
ಕಲಬುರಗಿ(ಜು.15): ಮುಂಗಾರು ಮಳೆ ವಿಫಲವಾಗಿದ್ದರಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರವು ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ಒಂದು ವಾರದಲ್ಲಿ ಘೋಷಣೆ ಮಾಡದೇ ಹೋದಲ್ಲಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ್ ಪಾಟೀಲ್ ಕಮಲಾಪುರ ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆ ವಿಫಲವಾಗಿದ್ದರಿಂದ ಉದ್ದು, ಹೆಸರು ಮುಂತಾದ ಬೆಳೆಗಳನ್ನು ಬೆಳೆಯಲಾಗದೇ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಾಡಿಕೆಯ ಮಳೆಯಾಗದೇ ಕೇವಲ ಅರ್ಧದಷ್ಟುಮಳೆಯಾಗಿದ್ದು, ಜಮೀನುಗಳು ಬೆಳೆ ಇಲ್ಲದೇ ಬರ ಬಿದ್ದಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್
ವಾಡಿಕೆಯಂತೆ ಜಿಲ್ಲೆಯಲ್ಲಿ 149 ಮಿ.ಮೀ. ಮಳೆ ಆಗಬೇಕಿತ್ತು. ಆದಾಗ್ಯೂ, ಇದುವರೆಗೆ ಕೇವಲ 96 ಮಿ,ಮೀ. ಮಳೆಯಾಗಿದೆ. ಇನ್ನು 36 ಮಿ.ಮೀ. ಮಳೆಯ ಅಭಾವ ಇದೆ. ಶೇಕಡಾ 65ರಷ್ಟುಸಹ ಬಿತ್ತನೆಯಾಗಿಲ್ಲ. ಹೀಗಾಗಿ ಸರ್ಕಾರವು ಈಗಾಗಲೇ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು, ಸಚಿವರಾದ ಖರ್ಗೆ ಹಾಗೂ ಪಾಟೀಲ್ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ರೈತರಿಗೆ 6000 ರು.ಗಳ ಸಹಾಯಧನವನ್ನು ಕೊಡುತ್ತಿತ್ತು. ಅದಕ್ಕೇ ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು 4000 ರು.ಗಳ ಸಹಾಯಧನ ಒದಗಿಸಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ ಒಟ್ಟು ಹತ್ತು ಸಾವಿರ ರೂ.ಗಳನ್ನು ಕೊಡುತ್ತಿತ್ತು. ಇದೀಗ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 4000 ರು.ಗಳ ರಾಜ್ಯದ ಸಹಾಯಧನವನ್ನು ಸ್ಥಗಿತಗೊಳಿಸಿದ್ದು, ಕೂಡಲೇ ಆ ಸಹಾಯಧನವನ್ನು ಮುಂದುವರೆಸಬೇಕೆಂದರು. ಕೃಷಿ ಪಂಡಿತ್ ಅಧಿನಾಥ್ ಹೀರಾ, ಶ್ರೀಶೈಲ್ ಪಾಟೀಲ, ಮಲ್ಲಣ್ಣ ಕುಲಕರ್ಣಿ, ಗಿರೀಶಗೌಡ ಇನಾಂರ್ದಾ, ಶಿವಕುಮಾರ್ ಪಾಟೀಲ, ಮಲ್ಲಿನಾಥ್ ಪಾಟೀಲ, ಅಣವೀರ್ ಪಾಟೀಲ್ ಇದ್ದರು.
ವಿಶೇಷ ಅನುದಾನ ಬಿಡುಗಡೆ ಮಾಡಲು ಮನವಿ
ಅಫಜಲ್ಪುರ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮು ಆರಂಭಗೊಂಡ ತಿಂಗಳು ಕಳೆದರೂ ಹನಿ ಮಳೆಯಾಗದೆ ಬಿತ್ತನೆಯಾಗಿಲ್ಲ, ಅಂತರ್ಜಲ ಕುಸಿದು ಜನ ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಉಲ್ಬಣವಾಗಿದೆ ಹೀಗಾಗಿ ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಿ ವಿಶೇಷ ಅನುದಾನ ಬಿಡುಗಡೆಗೊಳಿಸಿ ಎಂದು ಮಹಾನಾಯಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ನಾಗೇಶ ಕೊಳ್ಳಿ ಆಗ್ರಹಿಸಿದರು.
ಅವರು ಅಫಜಲ್ಪುರ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಅಫಜಲ್ಪುರ ತಾಲೂಕಿನಾದ್ಯಂತ ಸರ್ಕಾರಿ ಶಾಲಾ ಕಟ್ಟಡಗಳ ಪರಿಸ್ಥಿತಿ ತೀರಾ ಕೆಟ್ಟು ಹೋಗಿದೆ. ಶಾಲೆಯ ಛಾವಣಿ ಕುಸಿದು ಅರ್ಜುಣಗಿ ಗ್ರಾಮದ 4ನೇ ತರಗತಿ ವಿದ್ಯಾರ್ಥಿಯ ತಲೆ ಒಡೆದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅನೇಕ ಗ್ರಾಮಗಳ ಶಾಲೆಗಳು ಶೀಥಿಲಾವಸ್ಥೆ ಹಂತ ತಲುಪಿವೆ. ಕೂಡಲೇ ತಾಲೂಕಿನ ಶಾಲೆಗಳನ್ನು ದುರಸ್ತಿಗೊಳಿಸಿ ಹೊಸ ಕಟ್ಟಡಗಳನ್ನು ಕಟ್ಟಿಸಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.
ಪಂಚ ಗ್ಯಾರಂಟಿ ಸ್ಕೀಂ: ಬಿಜೆಪಿ, ಜೆಡಿಎಸ್ ನಾಯಕರಿಂದ ಅಪಪ್ರಚಾರ, ಶಾಸಕ ಅಲ್ಲಂಪ್ರಭು
ಇನ್ನೂ ತಾಲೂಕಿನಾದ್ಯಂತ ಎಸ್‌ಇಪಿ ಹಾಗೂ ಟಿಎಸ್‌ಪಿ ಮಿಸಲು ಅನುದಾನವನ್ನು ಬೇರೆ ಸಾಮಾನ್ಯ ಕಾಮಗಾರಿಗಳಿಗೆ ಬಳಸುವ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿದೆ. ಅನುದಾನದ ದುರುಪಯೋಗವಾಗಿದ್ದರ ಕುರಿತು ಸಮಗ್ರ ತನಿಖೆ ನಡೆಸಿ ದುರ್ಬಳಕೆ ಮಾಡಿಕೊಂಡವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ವೇದಿಕೆ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೈಭೀಮ್ ಬಟಗೇರಿ, ಚಿದಾನಂದ ಗುಡ್ಡಡಗಿ, ರಾಜಶೇಖರ ಗೌರ, ಯಲ್ಲಾಲಿಂಗ ಉದಯಕರ, ಪರಶುರಾಮ್, ಶಿವಾನಂದ ಬಸರಿಗಿಡ, ಮೌನೇಶ ಗುಡ್ಡಡಗಿ, ಚಂದ್ರಕಾಂತ ಶಿರೂರ ಸೇರಿದಂತೆ ಅನೇಕರು ಇದ್ದರು.