INS Samarthak: ಕಾರವಾರದಲ್ಲಿ ನೌಕಾಪಡೆಗೆ ಸೇರಲಿದೆ ಸ್ವದೇಶಿ ನಿರ್ಮಿತ ಬೃಹತ್ ನೌಕೆ! 'ಪ್ರಚಂಡ ಪುಂಡರೀಕರು’ ಅಂದ್ರೆ ಯಾರು?

Kannadaprabha News   | Kannada Prabha
Published : Oct 16, 2026, 06:51 AM IST
INS Samarthak

ಸಾರಾಂಶ

ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಬಹುಉದ್ದೇಶದ ನೌಕೆ 'ಐಎನ್‌ಎಸ್ ಸಮರ್ಥಕ್' ಕಾರವಾರದ ನೌಕಾನೆಲೆಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ. ಮೇಕ್ ಇನ್ ಇಂಡಿಯಾ ಅಡಿ ನಿರ್ಮಿಸಲಾದ ಈ ನೌಕೆಯು ಸಮುದ್ರ ಕಣ್ಗಾವಲು, ವಿಪತ್ತು ಪರಿಹಾರ, ರಕ್ಷಣಾ ಕಾರ್ಯಾಚರಣೆಗಳಂತಹ ಬಹುಮುಖ್ಯ ಸಾಮರ್ಥ್ಯಗಳನ್ನು ಹೊಂದಿದೆ.

 ಕಾರವಾರ (ಅ.16): ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಬಹುಉದ್ದೇಶದ ನೌಕೆ ಐಎನ್‌ಎಸ್ ಸಮರ್ಥಕ್ ಅನ್ನು ಶುಕ್ರವಾರ ಕಾರವಾರದ ನೌಕಾನೆಲೆಯಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಗುವುದು. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಹಿರಿಯ ನೌಕಾಪಡೆ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳು, ಗಣ್ಯರು ಹಾಗೂ ನೌಕೆಯನ್ನು ನಿರ್ಮಿಸಿದ ಲಾರ್ಸನ್ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ) ಸಂಸ್ಥೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿ ನಿರ್ಮಿಸಿದ ಯುದ್ಧ ನೌಕೆ

ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿ ತಮಿಳುನಾಡಿನ ಕಟ್ಟುಪಳ್ಳಿಯಲ್ಲಿರುವ ಎಲ್‌ ಆ್ಯಂಡ್‌ ಟಿ ಸಂಸ್ಥೆ ಈ ನೌಕೆಯನ್ನು ನಿರ್ಮಿಸಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿರುವ 4 ಬಹು ಉದ್ದೇಶದ ನೌಕೆಗಳ ಪೈಕಿ ಐಎನ್‌ಎಸ್ ಸಮರ್ಥಕ್ ಮೊದಲನೆಯದಾಗಿದೆ. ಇದರ ಸೇರ್ಪಡೆಯು ದೇಶದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಯತ್ನಕ್ಕೆ ಮಹತ್ವದ ಕೊಡುಗೆಯಾಗಲಿದೆ.

ಐಎನ್‌ಎಸ್ ಸಮರ್ಥಕ್ ಸಾಮರ್ಥ್ಯ

ಸಮುದ್ರ ಕಣ್ಗಾವಲು ಮತ್ತು ಗಸ್ತು ಕಾರ್ಯಾಚರಣೆಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಈ ನೌಕೆ, ಕಡಿಮೆ ತೀವ್ರತೆಯ ಸಮುದ್ರ ಕಾರ್ಯಾಚರಣೆಗಳು, ಗುರಿ ನಿಯೋಜನೆ ಹಾಗೂ ವಿವಿಧ ವ್ಯವಸ್ಥೆಗಳ ಪರೀಕ್ಷೆಗಳಲ್ಲಿ ಬಳಸಲು ಅನುಕೂಲಕರವಾಗಿದೆ. ಮಾನವರಹಿತ ಮತ್ತು ಸ್ವಾಯತ್ತ ವ್ಯವಸ್ಥೆಗಳಿಗೆ ತಾಯಿನೌಕೆಯಾಗಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಇದರೊಂದಿಗೆ ಮಾನವೀಯ ನೆರವು, ವಿಪತ್ತು ಪರಿಹಾರ, ರಕ್ಷಣಾ ಕಾರ್ಯಾಚರಣೆ, ಮುಳುಗಿದ ವಸ್ತುಗಳ ಪತ್ತೆ ಮತ್ತು ರಕ್ಷಣೆ ಹಾಗೂ ಆಸ್ಪತ್ರೆ ನೌಕೆಯಾಗಿ ಸೇವೆ ಸಲ್ಲಿಸುವ ಸಾಮರ್ಥ್ಯವೂ ಇದೆ. ಸವಾಲಿನ ಸಮುದ್ರ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸ್ವದೇಶಿ ಸಂವೇದಕಗಳು, ಶಸ್ತ್ರಾಸ್ತ್ರಗಳು ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಇದರಲ್ಲಿ ಅಳವಡಿಸಲಾಗಿದೆ.

100 ಮೀಟರ್‌ಗಿಂತಲೂ ಹೆಚ್ಚು ಉದ್ದವಿರುವ ಐಎನ್‌ಎಸ್ ಸಮರ್ಥಕ್ ಸುಮಾರು 5,000 ಟನ್ ತೂಕ ಹೊಂದಿದ್ದು, 7,200 ನಾಟಿಕಲ್ ಮೈಲುಗಳಿಗಿಂತಲೂ ಅಧಿಕ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಭಾರತೀಯ ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.

ಬಹುಉದ್ದೇಶದ ಹಾಗೂ ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ ನೌಕೆಯಾಗಿರುವ ಸಮರ್ಥಕ್, ವಿಧ್ವಂಸಕ ನೌಕೆಗಳು, ಯುದ್ಧನೌಕೆಗಳು ಮತ್ತು ವಿಮಾನವಾಹಕ ನೌಕೆಗಳಂತಹ ಪ್ರಮುಖ ಸಮರ ನೌಕೆಗಳನ್ನು ಅವುಗಳ ಮುಖ್ಯ ಕಾರ್ಯಾಚರಣೆಗಳಿಗೆ ಬಳಸಲು ಹೆಚ್ಚಿನ ಅವಕಾಶ ಕಲ್ಪಿಸಲಿದೆ. ಗುರಿ ನಿಯೋಜನೆ, ಸಿಬ್ಬಂದಿ ತರಬೇತಿ, ಸಮುದ್ರ ಕಣ್ಗಾವಲು, ಸರಕು ಸಾಗಣೆ ಹಾಗೂ ಅಗತ್ಯ ನೆರವು ಒದಗಿಸುವ ಕಾರ್ಯಗಳಲ್ಲಿಯೂ ಇದು ಪ್ರಮುಖ ಪಾತ್ರ ವಹಿಸಲಿದೆ.

ಐಎನ್‌ಎಸ್ ಸಮರ್ಥಕ್‌ನ ಲಾಂಛನದಲ್ಲಿ ಆಕ್ರಮಣಕಾರಿ ಭಂಗಿಯಲ್ಲಿರುವ ಭಾರತೀಯ ಆನೆಯ ಚಿತ್ರವಿದ್ದು, ಅದು ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತದೆ. ಈ ನೌಕೆಯ ಸಿಬ್ಬಂದಿಯನ್ನು ‘ಪ್ರಚಂಡ ಪುಂಡರೀಕರು’ ಎಂದು ಕರೆಯಲಾಗುತ್ತದೆ. ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಷ್ಟದಿಗ್ಗಜಗಳಲ್ಲಿ ಪುಂಡರೀಕನೂ ಒಬ್ಬನಾಗಿದ್ದು, ದಕ್ಷಿಣ-ಪೂರ್ವ ದಿಕ್ಕಿನ ರಕ್ಷಕನೆಂದು ಪರಿಗಣಿಸಲಾಗಿದೆ.

ಯಾವುದೇ ಕಾರ್ಯವನ್ನು ಯಾವುದೇ ಸಮಯದಲ್ಲಿ ನಿರ್ವಹಿಸಲು ಸಿದ್ಧವಾಗಿರುವುದು ಹಾಗೂ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸುವ ಸಾಮರ್ಥ್ಯ ಹೊಂದಿರುವುದು ಐಎನ್‌ಎಸ್ ಸಮರ್ಥಕ್‌ನ ಪ್ರಮುಖ ವೈಶಿಷ್ಟ್ಯಗಳಾಗಿವೆ.

PREV
Read more Articles on
click me!

Recommended Stories

15 ವರ್ಷದಿಂದ ಸಿಗದ ಜಾತಿ ಸಿಂಧುತ್ವಸರ್ಟಿಫಿಕೆಟ್‌: ಉತ್ತರ ಕನ್ನಡ ಜಿಲ್ಲಾಡಳಿತ ವಿರುದ್ಧ ಹೈಕೋರ್ಟ್‌ ಆಕ್ರೋಶ
ಲಿವರ್ ಪೂಲ್ ವಿವಿ ಬೆಂಗಳೂರು ಕ್ಯಾಂಪಸ್ ಆರಂಭ, ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯ