ಡ್ರಿಪ್ಸ್ ತೆಗೆವಾಗ 6 ತಿಂಗಳ ಮಗುವಿನ ಕೈ ಬೆರಳು ಕಟ್: ಖಾಸಗಿ ಆಸ್ಪತ್ರೆ ವಿರುದ್ಧದ ಕೇಸ್‌ ರದ್ದತಿಗೆ ಹೈಕೋರ್ಟ್‌ ನಕಾರ

Published : Oct 16, 2026, 07:49 AM IST
new born baby

ಸಾರಾಂಶ

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡ್ರಿಪ್ ತೆಗೆಯುವಾಗ ಆರು ತಿಂಗಳ ಮಗುವಿನ ಕಿರುಬೆರಳು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ತಜ್ಞರ ನೆರವಿನೊಂದಿಗೆ ವಸ್ತುನಿಷ್ಠ ತನಿಖೆ ನಡೆಸುವಂತೆ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಬೆಂಗಳೂರು: ಆರು ತಿಂಗಳ ಹೆಣ್ಣು ಮಗುವಿನ ಕೈಯಿಂದ ಡ್ರಿಪ್ ತೆಗೆಯುವಾಗ ಕಿರುಬೆರಳು ಕತ್ತರಿಸಿದ ಆರೋಪ ಸಂಬಂಧ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಆಡಳಿತ ಮತ್ತು ವೈದ್ಯರು ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಎಫ್‌ಐಆರ್‌ ರದ್ದು ಕೋರಿ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ವೈದ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು ಅರ್ಜಿ ವಜಾಗೊಳಿಸಿದರು.

ಘಟನೆಯ ಬಳಿಕ ಮಗುವನ್ನು ನಾಲ್ಕು ಗಂಟೆಗಳ ಕಾಲ ತುರ್ತು ಚಿಕಿತ್ಸಾ ವಿಭಾಗದಲ್ಲಿರಿಸಲಾಗಿತ್ತು. ಈ ವೇಳೆ ಏನಾಯಿತು ಎಂಬುದು ತಿಳಿಯಬೇಕಿದೆ. ಮಗುವಿನ ಆರೈಕೆಯಲ್ಲಿ ವೈದ್ಯರು ಅಗತ್ಯ ಮುನ್ನೆಚ್ಚರಿಕೆ ವಹಿಸದಿದ್ದರೆ ಅಥವಾ ನಿಗದಿತ ವೈದ್ಯಕೀಯ ಶಿಷ್ಟಾಚಾರ ಅನುಸರಿಸದಿದ್ದರೆ ಅದು ನಿರ್ಲಕ್ಷ್ಯದ ಪ್ರಕರಣವಾಗಬಹುದು. ಹಾಗಾಗಿ, ಪ್ರಕರಣದ ಬಗ್ಗೆ ವಸ್ತುನಿಷ್ಠ ತನಿಖೆ ನಡೆಸಬೇಕು. ಇದು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೇ ಎಂಬುದನ್ನು ನಿರ್ಧರಿಸಲು ತನಿಖಾಧಿಕಾರಿ ವಿಷಯ ತಜ್ಞರ ನೆರವು ಪಡೆದು, ನಂತರ ಸೂಕ್ತ ವರದಿ ಸಲ್ಲಿಸಬೇಕು ಎಂದು ಪೊಲೀಸರಿಗೆ ಪೀಠ ನಿರ್ದೇಶಿಸಿದೆ.

ಅನಾರೋಗ್ಯದ ಕಾರಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಡ್ರಿಪ್ ಹಾಕಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯರು ಸೂಚಿಸಿದ ಬಳಿಕ ನರ್ಸ್ ಡ್ರಿಪ್ ತೆಗೆಯುವಾಗ ಆಕಸ್ಮಿಕವಾಗಿ ಮಗುವಿನ ಕಿರುಬೆರಳು ಕತ್ತರಿಸಿದೆ ಎನ್ನಲಾಗಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125(ಬಿ) ಅಡಿಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಅರ್ಜಿ ಸಲ್ಲಿಸಿದ್ದರು.

ಘಟನೆ ಹಿನ್ನೆಲೆ

ಉದಯನಗರ ನಿವಾಸಿ ವಿಜಯ್ ಕುಮಾರ್‌ ಎಂಬುವರ ಪುತ್ರ ಬಾಲಕುಮಾರ್‌ ಎಂಬ 6 ತಿಂಗಳ ಮಗುವಿನ ಎಡಗೈನ ಕೊನೆ ಬೆರಳು ತುಂಡಾಗಿದೆ. ಈ ಸಂಬಂಧ ವಿಜಯ್‌ ಕುಮಾರ್ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ವಿಜಯಕುಮಾರ್ ಪುತ್ರ ಬಾಲಕುಮಾರ್‌ಗೆ ಶೀತ ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಫೆ.19ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ತಜ್ಞೆಯೊಬ್ಬರು ಚಿಕಿತ್ಸೆ ನೀಡುತ್ತಿದ್ದರು. ಫೆ.24ರಂದು ಮಗುವನ್ನು ಡಿಸ್ಚಾರ್ಜ್ ಮಾಡಲು ವೈದ್ಯೆ ಹೇಳಿದ್ದರು. ಅದರಂತೆ ನರ್ಸ್‌ ಮಗುವಿಗೆ ಹಾಕಿದ್ದ ಡ್ರಿಪ್ಸ್‌ ಅನ್ನು ತೆಗೆದು ಹಾಕುವಾಗ ಬಾಲಕುಮಾರ್‌ನ ಎಡಗೈನ ಕೊನೆ ಬೆರಳನ್ನು ಕತ್ತರಿಸಿದ್ದರು . ಅದರಿಂದ ಮಗುವಿಗೆ ತೀವ್ರ ನೋವು ಹಾಗೂ ಗಾಯವಾಗಿದೆ. ನಿರ್ಲಕ್ಷ್ಯ ವಹಿಸಿದ ನರ್ಸ್‌ ಅನಿತಾ, ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ವಿಜಯ್ ಕುಮಾರ್ ದೂರು ನೀಡಿದ್ದರು.

PREV
Read more Articles on
click me!

Recommended Stories

ಕುಮಾರಸ್ವಾಮಿ ಮೇಲೆಯೂ ಸ್ಟಿಂಗ್? 'ಸಂಚಿಗೆ ಬಲಿಯಾಗಲು ನಾನು ರೇವಣ್ಣ ಅಲ್ಲ' ಅಂದಿದ್ದೇಕೆ ಹೆಚ್‌ಡಿಕೆ?
15 ವರ್ಷದಿಂದ ಸಿಗದ ಜಾತಿ ಸಿಂಧುತ್ವಸರ್ಟಿಫಿಕೆಟ್‌: ಉತ್ತರ ಕನ್ನಡ ಜಿಲ್ಲಾಡಳಿತ ವಿರುದ್ಧ ಹೈಕೋರ್ಟ್‌ ಆಕ್ರೋಶ