
ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಹಾಗೂ ಅದೇ ವಲಯದ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಕಾಡಾನೆ ದಂತ ನಾಪತ್ತೆ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ.
ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಮತ್ತು ಕಾಡಾನೆ ದಂತ ನಾಪತ್ತೆಯಾಗಿರುವುದು ಗಂಭೀರ ವಿಚಾರ. ಹುಲಿ ಸಂರಕ್ಷಿತ ಪ್ರದೇಶದೊಳಗೆ ಈ ರೀತಿಯ ಪ್ರಕರಣ ನಡೆದಿರುವುದು ಅರಣ್ಯ ಇಲಾಖೆಯ ಗಸ್ತು ವ್ಯವಸ್ಥೆ, ಮೇಲ್ವಿಚಾರಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅರಣ್ಯ ಪ್ರದೇಶದೊಳಗೆ ಕಳ್ಳಬೇಟೆಗಾರರು ಪ್ರವೇಶಿಸಿ ಈ ರೀತಿಯ ಕೃತ್ಯ ಎಸಗಲು ಹೇಗೆ ಸಾಧ್ಯ? ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ? ಅರಣ್ಯ ಗಸ್ತು ಮತ್ತು ನಿಗಾ ವ್ಯವಸ್ಥೆಯಲ್ಲಿ ಲೋಪಗಳಿವೆಯೇ ಎಂಬುದನ್ನು ಪತ್ತೆ ಮಾಡಬೇಕಿದೆ.
ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವುದಕ್ಕೆ ನೈಜ ಕಾರಣಗಳು, ಅರಣ್ಯ ಪ್ರದೇಶದಲ್ಲಿ ಉರುಳನ್ನು ಅಳವಡಿಸಿದವರು ಯಾರು? ಕಾಡಾನೆ ದಂತ ಹೇಗೆ ನಾಪತ್ತೆಯಾಗಿವೆ ಹಾಗೂ ಈ ಕೃತ್ಯದಲ್ಲಿ ಕಳ್ಳ ಬೇಟೆಗಾರರ ಕೈವಾಡವಿದೆಯೇ ಎಂಬುದರ ಬಗ್ಗೆ ವೈಜ್ಞಾನಿಕ ಮತ್ತು ಸಾಕ್ಷಾಧಾರಿತ ತನಿಖೆ ನಡೆಸಬೇಕು. ಎರಡೂ ಘಟನೆ ನಡುವೆ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸಬೇಕು. ಲಭ್ಯವಿರುವ ಮರಣೋತ್ತರ ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಇತರ ಸಂಬಂಧಿತ ವರದಿಗಳನ್ನು ಪಡೆದು ತನಿಖೆಯಲ್ಲಿ ಪರಿಗಣಿಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಘಟನೆ ನಡೆದ ಸ್ಥಳಗಳನ್ನು ಖುದ್ದು ಪರಿಶೀಲಿಸಿ ಲಭ್ಯವಿರುವ ಭೌತಿಕ ಸಾಕ್ಷ್ಯಗಳು, ಛಾಯಾಚಿತ್ರಗಳು, ಸಿಬ್ಬಂದಿ ಹೇಳಿಕೆಗಳು, ಗಸ್ತು ಪುಸ್ತಕಗಳು ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು. ತನಿಖೆ ಸಂದರ್ಭದಲ್ಲಿ ಯಾವುದೇ ಸಾಕ್ಷ್ಯನಾಶವಾಗದಂತೆ ಗಮನಹರಿಸಬೇಕು. ಸಂಬಂಧಪಟ್ಟ ಅರಣ್ಯಾಧಿಕಾರಿ, ಸಿಬ್ಬಂದಿ ತಮ್ಮ ಕರ್ತವ್ಯ ಸಮರ್ಪಕವಾಗಿ ನಿಭಾಯಿಸಿದ್ದಾರೆಯೇ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಮೇಲ್ವಿಚಾರಣೆ ಕೊರತೆ ಹಾಗೂ ಕರ್ತವ್ಯಲೋಪ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.
ಅಲ್ಲದೆ, ಮುಂದಿನ ಒಂದು ವಾರದಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡಬೇಕು. ಇನ್ನು ಮುಂದೆ ರಾಜ್ಯದ ಎಲ್ಲ ಡಿಸಿಎಫ್, ಎಸಿಎಫ್ಗಳು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ ನಡೆಸಬೇಕು. ಆ ಪರಿಶೀಲನಾ ವರದಿಯನ್ನು ತನಿಖಾ ವರದಿಯೊಂದಿಗೆ ಲಗತ್ತಿಸಬೇಕು ಎಂದು ನಿರ್ದೇಶಿಸಿದರು.