Udupi: ಸಾವರ್ಕರ್ ಬ್ಯಾನರ್ ಅಳವಡಿಕೆ ಹಿನ್ನೆಲೆ, ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾದ ಬ್ರಹ್ಮಗಿರಿ!

By Gowthami KFirst Published Aug 17, 2022, 5:06 PM IST
Highlights

ಉಡುಪಿಯ ಬ್ರಹ್ಮಗಿರಿಯಲ್ಲಿ ಹಾಕಲಾಗಿರುವ ಸಾವರ್ಕರ್ ಚಿತ್ರವಿರುವ ಬ್ಯಾನರ್ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಸಾವರ್ಕರ್ ಚಿತ್ರವುಳ್ಳ ಬ್ಯಾನರ್ ಹಾಕಿರುವುದನ್ನು ಕೆಲ ಕಾಂಗ್ರೆಸ್ ನಾಯಕರು ಮಂಗಳವಾರ ಪ್ರತಿಭಟನೆಯ ಮೂಲಕ ವಿರೋಧಿಸಿದ್ದರು.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಆ.17): ಉಡುಪಿಯ ಬ್ರಹ್ಮಗಿರಿಯಲ್ಲಿ ಹಾಕಲಾಗಿರುವ ಸಾವರ್ಕರ್ ಚಿತ್ರವಿರುವ ಬ್ಯಾನರ್ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಹಿಂದೂ ರಾಷ್ಟ್ರದ ಘೋಷಣೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿ ಈ ಬ್ಯಾನರ್ ಹಾಕಲಾಗಿದೆ. ಹಿಂದೂ ಮಹಾಸಭಾ ನಾಯಕರು ಹಾಕಿರುವ ಬ್ಯಾನರ್ ಗೆ ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಸಾವರ್ಕರ್ ಚಿತ್ರವುಳ್ಳ ಬ್ಯಾನರ್ ಹಾಕಿರುವುದನ್ನು ಕೆಲ ಕಾಂಗ್ರೆಸ್ ನಾಯಕರು ಮಂಗಳವಾರ ಪ್ರತಿಭಟನೆಯ ಮೂಲಕ ವಿರೋಧಿಸಿದ್ದರು. 24 ಗಂಟೆಗಳ ಗಡುವು ನೀಡಿದ್ದು ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಈ ಬೆಳವಣಿಗೆಯನ್ಬು ಖಂಡಿಸಿ ಇಂದು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿತು. ಮಧ್ಯಾಹ್ನ 11:30 ಸುಮಾರಿಗೆ ಬ್ರಹ್ಮಗಿರಿ ಸರ್ಕಲ್ ಗೆ ಬಂದು ಸಾವರ್ಕರ್ ಚಿತ್ರವಿರುವ ಬ್ಯಾನರ್ ಗೆ ಪುಷ್ಪಾರ್ಚನೆ ನಡೆಸಿದ ಯುವ ಮೋರ್ಚಾ ಕಾರ್ಯಕರ್ತರು ಅಲ್ಲಿಂದ ನೇರವಾಗಿ ಕಾಂಗ್ರೆಸ್ ಕಚೇರಿಯತ್ತ ಧಾವಿಸಿದರು. ಸುಮಾರು 100 ಮೀಟರ್ ದೂರದಲ್ಲಿರುವ ಕಾಂಗ್ರೆಸ್ ಕಚೇರಿಗೆ ನುಗ್ಗಲು ಪ್ರಯತ್ನಿಸಿದರು. ಕಾಂಗ್ರೆಸ್ ಗೆ ಧಿಕ್ಕಾರ ಕೂಗುತ್ತಾ ಕಚೇರಿ ಒಳಗೆ ದಾಳಿ ಇಡಲು ಮುಂದಾದಾಗ ಪೊಲೀಸರು ತಡೆಯೊಡ್ಡಿದರು.

ಕಾಂಗ್ರೆಸ್ ಕಚೇರಿಗೆ ಬಾಗಿಲು ಹಾಕಿ ಬಿಜೆಪಿ ಯುವ ಮೋರ್ಚಾ ಸದಸ್ಯರು ಕಚೇರಿ ಒಳಗೆ ನುಗ್ಗದಂತೆ ತಡೆದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು. ಬಳಿಕ ರಸ್ತೆಯಲ್ಲಿ ಕುಳಿತ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.ಸಾವರ್ಕರ್  ಅವರ ದೇಶಪ್ರೇಮವನ್ನು ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಹಿಂದೂ ಮುಖಂಡ ಯಶ್ಪಾಲ್ ಸುವರ್ಣ  - ಸಿದ್ದರಾಮಯ್ಯ ಮನೆಗೂ ಸಾವರ್ಕರ್ ಚಿತ್ರ: ಹಿಂದೂ ಮುಖಂಡ ಯಶ್ಪಾಲ್ ಸುವರ್ಣ ಸಾವರ್ಕರ್ ಚಿತ್ರವುಳ್ಳ ಬ್ಯಾನರ್ ಗೆ ಹಾರ ಅರ್ಪಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.ಪಿಎಫ್ಐ ಸಂಘಟನೆ ಈ ದೇಶದ ಅನಾಗರಿಕ ಸಂಘಟನೆ. ಯಾರು ದೇಶಪ್ರೇಮಿ ಎಂದು PFI, ಎಸ್ಡಿಪಿಐಗೆ ಗೊತ್ತಿಲ್ಲ.ಕಾಂಗ್ರೆಸ್ ಡೋಂಗಿ ದೇಶಭಕ್ತರನ್ನು ಇಟ್ಟುಕೊಂಡಿದೆ ಎಂದು ಟೀಕಿಸಿದರು.

ಮುಂದಿನ ದಿನಗಳಲ್ಲಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪುತ್ಥಳಿಯನ್ನು ಅನಾವರಣ ಮಾಡುತ್ತೇವೆ. ಕಾಂಗ್ರೆಸ್ ನಾಯಕರ ಮನೆ  ಅಂಗಳದಲ್ಲಿ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂದರು .

ಅಂದು ಜಿನ್ನಾ ದೇಶ ವಿಭಜನೆ ಮಾಡಿದರು. ಸಿದ್ದರಾಮಯ್ಯ ಜಿನ್ನಾನ ಮತ್ತೊಂದು ರೂಪ. ಸಿದ್ದರಾಮಯ್ಯ ಮತ್ತೆ ದೇಶ ವಿಭಜನೆ ಮಾಡಲು ಹೊರಟಿದ್ದಾರೆ.ಸಿದ್ದರಾಮಯ್ಯ ಅರಳು-ಮರಳಿನ ಹೇಳಿಕೆಯನ್ನ ಕೊಟ್ಟಿದ್ದಾರೆ. ಸಿದ್ದರಾಮಯ್ಯನ ಮನೆ ಅಂಗಳದಲ್ಲೂ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂದು ಎಚ್ಚರಿಸಿದರು.

ಹೋರಾಟದಿಂದ ಹಿಂದೆ ಸರಿಯಿತಾ ಕಾಂಗ್ರೆಸ್?
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಯುವಮೋರ್ಚಾ ಮುತ್ತಿಗೆ ವಿಚಾರ ವಾಗಿ ಕಾಂಗ್ರೆಸ್ ಪಕ್ಷ ತಟಸ್ಥ ಧೋರಣೆ ತಡೆದಿದೆ. ಈ ಕುರಿತು ಮಾತನಾಡಿರುವ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸಾವರ್ಕರ್ ಕಟೌಟ್ ತೆಗೆಯಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್ ಹಾಕಿದ್ದ ಬ್ಯಾನರನ್ನು ಬಿಜೆಪಿ ಆಡಳಿತದ ನಗರಸಭೆ  ಪುಡಿಪುಡಿ ಮಾಡಿ ಬಿಸಾಕಿತ್ತು‌. ಅನುಮತಿಯಿಲ್ಲದೆ ಹೇಗೆ ಬ್ಯಾನರ್ ಹಾಕಿದ್ದೀರಿ ಎಂದು ಕೇಳಲು ನಮ್ಮ ಕಾರ್ಯಕರ್ತರು ಹೋಗಿದ್ದಾರೆ ಅಷ್ಟೇ ಎಂದರು.

ಟಿಪ್ಪು Vs ಸಾವರ್ಕರ್ ಫೋಟೋ ವಾರ್: ಶಿವಮೊಗ್ಗ ಘರ್ಷಣೆ ಹಿಂದಿದೆಯಾ SDPI

 

ಯಾರದ್ದೇ ಕಟೌಟ್ ಹಾಕಿದರೂ ಕಾಂಗ್ರೆಸ್ ವಿರೋಧಿಸುವುದಿಲ್ಲ. ಬ್ಯಾನರ್ ಹಾಕುವುದು ಅವರವರ ಇಚ್ಛೆ. ನಾವು ಸಾವರ್ಕರ್ ಕಟೌಟ್ ಹಾಕಿಲ್ಲ‌. ಹಾಕುವುದೂ ಇಲ್ಲ‌.ನಾವು ಮಹಾತ್ಮ ಗಾಂಧಿ ಜವಾಹರ್ ಲಾಲ್ ನೆಹರು ಕಟೌಟ್ ಹಾಕುವವರು. ಬಿಜೆಪಿಯವರು ನಮ್ಮ ಕಚೇರಿಗೆ ಮುತ್ತಿಗೆ ಹಾಕಿಲ್ಲ ಅಂಗಳಕ್ಕೆ ಬಂದು ಹೋಗಿದ್ದಾರೆ.ಪೊಲೀಸರು ಜೊತೆಗಿರುವಾಗ ಮುತ್ತಿಗೆ ಹಾಕ್ಲಿಕೆ ಆಗ್ತದಾ? ಎಂದು ಪ್ರಶ್ನಿಸಿದ್ದಾರೆ.

ಸಾವರ್ಕರ್ ವಿಚಾರದಲ್ಲಿ ರಾಜ್ಯದೆಲ್ಲೆಡೆ ಗದ್ದಲಕ್ಕೆ ಪ್ಲಾನ್: ರಾಜ್ಯ ಸರ್ಕಾರಕ್ಕೆ ಇಂಟೆಲಿಜೆನ್ಸ್ ರಿಪೋರ್ಟ್

ಬ್ಯಾನರ್ ಹಾಕಲು ಪರವಾನಿಗೆ ಪಡೆದಿದ್ದರೆ ಹಾಕಲಿ.ಗೋಡ್ಸೆ ಬೋರ್ಡ್ ಹಾಕಿದಾಗಲೂ ಜಿಲ್ಲಾ ಕಾಂಗ್ರೆಸ್ ಮಾತನಾಡಲಿಲ್ಲ. ಕಾಂಗ್ರೆಸ್ ನಾಯಕರ ಮನೆಮನೆಗೆ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂಬ ಬಿಜೆಪಿ ನಾಯಕರ ಎಚ್ಚರಿಕೆ ವಿಚಾರವಾಗಿ ಉತ್ತರಿಸಿ, ನಮ್ಮ ಮನೆಯ ಮುಂದೆ ಸಾವರ್ಕರ್ ಕಟೌಟ್ ಹಾಕಲಿ ಬಿಡಿ  ನಮ್ಮದೇನು ಅಡ್ಡಿ ಇಲ್ಲ‌. ಅವರು ಸಾವರ್ಕರರನ್ನು ನಂಬುವವರು, ಧೈರ್ಯಕ್ಕೆ ಸುಭಾಷ್ಚಂದ್ರಬೋಸ್ ಅವರನ್ನು ಕೂಡಾ ಸೇರಿಸಿಕೊಂಡಿದ್ದಾರೆ. ನಾವು ಗಾಂಧೀಜಿ ನೆಹರು ನೇತಾಜಿ ಭಗತ್ ಸಿಂಗ್ ಅವರನ್ನು ನಂಬುವವರು.ನನಗೆ ಸಾವರ್ಕರ್ ಬಗ್ಗೆ ಜಾಸ್ತಿ ಗೊತ್ತಿಲ್ಲ. ಇತ್ತೀಚಿನ ದಿನದಲ್ಲಿ ಅವರ ಹೆಸರನ್ನು ಹೇಳುತ್ತಿದ್ದೇನೆ ಅಷ್ಟೇ ಎಂದು ವ್ಯಂಗ್ಯವಾಡಿದರು.

click me!