
ಬೆಂಗಳೂರು: ನಗರದ ಕೋರಮಂಗಲದಲ್ಲಿ ಆಗಸ್ಟ್ 29 ರಂದು ಆಯೋಜಿಸಲಾಗಿದ್ದ ವಿವಾದಾತ್ಮಕ 'ಪೆಪ್ಟೈಡ್ ಪಾರ್ಟಿ'ಯನ್ನು ರದ್ದುಗೊಳಿಸಲಾಗಿದೆ ಎಂದು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಶುಕ್ರವಾರ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪಾರ್ಟಿಯಲ್ಲಿ ಭಾಗವಹಿಸಿಸಲು ಅನೇಕರು ತಮ್ಮ ಹೆಸರು ನೋಂದಾವಣೆ ಮಾಡಿದ್ದರು. ಪೆಪ್ಟೈಡ್ ಉತ್ಪನ್ನಗಳ ಬಳಕೆ ಮತ್ತು ವಿತರಿಸಲು ಈ ಕಾರ್ಯಕ್ರಮದಲ್ಲಿ ತೀರ್ಮಾನ ಮಾಡಲಾಗಿತ್ತು
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಕಾರ್ಯಕ್ರಮವನ್ನು 'ಅಪ್‌ಸರ್ಜ್ ಲ್ಯಾಬ್ಸ್' ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಅನುಷ್ಕಾ ಸಿಂಗ್ ಆಯೋಜಿಸಿದ್ದರು. ಭಾರತದ ಮೊದಲ ಪೆಪ್ಟೈಡ್ ಪಾರ್ಟಿ ಎಂದು ಪ್ರಚಾರ ಮಾಡಿದ್ದ ಅವರು, "ಪೆಪ್ಟೈಡ್‌ಗಳ ಅಭಿರುಚಿ, ಸಂಗೀತ, ಆಹಾರ ಮತ್ತು ಆಟಗಳು ಇಲ್ಲಿರಲಿವೆ. 50 ಜನರಿಗೆ ಮಾತ್ರ ಪ್ರವೇಶವಿದ್ದು, ಇದೊಂದು ಆಸ್ಪತ್ರೆಯಲ್ಲ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಈ ಪೋಸ್ಟ್ ವೈದ್ಯರು ಸೇರಿದಂತೆ ಸಾರ್ವಜನಿಕರ ತೀವ್ರ ಕಳವಳಕ್ಕೆ ಕಾರಣವಾಯಿತು. ನಿಯಂತ್ರಣವಿಲ್ಲದ ಸ್ಥಳಗಳಲ್ಲಿ ಪೆಪ್ಟೈಡ್ ಬಳಕೆಯ ಅಪಾಯಗಳ ಕುರಿತು ಆರೋಗ್ಯ ತಜ್ಞರು ಎಚ್ಚರಿಸಿದ ಬೆನ್ನಲ್ಲೇ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FSDA) ತನಿಖೆಗೆ ಮುಂದಾಯಿತು.
ವಿಚಾರಣೆ ನಡೆಸಿದ ಎಫ್‌ಡಿಎ, ಕಾರ್ಯಕ್ರಮದಲ್ಲಿ ಪ್ರಚಾರ ಮಾಡಲು ಅಥವಾ ವಿತರಿಸಲು ಉದ್ದೇಶಿಸಿದ್ದ ಪೆಪ್ಟೈಡ್‌ಗಳ ಬಗ್ಗೆ ಸಂಪೂರ್ಣ ವಿವರ ಕೋರಿ ಅಪ್‌ಸರ್ಚ್ ಲ್ಯಾಬ್ಸ್ ಎಲ್‌ಎಲ್‌ಪಿ ಸಂಸ್ಥೆಗೆ ಮತ್ತು ಆಯೋಜಕರಿಗೆ ನೋಟಿಸ್ ನೀಡಿತು.
ಇವುಗಳ ಸಂಯೋಜನೆ, ಡೋಸೇಜ್, ತಯಾರಕರು, ಬ್ಯಾಚ್ ಸಂಖ್ಯೆ ಹಾಗೂ ಇವು ತನಿಖಾ ಹಂತದ ಔಷಧಿಗಳೇ ಅಥವಾ ಅನುಮೋದಿತ ಉತ್ಪನ್ನಗಳೇ ಎಂಬುದನ್ನು ಸ್ಪಷ್ಟಪಡಿಸಲು, ತೂಕ ನಷ್ಟ, ಸ್ನಾಯುಗಳ ಬೆಳವಣಿಗೆ, ವಯಸ್ಸಾಗುವಿಕೆ ತಡೆಯುವಿಕೆ, ಮಧುಮೇಹ ಹಾಗೂ ಅಥ್ಲೆಟಿಕ್ ಸಾಮರ್ಥ್ಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೀಡಲಾದ ಚಿಕಿತ್ಸಕ ಹಕ್ಕುಗಳಿಗೆ ವೈಜ್ಞಾನಿಕ ಪುರಾವೆ ಒದಗಿಸುವಂತೆ ಇಲಾಖೆ ದಾಖಲೆ ನೀಡುವಂತೆ ಸೂಚಿಸಿದೆ.
ಈ ಉತ್ಪನ್ನಗಳನ್ನು ಉಚಿತವಾಗಿ ನೀಡಲಾಗುತ್ತಿದೆಯೇ ಅಥವಾ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತಿದೆಯೇ ಎಂದು ಕೇಳಿರುವ ಇಲಾಖೆ, ಸ್ಥಳದಲ್ಲಿದ್ದ ವೈದ್ಯಕೀಯ ಮೇಲ್ವಿಚಾರಣೆ, ಆರೋಗ್ಯ ವೃತ್ತಿಪರರ ವಿವರ ಹಾಗೂ ತುರ್ತು ವ್ಯವಸ್ಥೆಗಳ ಬಗ್ಗೆ ವಿವರಣೆ ಕೋರಿದೆ. ಒಂದು ವೇಳೆ ಇವುಗಳನ್ನು 'ಆಹಾರ ಪೂರಕಗಳು' (Health Supplements) ಎಂದು ಪ್ರತಿಪಾದಿಸಿದರೆ, ಸೂಕ್ತ FSSAI ದಾಖಲೆಗಳನ್ನು ಸಲ್ಲಿಸಲು ತಿಳಿಸಿದೆ. ಇಲಾಖೆಯ ನೋಟಿಸ್ ಬೆನ್ನಲ್ಲೇ ಕಾರ್ಯಕ್ರಮದ ಆಯೋಜಕರಾದ ಅಪ್‌ಸರ್ಜ್ ಲ್ಯಾಬ್ಸ್ ಎಲ್‌ಎಲ್‌ಪಿಯ ಅಧಿಕೃತ ಪ್ರತಿನಿಧಿಗಳು ಈವೆಂಟ್ ರದ್ದುಗೊಳಿಸಿರುವುದಾಗಿ ತಿಳಿಸಿದ್ದು, ಅಗತ್ಯ ದಾಖಲೆಗಳನ್ನು ನೀಡಲು ಮತ್ತು ವಿವರಣೆಗೆ ಕಾಲಾವಕಾಶ ಕೇಳಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಅಪ್‌ಸರ್ಜ್ ಲ್ಯಾಬ್ಸ್ ಸಂಸ್ಥಾಪಕ ಸೌಮ್ಯ ಜೈನ್, "ಇದು ಕೇವಲ ಶೈಕ್ಷಣಿಕ ಉದ್ದೇಶದ ಸಭೆಯಾಗಿತ್ತು. ಇಲ್ಲಿ ಯಾವುದೇ ಇಂಜೆಕ್ಷನ್‌ಗಳಾಗಲಿ, ಔಷಧಿಗಳ ಮಾರಾಟವಾಗಲಿ ಅಥವಾ ಪ್ರಿಸ್ಕ್ರಿಪ್ಷನ್‌ಗಳಾಗಲಿ ಇರಲಿಲ್ಲ. ಎಫ್‌ಡಿಎ ನಿಯಂತ್ರಣಗಳನ್ನು ನಾವು ಗೌರವಿಸುತ್ತೇವೆ. ಜೈವಿಕ ತಂತ್ರಜ್ಞಾನ (Biotech) ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿರಬೇಕು ಎಂಬುದು ನಮ್ಮ ಉದ್ದೇಶ. ನಿಯಂತ್ರಕರ ನಿಯಮಾವಳಿಗಳಿಗೆ ಬದ್ಧರಾಗಿ, ಅವರೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ" ಎಂದು ಹೇಳಿದ್ದಾರೆ. ಸದ್ಯಕ್ಕೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಸಾರ್ವಜನಿಕರು ಈ ವಿಷಯವನ್ನು ಗಮನಿಸಬೇಕೆಂದು ಎಫ್‌ಡಿಎ ಮನವಿ ಮಾಡಿದೆ.