ಕೊಡಗು ಜಿಲ್ಲೆಯಲ್ಲಿ ತಗ್ಗಿದ ವರುಣನ ಅಬ್ಬರ : ಚುರುಕುಗೊಂಡ ಕೃಷಿ ಚಟುವಟಿಕೆ

By Sathish Kumar KH  |  First Published Jul 10, 2023, 10:01 PM IST

ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದ ವರುಣನ ಆರ್ಭಟ ಎರಡು ದಿನಗಳಿಂದ ತಗ್ಗಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. 


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್  ಸುವರ್ಣ ನ್ಯೂಸ್
ಕೊಡಗು (ಜು.10):  ಜೂನ್ ತಿಂಗಳು ಮುಗಿಯುತ್ತಾ ಬಂದರೂ ಮಲೆನಾಡು ಜಿಲ್ಲೆ ಕೊಡಗಿಗೆ ಕಾಲಿಡದೆ ಇದ್ದ ವರುಣನ ಅವಕೃಪೆಯಿಂದ ಬರಗಾಲದ ಪರಿಸ್ಥಿತಿ ಇತ್ತು. ಆದರೀಗ ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. 

ಹೌದು ಕಾಫಿ ಬಿಟ್ಟರೆ ಭತ್ತದ ಬೆಳೆಯನ್ನೇ ಹೆಚ್ಚು ಬೆಳೆಯುವ ಜಿಲ್ಲೆಯಲ್ಲಿ ಈ ವರ್ಷ ಮಳೆ ಬಾರದೆ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿತ್ತು. ಇದೀಗ ಉತ್ತಮ ಮಳೆ ಬಂದಿರುವುದರಿಂದ ಒಂದೆಡೆ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಮೈದುಂಬಿ ಹರಿಯುತ್ತಿದ್ದರೆ, ಮತ್ತೊಂದೆಡೆ ಗದ್ದೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ಭತ್ತ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಜೂನ್ ತಿಂಗಳಲ್ಲಿ ಆಗೊಮ್ಮೆ, ಈಗೊಮ್ಮೆ ಸುರಿದಿದ್ದ ಮಳೆಗೆ ಉಳುಮೆ ಮಾಡಿ ಬಿಟ್ಟಿದ್ದ ರೈತರು ಕಳೆದ ಒಂದು ವಾರದಿಂದ ಸುರಿದಿರುವ ಮಳೆಗೆ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. 

Latest Videos

undefined

WEATHER FORECAST: ದಕ್ಷಿಣ ಕನ್ನಡ, ಕೊಡಗಿಗೆ ಬ್ರೇಕ್‌ ನೀಡಿದ ಮಳೆ

ಭತ್ತದ ಮಡಿಗಳ ನಿರ್ಮಾಣ: ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿದ್ದ ಮಳೆ ಇದೀಗ ಎರಡು ದಿನದಿಂದ ಬಹುತೇಕ ತಗ್ಗಿದ್ದು ಬಿತ್ತನೆ ಕಾರ್ಯವನ್ನು ರೈತರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಬಹುತೇಕ ರೈತರು ಭತ್ತದ ಅಗೆ ಅಥವಾ ಮಡಿಗಳನ್ನು ಮಾಡುತ್ತಿದ್ದಾರೆ. ಇನ್ನು ಜೂನ್ ತಿಂಗಳಲ್ಲಿ ಉಳುವೆ ಮಾಡಲಾಗದೆ ಬಿಟ್ಟಿದ್ದ ರೈತರು ಈಗ ಟಿಲ್ಲರ್ಗಳನ್ನು ಬಳಸಿ ಉಳುವೆ ಮಾಡುತ್ತಿದ್ದರೆ, ಉಳುಮೆ ಮಾಡಿದ್ದ ರೈತರು ಗದ್ದೆಗಳ ತೆವರು ಕಡಿದು ಗದ್ದೆಗಳನ್ನು ಹದಗೊಳಿಸುತ್ತಿದ್ದಾರೆ. ವಿವಿಧ ತಳಿಗಳ ಭತ್ತದ ಬೀಜಗಳನ್ನು ಬಿತ್ತುತ್ತಿದ್ದು ಮುಂದಿನ 25 ದಿನಗಳಲ್ಲಿ ಭತ್ತದ ಸಸಿಗಳು ನಾಟಿಗೆ ಸಿದ್ಧವಾಗಲಿವೆ. 

ಕಳೆದ ವರ್ಷ ಸಸಿ ನಾಟಿ ಆಗಿತ್ತು: ಸದ್ಯಕ್ಕೆ ಬಿತ್ತನೆಗೆ ಅಗತ್ಯದಷ್ಟು ಮಳೆ ಸುರಿದಿದ್ದು, ಪೂರ್ಣ ಬೆಳೆ ಪಡೆದುಕೊಳ್ಳಬೇಕಾದರೆ ಸಾಕಷ್ಟು ಮಳೆ ಬೇಕಾಗಿದೆ ಎನ್ನುತ್ತಾರೆ ರೈತರು. ಒಟ್ಟಿನಲ್ಲಿ ತಡವಾಗಿಯಾದರೂ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಬಿತ್ತನೆ ಕಾರ್ಯ ಶುರುವಾಗಿದ್ದು ರೈತರು ಬಿಡುವಿಲ್ಲದೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ವರ್ಷ ಇಷ್ಟೊತ್ತಿಗಾಗಲೇ ಸಾಕಷ್ಟು ಮಳೆ ಸುರಿದಿತ್ತು. ಹೀಗಾಗಿ ಈ ವೇಳೆಗೆ ಬಹುತೇಕ ಬಿತ್ತನೆ ಕಾರ್ಯ ಮುಗಿದು, ಸಸಿ ನಾಟಿ ಮಾಡುವ ಕಾರ್ಯಗಳು ನಡೆಯುತ್ತಿದ್ದವು. ಈ ವರ್ಷ ಈಗ ಬಿತ್ತನೆ ಕಾರ್ಯ ನಡೆಯುತ್ತಿರುವುದರಿಂದ ಫಸಲು ಪಡೆಯಲು ಇನ್ನು ಮೂರು ನಾಲ್ಕು ತಿಂಗಳು ರೈತರು ಕಾಯಬೇಕಾಗಿದೆ. 

ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್‌ ಆರೋಗ್ಯ ಏರುಪೇರು: ಜೀರೋ ಟ್ರಾಫಿಕ್‌ನಲ್ಲಿ ಆಸ್ಪತ್ರೆಗೆ ದಾಖಲು

ಕಡಿಮೆ ಅವಧಿಯಲ್ಲಿ ಕೊಯ್ಲಿಗೆ ಬರುವ ತಳಿ ಬಳಕೆ: ಗದ್ದೆಯಲ್ಲಿ ಬಿತ್ತನೆ ಕಾರ್ಯ ಮಾಡುತ್ತಿದ್ದ ಕಾರ್ಮಿಕ ನಾಗೇಶ್ ಮಾತನಾಡಿ ಕಳೆದ ವರ್ಷ ಇಷ್ಟೊತ್ತಿಗಾಗಲೇ ಬಿತ್ತನೆ ಕೆಲಸ ಮಾಡಿದ್ದೆವು. ಆದರೆ ಈ ಬಾರಿ ಮಳೆ ಸರಿಯಾದ ಸಮಯಕ್ಕೆ ಬಾರದ ಕಾರಣ ಬಿತ್ತನೆಗೆ ಈಗಾಗಲೇ 20 ದಿನಕ್ಕು ಹೆಚ್ಚು ಸಮಯ ತಡವಾಗಿದೆ. ಆದರೆ ಉತ್ತಮ ಮಳೆ ಬಂದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು 25 ದಿನಗಳಲ್ಲಿ ನಾಟಿ ಕೆಲಸ ನಡೆಯಲಿದೆ ಎಂದಿದ್ದಾರೆ. ರೈತ ನವೀನ್ ಅವರು ಮಾತನಾಡಿದ್ದು ಉತ್ತಮ ಫಸಲು ನೀಡುವಂತಹ ತಳಿಗಳನ್ನು ಬಿತ್ತನೆ ಮಾಡಿದ್ದೇವೆ. ಈ ವರ್ಷ ಮಳೆ ತಡವಾಗಿ ಆರಂಭವಾಗಿರುವುದರಿಂದ ಚಳಿಗಾಲ ಏನಾದರೂ ಬೇಗ ಆರಂಭವಾದರೆ ಫಸಲಿಗೆ ಸಮಸ್ಯೆ ಆಗಬಹುದು ಎನ್ನುವ ಆತಂಕವಿದೆ ಎನ್ನುತ್ತಾರೆ. ಕಳೆದ ವರ್ಷ ಈ ವೇಳೆಗಾಗಲೇ ಬರೋಬ್ಬರಿ 1281.69 ಮಿಲಿ ಮೀಟರ್ ಮಳೆ ಸುರಿದಿತ್ತು. ಆದರೆ ಈ ಬಾರಿ ಕೇವಲ 818. 51 ಮಳೆಯಾಗಿದೆ.

click me!