ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಮುಳುಗಡೆ ಆಗುವ ಜಮೀನುಗಳಿಗೆ ಪರಿಹಾರ ಕೊಡಲು ಹಿಂದಿನ ಬಿಜೆಪಿ ಸರ್ಕಾರ ಕೊನೆಯ ಬಜೆಟ್‌ನಲ್ಲಿ 5 ಸಾವಿರ ಕೋಟಿ ಅನುದಾನ ಇಟ್ಟಿತ್ತು. ನೂತನ ಸರ್ಕಾರ ತನ್ನ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ: ಪಿ.ಎಚ್.ಪೂಜಾರ
ಬಾಗಲಕೋಟೆ(ಜು.15): ಕಳೆದ ಆರು ದಶಕಗಳಿಂದ ಆರಂಭವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೂ ಮುಕ್ತಾಯ ಆಗುತ್ತಿಲ್ಲ. ಈಗ ನಡೆದಿರುವ ರೀತಿಯಲ್ಲಿ ಯೋಜನೆ ಸಾಗಿದರೆ ಇನ್ನೂ 150 ವರ್ಷಗಳಾದರೂ ಯುಕೆಪಿ ಮುಕ್ತಾಯ ಆಗುವುದಿಲ್ಲ. ಹೀಗಾಗಿ ನಮ್ಮ ಪರಿಸ್ಥಿತಿ ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯಭಾರ ಇಲ್ಲ ಎನ್ನುವಂತಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಸದಸ್ಯ ಪಿ.ಎಚ್.ಪೂಜಾರ ಆಕ್ರೋಶ ಹೊರಹಾಕಿದ್ದಾರೆ. ಪರಿಷತ್‌ನಲ್ಲಿ ಪಿ.ಎಚ್.ಪೂಜಾರ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಉತ್ತರಕ್ಕೆ ಪ್ರತಿಯಾಗಿ ಪೂಜಾರ ಅವರು ಈ ರೀತಿ ತಮ್ಮ ಬೇಸರ ಹೊರಹಾಕಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಮುಳುಗಡೆ ಆಗುವ ಜಮೀನುಗಳಿಗೆ ಪರಿಹಾರ ಕೊಡಲು ಹಿಂದಿನ ಬಿಜೆಪಿ ಸರ್ಕಾರ ಕೊನೆಯ ಬಜೆಟ್‌ನಲ್ಲಿ 5 ಸಾವಿರ ಕೋಟಿ ಅನುದಾನ ಇಟ್ಟಿತ್ತು. ನೂತನ ಸರ್ಕಾರ ತನ್ನ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ಈ ಬಗ್ಗೆ ಸರ್ಕಾರದ ತೀರ್ಮಾನದ ಬಗ್ಗೆ ಪೂಜಾರ ಗಮನ ಸೆಳೆದಿದ್ದರು.
undefined
ಹಣದ ಭಾಗ್ಯ: ಅಕ್ಕಿ ಬದಲು ಹಣ ವರ್ಗ, ಬ್ಯಾಂಕ್ ಖಾತೆ ಸಕ್ರಿಯಗೊಳಿಸಿ
ಇದಕ್ಕೆ ಸಚಿವ ಡಿಕೆಶಿ ಅವರು ನೀಡಿದ ಉತ್ತರದಲ್ಲಿ 2022-23ನೇ ಸಾಲಿನ ಬಜೆಟ್ ಬಗ್ಗೆ ಪ್ರಸ್ತಾಪಿಸಿದ್ದು, .5 ಸಾವಿರ ಕೋಟಿಗಳಲ್ಲಿ ಸರ್ಕಾರ ಕೊಟ್ಟಿದ್ದು .2 ಸಾವಿರ ಕೋಟಿ. ವಾರ್ಷಿಕ ಅಂತ್ಯದಲ್ಲಿ .1577.56 ಕೋಟಿ ವೆಚ್ಚ ಮಾಡಿದೆ. ಹಾಗೆಯೇ 2023ರ ಜನವರಿಯಲ್ಲಿ ಮುಳುಗಡೆ ಆಗುವ ಖುಷ್ಕಿ ಜಮೀನಿಗೆ ಎಕರೆಗೆ 20 ಲಕ್ಷ ಹಾಗೂ ನೀರಾವರಿಗೆ .25 ಲಕ್ಷ ಪರಿಹಾರ ಧನ ನಿಗದಿ ಪಡಿಸಿದ್ದು, ನಮ್ಮ ಸರ್ಕಾರ ಸಹ ಆದÜ್ಯತೆ ಮೇರಿಗೆ ಈಗ ಸ್ವಾಧೀನದ ವಿವಿಧ ಹಂತಗಳಲ್ಲಿ ಇರುವ 30677 ಎಕರೆ ಜಮೀನು ಸ್ವಾಧೀನಕ್ಕೆ ಆಧ್ಯತೆ ಮೇರಿಗೆ ಪರಿಹಾರ ಕೊಡಲಾಗುವುದು ಎಂದು ಉತ್ತರಿಸಿದರು.
ಇದಕ್ಕೆ ಸಮಾಧಾನಗೊಳ್ಳದ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಯೋಜನೆ ಅಡಿಯಲ್ಲಿ .70 ಸಾವಿರ ಕೋಟಿ ಅನುದಾನ ಬೇಕು. ಆದರೆ, ಇಲಾಖೆ ಸಚಿವರು ಪ್ರಸಕ್ತ ವರ್ಷ .2 ಸಾವಿರ ಕೋಟಿ ಕೊಡುತ್ತೇವೆ ಅಂತಿದ್ದಾರೆ. ಬಕಾಸುರನ ಹೊಟ್ಟೆಗೆ ಅರೇಕಾಸಿನ ಮಜ್ಜಿಗೆ ಆಗುತ್ತದೆ. 3ನೇ ಹಂತ ಅತ್ಯಂತ ನಿಧಾನವಾಗಿ ಸಾಗುತ್ತಿದೆ. ಇದೇ ರೀತಿ ಆದರೆ, 150 ವರ್ಷ ಆದರೂ ಆಗಲ್ಲ. ಮುಳುಗಡೆ ಆಗುವ ಜನರಿಗೆ ಬೇರೆ ಕಡೆಗೆ ಪುನರ್ವಸತಿ ಆಗಬೇಕು. ಉದ್ಯೋಗ ಕಳೆದುಕೊಳ್ಳುವ ಜನರಿಗೆ ಬೇರೆ ಉದ್ಯೋಗ ಸಿಗಲ್ಲ. ಈ ಬಗ್ಗೆ ಹಿಂದೆ ಕಾಂಗ್ರೆಸ್ಸಿನವರು ಪಾದಯಾತ್ರೆ ಮಾಡಿದ್ದರು. ಆದರೆ, ಭರವಸೆ ಈಡೇರಿಸಲಿಲ್ಲ. ಈಗ ಮತ್ತೆ ನೀವು ಅಧಿಕಾರಕ್ಕೆ ಬಂದಿದ್ದೀರಿ. ಈಗ ಸರ್ಕಾರ ಗ್ಯಾರಂಟಿ ಯೋಜನೆಗಳಂತೆ ಇದನ್ನು ಗ್ಯಾರಂಟಿ ತೆಗೆದುಕೊಂಡು ಒಂದು ಸಲ 25 ಸಾವಿರ ಕೋಟಿ ರು. ಪರಿಹಾರ ಕೊಟ್ಟು ಭೂಸ್ವಾಧೀನ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪೂಜಾರ ಗಮನ ಸೆಳೆದ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರು, ಬಿಜೆಪಿಗೆ ತಿರುಗೇಟು ನೀಡುವುದನ್ನು ಮರೆಯಲಿಲ್ಲ. ಈ ಯೋಜನೆ ಬಗ್ಗೆ ಹಿಂದಿನ ಸರ್ಕಾರಗಳು, ಇವರ ಸರ್ಕಾರ ಎಲ್ಲವೂ ಯುಕೆಪಿಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಬಹಳಷ್ಟುಪ್ರಯತ್ನ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇದನ್ನು ನೋಟಿಫಿಕೇಶನ್ ಸಹ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಆಂಧ್ರಕ್ಕೆ ನೀಡಿದ್ದ ಸಹಕಾರವನ್ನು ನಮ್ಮ ರಾಜ್ಯಕ್ಕೂ ನೀಡಿದ್ದರೆ ಕೃಷ್ಣಾ ಯೋಜನೆಗೂ ಒಂದು ರೂಪ ಸಿಗುತ್ತಿತ್ತು. ಕೇಂದ್ರದಿಂದ ಸಣ್ಣ ಸಹಕಾರವೂ ಸಿಗುತ್ತಿಲ್ಲ. ಈಗಲೂ ನಿಮಗೆ(ಬಿಜೆಪಿಯವರಿಗೆ) ಮನವಿ ಮಾಡುತ್ತೇನೆ. 26 ಜನ ಸಂಸದರು ಇದ್ದೀರಿ. ಹೋರಾಟ ಮಾಡಿ, ಕೇಂದ್ರದಿಂದ ಹಣ ತನ್ನಿ. ಎಲ್ಲ ಹಣವನ್ನು ನಿಮ್ಮ ಕೆಲಸಕ್ಕೆ ಬಳಕೆ ಮಾಡೋಣ. ನೀವು(ಉತ್ತರ ಕರ್ನಾಟಕ) ನಮಗೆ ಏನು ಆಗುತ್ತಿಲ್ಲ ಎಂದುಕೊಳ್ಳಬೇಡಿ. ಈಗ ಕಾವೇರಿಯಲ್ಲಿ ಹೆಚ್ಚುವರಿಯಾಗಿ ಒಂದು ಎಕರೆ ಕೂಡ ನೀರಾವರಿ ಮಾಡಲು ಆಗುತ್ತಿಲ್ಲ. ಆದರೆ, ನೀವೆಲ್ಲ ಭಾಗ್ಯಶಾಲಿಗಳು ಯುಕೆಪಿ ಬಂದಿದೆ. ಸ್ವಲ್ಪ ವಿಳಂಬ ಆಗುತ್ತಿದೆ. ಹೀಗಾಗಿ ನೀವು ಸಹ(ಬಿಜೆಪಿ) ರಾಜಕೀಯ ಬದ್ಧತೆ ತೋರಿಸಿ, ನೀವೆಲ್ಲ ಸೇರಿ ರಾಷ್ಟ್ರೀಯ ಯೋಜನೆ ಮಾಡಿಕೊಡಿ, ಹಣ ತೆಗೆದುಕೊಂಡು ಬನ್ನಿ. ಯೋಜನೆಯ ಭೂಸ್ವಾಧೀನಕ್ಕೆ ಅಗತ್ಯ ಇರುವ ಹಣವನ್ನು ಕೊಡಬೇಕು. ಈಗ ನಮ್ಮ ಸರ್ಕಾರ ಸಹ ಈ ಸಲ ಹತ್ತು ಸಾವಿರ ಕೋಟಿ ರು. ಹಂಚಿಕೆ ಮಾಡಿದೆ. ಇದರಲ್ಲಿ ಬೇರೆ ಬೇರೆ ಯೋಜನೆಗಳೂ ಹಂಚಿಕೆ ಮಾಡಬೇಕಿದೆ. ಅದಾಗ್ಯೂ ಸಹ ನಮ್ಮ ಸರ್ಕಾರ ಆದ್ಯತೆ ಮೇರಿಗೆ ರೈತರಿಗೆ ಪರಿಹಾರ ಧನ ಕೊಟ್ಟು ಭೂಸ್ವಾಧೀನ ಮಾಡಿಕೊಳ್ಳಲಿದೆ ಎಂದರು.