ಆಲಮಟ್ಟಿ-ಯಾದಗಿರಿ ನಡುವಿನ 162 km ರೈಲು ಮಾರ್ಗ: ಗರಿಗೆದರಿದ ನಿರೀಕ್ಷೆ; ಟೆಂಡರ್ ಆಹ್ವಾನ

Published : Aug 29, 2026, 10:22 AM IST
Almatti yadagiri

ಸಾರಾಂಶ

ಆಲಮಟ್ಟಿಯಿಂದ ಯಾದಗಿರಿವರೆಗಿನ 162 ಕಿ.ಮೀ. ರೈಲ್ವೆ ಮಾರ್ಗದ ಸರ್ವೇ ಕಾರ್ಯಕ್ಕೆ ಟೆಂಡರ್ ಕರೆದಿರುವುದು ದಶಕಗಳ ಬೇಡಿಕೆಗೆ ಮರುಜೀವ ನೀಡಿದೆ. ಈ ಯೋಜನೆಯು ಕೇವಲ ಪ್ರಯಾಣವನ್ನು ಸುಲಭಗೊಳಿಸದೆ, ವಿಜಯಪುರ-ಯಾದಗಿರಿ ಭಾಗದ ಆರ್ಥಿಕ, ಸಾಮಾಜಿಕ, ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.

ಪ್ರವೀಣ್ ಘೋರ್ಪಡೆ

ವಿಜಯಪುರ: ಆಲಮಟ್ಟಿಯಿಂದ ಯಾದಗಿರಿವರೆಗೆ ಸುಮಾರು 162 ಕಿ.ಮೀ. ಉದ್ದದ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯಕ್ಕೆ ಟೆಂಡರ್ ಕರೆದಿರುವುದು ವಿಜಯಪುರ-ಯಾದಗಿರಿ ಭಾಗದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ದಶಕಗಳಿಂದ ಈ ಭಾಗದ ಜನರ ಬೇಡಿಕೆಯಾಗಿದ್ದ ರೈಲ್ವೆ ಸಂಪರ್ಕದ ಬೇಡಿಕೆ ಸಾಕಾರಗೊಂಡರೆ, ಕೇವಲ ಪ್ರಯಾಣದ ಸೌಲಭ್ಯ ಹೆಚ್ಚುವುದಷ್ಟೇ ಅಲ್ಲದೆ, ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಹೊಸ ವೇಗ ದೊರೆಯಲಿದೆ. ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಆಲಮಟ್ಟಿ, ನಿಡಗುಂದಿ, ಬ.ಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ, ಸುರಪುರ, ಶಹಾಪುರ, ವಡಗೇರಾ, ಯಾದಗಿರಿಗೆ ಸಂಪರ್ಕ ಕಲ್ಪಿಸಲಿದ್ದು, ಇದರ ಮಧ್ಯೆ ಬರುವ ನೂರಾರು ಗ್ರಾಮಗಳ ಜನರಿಗೆ ಅನಕೂಲವಾಗಲಿದೆ, ವಿಜಯಪುರ, ಯಾದಗಿರಿ, ಕಲಬುರಗಿ, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಪ್ರಮುಖ ನಗರಗಳಿಗೆ ಪ್ರಯಾಣಿಸಲು ಸುಲಭವಾಗಲಿದೆ.

ರೈತರ-ವ್ಯಾಪಾರ-ವಾಣಿಜ್ಯಕ್ಕೆ ಉತ್ತೇಜನ

ವಿಜಯಪುರ ಜಿಲ್ಲೆಯು ಕೃಷಿ ಪ್ರಧಾನವಾಗಿದ್ದು, ವಿವಿಧ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಸಾಗಣೆ ವೆಚ್ಚ ನಿಯಂತ್ರಿಸಲು ಸಹಾಯವಾಗಲಿದೆ. ವ್ಯಾಪಾರ-ವಾಣಿಜ್ಯಕ್ಕೆ ಉತ್ತೇಜನ ಸಿಗಲಿದೆ ರೈಲು ಮಾರ್ಗ ನಿರ್ಮಾಣವಾದ ಬಳಿಕ ಮಾರ್ಗದ ಪಟ್ಟಣಗಳಲ್ಲಿ ವ್ಯಾಪಾರ ಚಟುವಟಿಕೆಗಳು ಮತ್ತು ವ್ಯಾಪಾರಿಗಳು ರಾಜ್ಯದ ವಿವಿಧ ಭಾಗಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ.

ಹೊಸ ಗೋದಾಮುಗಳು, ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು, ಸಣ್ಣ ಕೈಗಾರಿಕೆಗಳು ಹಾಗೂ ಇತರ ವ್ಯಾಪಾರಿಕ ಚಟುವಟಿಕೆಗಳು ಬೆಳೆಯಲು ರೈಲು ಸಂಪರ್ಕ ಪೂರಕ ವಾತಾವರಣ ಸೃಷ್ಟಿಸಲಿದೆ. ಜೊತೆಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವದರೊಂದಿಗೆ ಕಚ್ಚಾ ವಸ್ತುಗಳ ಸಾಗಣೆ ಮತ್ತು ತಯಾರಾದ ಉತ್ಪನ್ನಗಳ ವಿತರಣೆಗೆ ಅನುಕೂಲವಾಗಲಿದೆ. ಇದರಿಂದ ಭವಿಷ್ಯದಲ್ಲಿ ಕೈಗಾರಿಕೆಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸ್ಥಾಪನೆಗೊಳ್ಳಲಿವೆ. ಕೈಗಾರಿಕಾ ಚಟುವಟಿಕೆಗಳು ಹೆಚ್ಚಾದಂತೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳ ವಿಸ್ತರಣೆ

ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೈಸೂರ, ಬೆಂಗಳೂರು ಸೇರಿ ದೂರದ ನಗರಗಳಿಗೆ ತೆರಳುತ್ತಾರೆ. ರೈಲು ಸಂಪರ್ಕ ದೊರೆತರೆ ವಿದ್ಯಾರ್ಥಿಗಳ ಪ್ರಯಾಣ ಹೆಚ್ಚು ಸುಲಭವಾಗಲಿದೆ. ವಿಶ್ವವಿದ್ಯಾಲಯಗಳು, ವೃತ್ತಿಪರ ಕಾಲೇಜುಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳು ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಆರೋಗ್ಯ ಸೇವೆಗಳಿಗೂ ಅನುಕೂಲ

ಗ್ರಾಮೀಣ ಭಾಗದ ಜನರು ತುರ್ತು ಹಾಗೂ ವಿಶೇಷ ವೈದ್ಯಕೀಯ ಸೇವೆಗಳಿಗಾಗಿ ದೊಡ್ಡ ನಗರಗಳನ್ನು ಅವಲಂಬಿಸಬೇಕಾಗುತ್ತದೆ. ಉತ್ತಮ ರೈಲು ಸಂಪರ್ಕ ದೊರೆತರೆ ಪ್ರಮುಖ ನಗರಗಳ ಆಸ್ಪತ್ರೆಗಳಿಗೆ ತೆರಳುವುದು ಸುಲಭವಾಗಲಿದೆ ಅಲ್ಲದೇ ವಿಶೇಷವಾಗಿ ವಯೋವೃದ್ಧರು, ರೋಗಿಗಳು ಹಾಗೂ ಅವರ ಕುಟುಂಬದವರಿಗೆ ದೂರದ ಪ್ರಯಾಣದಲ್ಲಿ ರೈಲು ಸಾರಿಗೆ ನೆರವಾಗಲಿದೆ.

ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಉತ್ತೇಜನ

ವಿಜಯಪುರ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಲು ರೈಲು ಸಂಪರ್ಕ ಸಹಕಾರಿಯಾಗಲಿದೆ ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಹೋಟೆಲ್, ಸಾರಿಗೆ, ಸ್ಥಳೀಯ ವ್ಯಾಪಾರ ಹಾಗೂ ಪ್ರವಾಸೋದ್ಯಮ ಆಧಾರಿತ ಉದ್ಯೋಗಗಳಿಗೆ ಉತ್ತೇಜನ ದೊರೆಯಲಿದೆ.

ಬೆಳವಣಿಗೆಗೆ ಹೊಸ ಅವಕಾಶ

ರೈಲು ನಿಲ್ದಾಣಗಳು ನಿರ್ಮಾಣವಾಗುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ವ್ಯಾಪಾರ, ವಸತಿ ಹಾಗೂ ಸೇವಾ ಕ್ಷೇತ್ರಗಳ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಮಾರ್ಗದ ಪ್ರಮುಖ ಪಟ್ಟಣಗಳು ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ಅವಕಾಶ ಸಿಗಲಿದೆ. ರೈಲು ಸಂಪರ್ಕವು ಕೇವಲ ಎರಡು ಸ್ಥಳಗಳನ್ನು ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯಲ್ಲ; ಅದು ಗ್ರಾಮೀಣ ಪ್ರದೇಶಗಳನ್ನು ದೊಡ್ಡ ಮಾರುಕಟ್ಟೆ, ಶಿಕ್ಷಣ ಕೇಂದ್ರಗಳು, ಉದ್ಯೋಗ ಕೇಂದ್ರಗಳು ಹಾಗೂ ಆರೋಗ್ಯ ಸೇವೆಗಳೊಂದಿಗೆ ಜೋಡಿಸುವ ಅಭಿವೃದ್ಧಿಯ ಕೊಂಡಿಯಾಗಲಿದೆ.

ಪ್ರಾದೇಶಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆ:

ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಗೊಂಡರೆ ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ನಡುವೆ ಸಾರಿಗೆ ಸಂಪರ್ಕ ಬಲಪಡಿಸುವುದರ ಜೊತೆಗೆ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ದಶಕಗಳಿಂದ ಜನರ ಬೇಡಿಕೆಯಾಗಿದ್ದ ಈ ಯೋಜನೆಯ ಸರ್ವೇ ಕಾರ್ಯಕ್ಕೆ ೪.೫ ಕೋಟಿ ರೂ. ಟೆಂಡರ್ ಕರೆಯಲಾಗಿರುವುದು ಮೊದಲ ಹಂತದ ಮಹತ್ವದ ಬೆಳವಣಿಗೆಯಾಗಿದೆ. ಸರ್ವೇ, ಭೂಸ್ವಾಧೀನ ಸೇರಿದಂತೆ ಮುಂದಿನ ಪ್ರಕ್ರಿಯೆಗಳು ವೇಗವಾಗಿ ಪೂರ್ಣಗೊಂಡು ಯೋಜನೆ ಕಾಮಗಾರಿಗೆ ೪೫೦೦ ಕೋಟಿ ವೆಚ್ಚ ತಗುಲಿದೆ ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯ ರೈಲ್ವೆ ಮಂತ್ರಿಗಳೊಂದಿಗೆ ಸತತ ಸಂಪರ್ಕದೊಂದಿಗೆ ಮುನ್ನೇಜ್ಜೆ ಇಡಲಾಗಿದೆ ಎಂದು ಸಂಸದ ರಮೇಶ ಜಿಗಜಿನ್ನಿ ಅವರು ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡರು.

ಬ್ರೀಟಿಷರ ಕಾಲದಲ್ಲಿಯೇ ಪ್ರಯತ್ನ

ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗದ ಯೋಜನೆಗೆ 1924ರಲ್ಲಿ ಬ್ರಿಟಿಷರ ಕಾಲದಲ್ಲೇ ಈ ಯೋಜನೆಗೆ ಚಾಲನೆ ಸಿಕ್ಕು ಪ್ರಾಥಮಿಕ ಪ್ರಯತ್ನಗಳು ನಡೆದಿರುವದು ಸಾಕಷ್ಟು ಕುರುಹುಗಳು ಲಭ್ಯವಿದ್ದು ನಂತರ ಕಾಮಗಾರಿಯು ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ. ಪ್ರಸ್ತುತ ಪ್ರಸ್ತಾವಿತ ಸುಮಾರು 162 ಕಿ.ಮೀ. ಮಾರ್ಗವು ಆಲಮಟ್ಟಿ-ನಿಡಗುಂದಿ-ಬಸವನಬಾಗೇವಾಡಿ-ಮುದ್ದೇಬಿಹಾಳ- ತಾಳಿಕೋಟೆ-ಹುಣಸಗಿ-ಸುರಪೂರ-ಶಹಾಪುರ-ವಡಗೇರಾ-ಯಾದಗಿರಿಗೆ ನೇರ ಸಂಪರ್ಕ ಕಲ್ಪಿಸುವ ಯೋಜನೆಯಾಗಿದ್ದು, 2002ರ ಲೋಕಸಭೆಯ ಅಧಿಕೃತ ಉತ್ತರದಲ್ಲಿಯೂ ಹೊಸ ರೈಲು ಮಾರ್ಗದ ಯೋಜನೆ ಪಟ್ಟಿಯಲ್ಲಿ ದಾಖಲಾಗಿತ್ತು. ನಂತರ 2011-12ರಲ್ಲಿ 160 ಕಿ.ಮೀ. ಮಾರ್ಗದ ಸರ್ವೇ ಪೂರ್ಣಗೊಂಡಿರುವುದಾಗಿ ಭಾರತೀಯ ರೈಲ್ವೆಯ ದಾಖಲೆ ಹೇಳುತ್ತದೆ. ಆದರೆ ಅಂದಿನ ಈಗೀನ ಸರ್ವೆ ಕಾರ್ಯದಿಂದ ತಗಲುವ ವೆಚ್ಚದಲ್ಲಿ ಗಮನಾರ್ಹ ಬದಲಾವಣೆಗೊಳ್ಳಲಿರುವದರಿಂದ ಮರು ಡಿಪಿಆರ್ ತಯಾರಿಕೆಗೆ 4.5 ಕೋಟಿ ರೂ. ಟೆಂಡರ್ ಅಹ್ವಾನಿಸಲಾಗಿರುವದು ಈ ಯೋಜನೆಯ ಕನಸ್ಸಿನ ಹೊಸ್ತಿಲಲ್ಲಿದ್ದ ಜನರಿಗೆ ಮರು ಚೈತನ್ಯ ನೀಡಿದಂತಾಗಿದೆ.

ಆಲಮಟ್ಟಿ ಯಾದಗಿರಿ ರೈಲು ಮಾರ್ಗಕ್ಕಾಗಿ ತಾಳಿಕೋಟೆಯ ಆರ್.ಎಸ್.ಪಾಟೀಲ(ಕೂಚಬಾಳ) ಅವರು ನನ್ನನ್ನು ಬೆಂಬಿಡದೇ ಯೋಜನೆ ಸಾಕಾರವಾಗಬೇಕೆನ್ನುತ್ತಿದ್ದರು ಎಲ್ಲ ಜನರ ಅಪೇಕ್ಷೆಯಂತೆ ಕೇಂದ್ರ ರೈಲ್ವೆ ಮಂತ್ರಿಗಳಿಗೆ ಹತ್ತಾರು ಭಾರಿ ಬೆಟ್ಟಿಯಾಗಿ ಒತ್ತಾಯ ಮಾಡಿದ್ದರಿಂದ 4.5 ಕೋಟಿ ರೂ. ಸರ್ವೇ ಕಾರ್ಯಕ್ಕೆ ಟೆಂಡರ್ ಕರೆಯಲಾಗಿದೆ. ಈ ಸರ್ವೇ ಕಾರ್ಯ ಬೇಗನೆ ಮುಗಿಸಿ ಕಾಮಗಾರಿ ಪ್ರಾರಂಭಕ್ಕೆ ಮುಂದಾಗಲಾಗುವುದು ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

ಆಲಮಟ್ಟಿ-ಯಾದಗಿರಿ ರೈಲು ಯೋಜನೆ ನೂರ ವರ್ಷಗಳ ಕನಸ್ಸಾಗಿ ಉಳಿದಿತ್ತು ಸಂಸದ ರಮೇಶ ಜಿಗಜಿಣಗಿ ಅವರು, ರೈಲ್ವೇ ರಾಜ್ಯ ಸಚೀವ ವ್ಹಿ.ಸೋಮಣ್ಣ ಅವರಿಗೆ ಕೇಂದ್ರ ರೈಲ್ವೇ ಸಚೀವರ ಮೇಲೆ ಯೋಜನೆಯ ಕಾರ್ಯರೂಪಕ್ಕಾಗಿ ಒತ್ತಡ ಹಾಕಿದ್ದರ ಪರಿಣಾಮ ಸರ್ವೇ ಕಾರ್ಯಕ್ಕೆ 4.5 ಕೋಟಿ ರೂ. ಹಣಬಿಡುಗಡೆಗೊಳಿಸಿ ಟೆಂಡರ್ ಕರೆಯಲಾಗಿದೆ ಈ ಯೋಜನೆ ಕಾರ್ಯರೂಪಗೊಂಡರೆ ಎಲ್ಲ ಕ್ಷೇತ್ರಗಳು ಅಭಿವೃದ್ದಿ ಪಥದತ್ತ ಮುನ್ನಡೆಯಲಿವೆ. ದಶಕಗಳಿಂದ ಎಲ್ಲ ಜನರು ನಡೆಸಿದ ಹೋರಾಟಕ್ಕೆ ಜಯಸಿಕ್ಕಂತಾಗಿದೆ ಎಂದು ರೈಲ್ವೆ ಹೋರಾಟ ಸಮಿತಿಯ ಸಂಚಾಲಕರಾದ ಆರ್.ಎಸ್.ಪಾಟೀಲ ಹೇಳುತ್ತಾರೆ.

PREV
Read more Articles on
click me!

Recommended Stories

ಪರ್ತಗಾಳಿ ಶ್ರೀರಾಮನ ಕಂಚಿನ ಪ್ರತಿಮೆಗೆ ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗರಿ
ಅನುಮೋದನೆ ಸಿಕ್ಕರೂ ಗದಗ-ಯಲವಿಗಿ ರೈಲು ಮಾರ್ಗದ ಯೋಜನೆ ವಿಳಂಬಕ್ಕೆ ಕಾರಣ ಏನು? ಮನವಿ ಸಲ್ಲಿಕೆ