
ಬೆಂಗಳೂರು(ಜು.11): ನಗರದ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕಸ ಸುರಿಯುವುದು ತಡೆಗಟ್ಟಲು, ರಸ್ತೆ ಗುಂಡಿ, ಬೀದಿ ದೀಪಗಳ ಬಗ್ಗೆ ನಿಗಾ ವಹಿಸುವುದಕ್ಕೆ ಪ್ರತ್ಯೇಕ ಸ್ಕ್ವಾಡ್ ರಚಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಚಾರಿ ಮಾರ್ಗ ಮತ್ತು ರಸ್ತೆಗಳಲ್ಲಿ ಅನಧಿಕೃತವಾಗಿ ಕಸ ಸುರಿಯುವುದು, ಬ್ಲಾಕ್ ಸ್ಪಾಟ್, ರಸ್ತೆ ಗುಂಡಿ ಹಾಗೂ ಬೀದಿ ದೀಪಗಳ ಬಗ್ಗೆ ನಿಗಾ ವಹಿಸುವುದಕ್ಕೆ ಮಾರ್ಷಲ್ ಹಾಗೂ ಬಿಬಿಎಂಪಿ ವಿವಿಧ ವಿಭಾಗದ ಅಧಿಕಾರಿಗಳನ್ನು ಒಳಗೊಂಡಂತೆ ಸ್ಕ್ವಾಡ್ ತಂಡ ರಚನೆ ಮಾಡಲಾಗುವುದು. ಪ್ರಾಯೋಗಿಕವಾಗಿ ಒಂದು ವಲಯದಲ್ಲಿ ಈ ವ್ಯವಸ್ಥೆ ಅನುಷ್ಠಾನ ಮಾಡಲಾಗುವುದು. ನಂತರ ಉಳಿದ ವಲಯದಲ್ಲಿ ರಚನೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್‌ಗಳ ಮೇಲೆ ಬಿಬಿಎಂಪಿ ಅಧಿಕಾರಿಗಳಿಂದ ನಿಗಾ
ಬಿಬಿಎಂಪಿಯ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕಸ ವಿಲೇವಾರಿ ಮಾಡುವ ಲಾರಿಗಳ ಬಗ್ಗೆ ನಿಗಾ ವಹಿಸಲಾಗುವುದು. ಇನ್ನು ಅನಧಿಕೃತ ವಾಹನಗಳು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ತಂದು ಸುರಿಯುತ್ತಿರುವುದು. ನಿಗದಿತ ಲಾರಿಗಳು ಸಂಸ್ಕರಣಾ ಘಟಕಕ್ಕೆ ತ್ಯಾಜ್ಯ ತೆಗೆದುಕೊಂಡ ಬರದೇ, ರಸ್ತೆ ಹಾಗೂ ಇನ್ನಿತರ ಸ್ಥಳದಲ್ಲಿ ಕಸ ಸುರಿದು ಹೋಗುವ ಬಗ್ಗೆ ನಿಗಾ ವಹಿಸುವುದಕ್ಕೆ ಕ್ರಮ ಕೈಗೊಳ್ಳುವುದಕ್ಕೆ ನಿರ್ಧರಿಸಲಾಗಿದೆ ಎಂದರು.
ಕಸದಿಂದ ವಿದ್ಯುತ್ ಉತ್ಪಾದನೆ ಸ್ಥಗಿತ
ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಅದನ್ನು ನಿಲ್ಲಿಸಲಾಗುವುದು. ಸಿಎನ್‌ಜಿ ಅನಿಲ ಸೇರಿದಂತೆ ಬೇರೆ ಯಾವ ರೀತಿ ತ್ಯಾಜ್ಯ ಸಂಸ್ಕರಣಾ ಮಾಡಬಹುದು ಎಂಬುವುರ ಬಗ್ಗೆ ಸಾಧಕ ಬಾಧಕದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ನಂತರ ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು. ಇನ್ನು ತ್ಯಾಜ್ಯದಿಂದ ಉತ್ಪಾದನೆ ಆಗುವ ಗೊಬ್ಬರವನ್ನು ಬೇರೆ ಕಡೆ ಮಾರಾಟ ಮಾಡುವ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.