೆಯೆ ಬಿಜೆಪಿಯಿಂದ ರಾಜಕೀಯ ಅಖಾಡಕ್ಕೆ ಇಳಿಯಲು ಒಂದಿಷ್ಟು ಹೊಸ ಮುಖಗಳು ಪ್ರಯತ್ನ ನಡೆಸಿವೆ. ಚುನಾವಣಾ ಸ್ಪರ್ಧೆ, ಪ್ರಚಾರದ ಮೂಲಕ ಗುರುತಿಸಿಕೊಳ್ಳುವ ಸನ್ನಾಹದಲ್ಲಿದ್ದಾರೆ.

Tap to resize

Latest Videos

ಇನ್ನೂ ಚುನಾವಣೆ ಘೋಷಣೆ ಆಗಿಲ್ಲ, ಸದ್ಯಕ್ಕೆ ನಡೆಯುತ್ತದೊ, ನವೆಂಬರ್‌ ಬಳಿಕವೊ ಎಂಬ ಜಿಜ್ಞಾಸೆಯಲ್ಲೇ ಇದೆ. ಹೀಗಿರುವಾಗ ಪಕ್ಷದಲ್ಲಿ ಈಗಾಗಲೇ ಕಾಣಿಸಿಕೊಂಡವರು, ಕಾಣಿಸಿಕೊಳ್ಳುವ ಯತ್ನದಲ್ಲಿರುವವರು ಪಾಲಿಕೆ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ.

ಸಚಿವ ಜಗದೀಶ ಶೆಟ್ಟರ್‌ ಪುತ್ರ ಸಂಕಲ್ಪ ಶೆಟ್ಟರ್‌ ಕೊರೋನಾ ಅವಧಿಯಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಒಂದಿಷ್ಟುಗಮನ ಸೆಳೆದಿದ್ದಾರೆ. ಸ್ವತಂತ್ರವಾಗಿ ರಾಜಕೀಯ ಭವಿಷ್ಯ ಕಟ್ಟಿಕೊಳ್ಳುತ್ತೇನೆ ಎಂಬ ಅನಿಸಿಕೆಯನ್ನೂ ಆ ವೇಳೆ ವ್ಯಕ್ತಪಡಿಸಿದ್ದರು. ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದಲ್ಲಿ ತಮ್ಮವರ ಪರ ಬ್ಯಾಟಿಂಗ್‌ ಮಾಡುವ ತಂತ್ರ ರೂಪಿಸುವ ಮೂಲಕ ಪ್ರವೇಶ ಮಾಡಬಹುದು ಎಂಬ ಕುತೂಹಲವೂ ರಾಜಕೀಯ ವಲಯದಲ್ಲಿದೆ. ಒಂದು ವೇಳೆ ಹಾಗೆನಾದರೂ ಆದಲ್ಲಿ ಬಿಜೆಪಿಗೆ, ರಾಜಕೀಯಕ್ಕೆ ಶೆಟ್ಟರ್‌ ಕುಟುಂಬದಿಂದ ಹೊಸ ತಲೆಮಾರಿನ ರಂಗ ಪ್ರವೇಶ ಆದಂತಾಗಲಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸ್ಪರ್ಧೆಗೆ ಆಪ್‌ ದಿಲ್ಲಿ ತಂತ್ರ..!

ಉಪ್ಪಾರ ಇಂಜಿನೀಯರ್‌ ಪುತ್ರ:

ಚುನಾವಣೆ ಸ್ಪರ್ಧೆ ವಿಚಾರಕ್ಕೆ ಬಂದರೆ ಎರಡು ಬಾರಿ ಕಾರ್ಪೋರೇಟರ್‌ ಸ್ಥಾನದಲ್ಲಿದ್ದ ಲಕ್ಷ್ಮಣ ಹಾಗೂ ಉಪಮೇಯರ್‌ ಲಕ್ಷ್ಮೀ ಉಪ್ಪಾರ ಪುತ್ರ ಕಿರಣ ಉಪ್ಪಾರ ಚುನಾವಣೆಗೆ ಧುಮುಕುವ ಉತ್ಸಾಹದಲ್ಲಿದ್ದರೂ ವಾರ್ಡ್‌ ಮೀಸಲಾತಿ ಪೂರಕವಾಗಿಲ್ಲ.

ಆರ್ಕಿಟೆಕ್ಚರ್‌ ಎಂಜಿನಿಯರಿಂಗ್‌ ಮುಗಿಸಿ ಲಂಡನ್‌ನಲ್ಲಿ ಟೌನ್‌ ಮ್ಯಾನೇಜ್‌ಮೆಂಟ್‌ ಓದಿ ವಾಪಸ್ಸಾಗಿರುವ ಕಿರಣ ಬಿಜೆಪಿ ಧಾರವಾಡದ ಯುವಮೋರ್ಚಾ ಅಧ್ಯಕ್ಷರಾಗಿ ಪದಾಧಿಕಾರಿಗಳ ಜತೆ ಭಾನುವಾರ ಒಂದೊಂದು ವಾರ್ಡ್‌ನಲ್ಲಿ ಸ್ವಚ್ಛತಾ (ಸ್ವಚ್ಛ ಸಂಡೆ) ಕಾರ್ಯಕ್ರಮ ರೂಪಿಸಿದವರು. 34ನೇ ವಾರ್ಡ್‌ನಿಂದ ಸ್ಪರ್ಧಿಸುವ ಇಚ್ಛೆಯಿದ್ದರೂ ಇಲ್ಲಿ ಮಹಿಳಾ ಮೀಸಲಾತಿ ಇದೆ. ಹೀಗಾಗಿ ಬೇರೆ ವಾರ್ಡ್‌ನಿಂದ ಸ್ಪರ್ಧಿಸಲು ಯತ್ನಿಸಿದ್ದಾರೆ. ಆರ್ಕಿಟೆಕ್ಚರ್‌, ಟೌನ್‌ ಪ್ಲಾನಿಂಗ್‌ ಓದಿನ ಅನುಭವದಲ್ಲಿ ಮಾದರಿ ವಾರ್ಡ್‌ ನಿರ್ಮಿಸುವ ಗುರಿ ಇದೆ. ಪಕ್ಷ ಬೇರೆಡೆ ಟಿಕೆಟ್‌ ನೀಡುವ ವಿಶ್ವಾಸವಿದೆ ಎನ್ನುತ್ತಾರೆ.

ಉಪನ್ಯಾಸಕನಿಗೆ ಖಾದಿ ಗುಂಗು:

ಹಿಂದೆ 8 ವಾರ್ಡ್‌ ಆಗಿದ್ದ ಪುನರ್‌ ವಿಂಗಡಣೆ ಬಳಿಕ 7ನೇ ವಾರ್ಡ್‌ ಆಗಿರುವ ಕ್ಷೇತ್ರಕ್ಕೆ ಎಂಬಿಎ ಪದವೀಧರ ಶ್ರೀನಿವಾಸ ಕೊಟ್ಯಾನ್‌ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಕ್ಷೇತ್ರ ಹಿಂದುಳಿದ ವರ್ಗ (ಎ)ಸೀಮಿಸಲಾಗಿದೆ. ಜೆಎಸ್‌ಎಸ್‌ ಹಾಗೂ ಕೆಸಿಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶ್ರೀನಿವಾಸ ಇದೆ ಮೊದಲ ಬಾರಿ ಚುನಾವಣೆಗೆ ಇಳಿಯುತ್ತಿದ್ದಾರೆ.

2014ರಲ್ಲಿ ಇಲ್ಲಿ ಆಯ್ಕೆಯಾಗಿದ್ದ ನಿರ್ಮಲಾ ಜವಳಿ ಕೂಡ ಇವರನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ. ತಮ್ಮದೆ ಸಂಸ್ಥೆ ಮೂಲಕ 3 ಸಾವಿರ ಜನರಿಗೆ ಡಿಜಿಟಲ್‌ ಟ್ರೈನಿಂಗ್‌, 10-12 ಸಾವಿರ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿರುವ ಶ್ರೀನಿವಾಸ ತಮ್ಮ ವಾರ್ಡ್‌ನ್ನು ಮಾದರಿಯಾಗಿ ರೂಪಿಸುವ ಕನಸು ಹೊಂದಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್‌ಗೆ ಠಕ್ಕರ್‌ ಕೊಡಲು ಸಿದ್ಧವಾದ ಓವೈಸಿ ಪಕ್ಷ..!

ಕಳೆದ ಬಾರಿ ನಾಮಪತ್ರ ಸಲ್ಲಿಸಿ ಬಳಿಕ ಹಿಂಪಡೆದಿದ್ದ ಬಿಜೆಪಿ ಜಿಲ್ಲಾ ವಕ್ತಾರ ರವಿ ನಾಯ್ಕ ಪತ್ನಿ ಕಲ್ಪನಾ ನಾಯ್ಕ ಅವರಿಗೆ ಈ ಬಾರಿ ಪಕ್ಷ ಮಣೆ ಹಾಕುವುದು ಬಹುತೇಕ ಖಚಿತ. 46ನೇ ವಾರ್ಡ್‌ಗೆ (ಈ ಬಾರಿ 57ನೇ ವಾರ್ಡ್‌) ಕಳೆದ ಬಾರಿ ಲೀನಾ ಮಿಸ್ಕಿನ್‌ ಜತೆಗೆ ಇವರೂ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರು. ಬಳಿಕ ಮುಖಂಡರ ಮಾತಿನಂತೆ ಹಿಂಪಡೆದಿದ್ದರು. ರವಿ ನಾಯ್ಕ ಈ ಬಾರಿ ಟಿಕೆಟ್‌ ನೀಡುವಂತೆ ಕೇಳುತ್ತಿದ್ದಾರೆ.

ಇನ್ನು ಬಿಜೆಪಿ ಯುವ ಕಾರ್ಯಕರ್ತ ಮಂಜುನಾಥ ಹೆಬಸೂರು ಕೋವಿಡ್‌ ಅಲೆಯ ವೇಳೆ ಹೆಚ್ಚಿನದಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದವರು. ಇವರು 35ನೇ ವಾರ್ಡ್‌ನಿಂದ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಸಾಮಾನ್ಯ ಮೀಸಲಾತಿ ಇರುವ ಇಲ್ಲಿ ಸ್ಪರ್ಧಿಸಲು ಅಥವಾ ಬೇರೆಡೆ ತಮ್ಮ ಪತ್ನಿಗೆ ಟಿಕೆಟ್‌ ಕೇಳುವ ಯೋಚನೆ ಇವರದ್ದು.

ವನಿತಾ ರಾಜಕೀಯ:

ಬಿಜೆಪಿ ಯುವ ಮೋರ್ಚಾ, ಜಿಲ್ಲಾ ಘಟಕ ಚುನಾವಣೆ ಆಕಾಂಕ್ಷಿಗಳ ಸಭೆ, ಅರ್ಜಿಯನ್ನು ಇನ್ನೂ ಕರೆದಿಲ್ಲ. ಚುನಾವಣೆ ಘೋಷಣೆ ಬಳಿಕ ಇನ್ನಷ್ಟುಹೊಸ ಮುಖಗಳ ದರ್ಶನ ಆಗಬಹುದು. ಅದರಲ್ಲೂ ಶೇ. 50 ಮಹಿಳಾ ಮೀಸಲಾತಿ ಇರುವ ಕಾರಣ ಸಹಜವಾಗಿ ಹೊಸ ಮಹಿಳಾ ಮುಖಗಳು ಕಣದಲ್ಲಿ ಕಾಣಸಿಗಬಹುದು.
 

click me!